ತೇಜಸ್ವಿ ಸೂರ್ಯ ಯುವಕ, ಕರೆದು ಬುದ್ದಿ ಹೇಳ್ತೀವಿ: ಅರವಿಂದ ಲಿಂಬಾವಳಿ

Update: 2019-04-02 13:52 GMT

ಬೆಂಗಳೂರು, ಎ. 2: ‘ನಾನು ಈಗಾಗಲೇ ಗೆದ್ದಿದ್ದೇನೆ, ಯಾರ ಪ್ರಚಾರವೂ ಅಗತ್ಯವಿಲ್ಲ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿರಲು ಸಾಧ್ಯವಿಲ್ಲ. ಆದರೂ ಯುವಕ, ಅತಿ ಉತ್ಸಾಹದಿಂದ ಹಾಗೇನಾದರೂ ಹೇಳಿದ್ದರೆ ಕರೆದು ಬುದ್ಧಿ ಹೇಳುತ್ತೇವೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಮಂಗಳವಾರ ಪಕ್ಷದ ಚುನಾವಣಾ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಗರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಬಿಬಿಎಂಪಿಯಲ್ಲಿ ಅವರದ್ದೇ ಅಧಿಕಾರವಿದೆ. ಆದರೆ ಯಾವುದೇ ಅಭಿವೃದ್ಧಿ ಮಾಡುತ್ತಿಲ್ಲ ಎಂದು ದೂರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಡೈರಿ ಬಗ್ಗೆ ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ನಮ್ಮ ಪಕ್ಷದ ಅಭಿವೃದ್ಧಿ ವಿಚಾರಗಳ ಮೇಲೆ ನಾವು ಪ್ರಚಾರ ಮಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್‌ನವರು ಸುಳ್ಳು ಆರೋಪಗಳಿಂದ ಮತದಾರರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಹುಲ್ ಸಲಹೆ ಪಡೆದು ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ತಿದ್ದುಪಡಿ ಮಾಡುವ ಸಾಧ್ಯತೆಗಳಿವೆ. ಕೇಂದ್ರ ಬಿಜೆಪಿ ಸರಕಾರವು ರೈತರ ಖಾತೆಗೆ ವಾರ್ಷಿಕವಾಗಿ ಆರು ಸಾವಿರ ರೂ.ಹಾಕುತ್ತಿದೆ. ಆದರೆ, ಕಾಂಗ್ರೆಸ್ಸಿನವರು ಈಗ 72 ಸಾವಿರ ರೂ.ಪಾವತಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಇನ್ನಾದರೂ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News