×
Ad

ಮೈತ್ರಿ ಅಭ್ಯರ್ಥಿಗಳಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬೆಂಬಲ

Update: 2019-04-02 18:30 IST

ಬೆಂಗಳೂರು, ಎ.2: ರಾಜ್ಯದ 27 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ನೀಡಲು ಇತ್ತೀಚೆಗಷ್ಟೇ ನಡೆದ ನಮ್ಮ ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ತಿಳಿಸಿದರು.

ಮಂಗಳವಾರ ಶಿವಾಜಿನಗರದಲ್ಲಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರು ಲೋಕಸಭಾ ಕ್ಷೇತ್ರದ ಬಗ್ಗೆ ಇನ್ನೂ ನಾವು ತೀರ್ಮಾನ ಮಾಡಿಲ್ಲ. ಅಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಎರಡು ಮೂರು ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಆದುದರಿಂದ, ಜಾತ್ಯತೀತ ಶಕ್ತಿಗಳಿಗೆ ಬಲ ತುಂಬಲು, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಸಂವಿಧಾನಕ್ಕೆ ಕಂಟಕ ಬಂದಿದೆ. ಹಾಗಾಗಿ, ನಮ್ಮ ಪ್ರತಿಷ್ಠೆಗಳನ್ನು ಬದಿಗಿಟ್ಟು ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಿ, ಜಾತ್ಯತೀತ ಮತಗಳು ವಿಭಜನೆಯಾಗದಂತೆ ಪ್ರಯತ್ನ ಮಾಡುತ್ತಿದ್ದು, ನಾಗರಿಕರಲ್ಲಿಯೂ ಮನವಿ ಮಾಡುತ್ತೇವೆ, ಕೋಮುವಾದಿ ಬಿಜೆಪಿ ಮತ್ತೆ ಸರಕಾರ ರಚಿಸಲು ಅವಕಾಶ ನೀಡದಂತೆ ಕೋರುತ್ತೇವೆ ಎಂದು ತಾಹೇರ್ ಹುಸೇನ್ ತಿಳಿಸಿದರು.

ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನ್ ದುರ್ಬಲ ಆಗುತ್ತಿರುವುದು ದುರಾದೃಷ್ಟಕರ. ಉತ್ತರಪ್ರದೇಶವನ್ನೆ ಉದಾಹರಣೆಯಾಗಿ ತೆಗೆದುಕೊಂಡರೆ ಜಾತ್ಯತೀತ ಪಕ್ಷಗಳಾದ ಎಸ್ಪಿ, ಬಿಎಸ್ಪಿ, ಆರ್‌ಎಲ್‌ಡಿ ಪಕ್ಷಗಳು ಒಂದೆಡೆಯಾದರೆ, ಕಾಂಗ್ರೆಸ್ ಪಕ್ಷ ಮತ್ತೊಂದೆಡೆಯಿದೆ. ನಾಲ್ಕು ಪಕ್ಷಗಳು ಒಗ್ಗಟ್ಟಾಗಿ ಚುನಾವಣೆ ಎದುರಿಸಿದರೆ, ಹೆಚ್ಚಿನ ಲಾಭವಾಗುತ್ತದೆ ಎಂದು ಅವರು ಹೇಳಿದರು.

ದೇಶವು ಸರ್ವಾಧಿಕಾರದತ್ತ ದಾಪುಗಾಲಿಡುತ್ತಿದೆ. ಆರ್ಥಿಕ ಸ್ಥಿತಿ ತಳಮಟ್ಟಕ್ಕೆ ಕುಸಿದಿದೆ. ಇಂತಹ ಸಂದರ್ಭದಲ್ಲಿ ಫ್ಯಾಶಿಸ್ಟ್ ಮನೋಭಾವದ ಸರಕಾರವನ್ನು ಸೋಲಿಸುವುದಕ್ಕಾಗಿ ಜಾತ್ಯತೀತ ಪಕ್ಷವನ್ನು ಬೆಂಬಲಿಸುವುದು ಅತೀ ಅಗತ್ಯವಾಗಿದೆ ಎಂದು ತಾಹೇರ್ ಹುಸೇನ್ ತಿಳಿಸಿದರು.

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಜಂಗೀಪುರ ಲೋಕಸಭಾ ಕ್ಷೇತ್ರದಿಂದ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ.ಖಾಸೀಂ ರಸೂಲ್ ಇಲ್ಯಾಸ್, ಕುಚ್ ಬಿಹಾರ್ ಲೋಕಸಭಾ ಕ್ಷೇತ್ರದಿಂದ ಧನಂಜಯ್ ಬರ್ಮನ್, ಆಂಧ್ರಪ್ರದೇಶದ ವಿಶಾಖಪಟ್ಟಣ ಲೋಕಸಭಾ ಕ್ಷೇತ್ರದಿಂದ ಅಲ್ಲಿನ ರಾಜ್ಯಾಧ್ಯಕ್ಷ ಐ.ಎಂ.ಅಹ್ಮದ್ ಸ್ಪರ್ಧಿಸುತ್ತಿದ್ದಾರೆ ಎಂದು ಅವರು ಹೇಳಿದರು.

ದೇಶದ 11 ರಾಜ್ಯಗಳಲ್ಲಿ ಹಾಗೂ ನಮ್ಮ ರಾಜ್ಯದ 24 ಜಿಲ್ಲೆಗಳಲ್ಲಿ ಪಕ್ಷ ಸಕ್ರಿಯವಾಗಿದೆ. 30 ಗ್ರಾಮ ಪಂಚಾಯತ್ ಸದಸ್ಯರು, ಮಾನ್ವಿ, ಕೊಪ್ಪಳ ಹಾಗೂ ಉಳ್ಳಾಲದಲ್ಲಿ ನಮ್ಮ ನಗರಸಭೆ ಸದಸ್ಯರಿದ್ದಾರೆ. ನಮ್ಮ ಪಕ್ಷ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೇರಿದ ಪಕ್ಷವಲ್ಲ. ಇಲ್ಲಿ ಎಲ್ಲ ಜಾತಿ, ಧರ್ಮದವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News