ಯುಗಾದಿ ಹಬ್ಬ: ಜೂಜು ಅಡ್ಡೆಗಳ ಮೇಲೆ ಚುನಾವಣಾ ಆಯೋಗದ ಹದ್ದಿನ ಕಣ್ಣು

Update: 2019-04-02 14:11 GMT

ಬೆಂಗಳೂರು, ಎ.2: ಯುಗಾದಿ ಹಬ್ಬದ ಆಸುಪಾಸು ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹೆಚ್ಚಾಗುವ ಸಂಭವವಿದ್ದು, ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ, ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. 

ಹಳೇ ಮೈಸೂರು ಭಾಗದಲ್ಲಿ ಯುಗಾದಿ ಹಬ್ಬದ ದಿನ ಜೂಜು ಆಡುವುದು ಸಾಮಾನ್ಯವಾಗಿದ್ದು, ಈ ದಿನಗಳಲ್ಲಿ ನೀತಿ ಸಂಹಿತೆ ಉಲ್ಲಂಘಿಸುವ ಸಂಭವ ಹೆಚ್ಚಿರುತ್ತದೆ. ಪ್ರತಿ ಗ್ರಾಮದಲ್ಲಿ ಶಾಲೆ, ಅರಳಿ ಕಟ್ಟೆ, ದೇವಸ್ಥಾನದ ಆವರಣದಲ್ಲಿ ನಡೆಯುವ ಜೂಜು ಅಡ್ಡೆಗಳನ್ನು ಗುರಿಯಾಗಿಸಿಕೊಂಡು ಪಕ್ಷಗಳ ನಾಯಕರು ಹಣದ ಆಮಿಷ ಒಡ್ಡಲು ಮುಂದಾಗಬಹುದು.

ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಫ್ಲೈಯಿಂಗ್ ಸ್ಕ್ವಾಡ್‌ಗಳು, ಸ್ಪಾಟಿಕ್ ಸರ್ವೆಲೆನ್ಸ್ ತಂಡಗಳು ಹಾಗೂ ಪೊಲೀಸ್ ಪ್ರಾಧಿಕಾರಿಗಳ ಸಿಬ್ಬಂದಿಗಳು ಮುಫ್ತಿನಲ್ಲಿ ಇದ್ದು, ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯುಗಾದಿ ಹಬ್ಬದಂದು ಮದ್ಯದ ಸರಬರಾಜು ಹೆಚ್ಚಿರುತ್ತದೆ. ಇದನ್ನು ದುರುಪಯೋಗ ಪಡಿಸಿಕೊಂಡು ಜನತೆಗೆ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ನೀಡುವ ಸಂಭವವು ಇರುತ್ತದೆ. ಹೀಗಾಗಿ ಅಬಕಾರಿ ಇಲಾಖೆಯ ಸಿಬ್ಬಂದಿಗಳು ಬಾರ್, ರೆಸ್ಟೋರೆಂಟ್‌ಗಳ ಮೇಲೆ ನಿಗಾ ವಹಿಸಲಿದ್ದಾರೆ ಎಂದು ಅವರು ಅಬಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News