ವಿಚಾರವಾದಿಗಳ ಮೇಲೆ ಅಕ್ರಮಣ ನಡೆಸುವ ಸನಾತನ ಸಂಘಗಳನ್ನು ನಿಷೇಧಿಸಿ: ಡಾ.ಕೆ.ಷರೀಫಾ

Update: 2019-04-02 17:29 GMT

ಬೆಂಗಳೂರು, ಎ.2: ಕೋಮುವಾದವನ್ನು ಪ್ರೋತ್ಸಾಹಿಸುವ, ಅಭಿವ್ಯಕ್ತಿ ಸ್ವಾತಂತ್ರವನ್ನು ದಮನ ಮಾಡುವ, ವಿಚಾರವಾದಿಗಳ ಮೇಲೆ ಆಕ್ರಮಣ ನಡೆಸುವಂತಹ ಎಲ್ಲ ಧರ್ಮಗಳ ಸನಾತನ ಸಂಘಟನೆಗಳ ಮೇಲೆ ನಿಷೇಧ ಹೇರಬೇಕು ಎಂದು ಹಿರಿಯ ಸಾಹಿತಿ ಡಾ.ಕೆ.ಷರೀಫಾ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ ವತಿಯಿಂದ ಸೌಹಾರ್ದ ಸಭಾಂಗಣದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಬೇಡಿಕೆಗಳ ಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಕಳೆದ 4-5 ವರ್ಷಗಳಿಂದ ಕೋಮುಗಲಭೆ ಹೆಚ್ಚಾಗಿದೆ. ಕೋಮುವಾದಕ್ಕೆ ಬೆಂಬಲ ನೀಡುವ ಸಂಘಟನೆಗಳು ಬೆಳೆಯುತ್ತಿದ್ದು, ವಿಚಾರವಾದಿಗಳ, ಬರಹಗಾರರ ಮೇಲೆ ಆಕ್ರಮಣ ನಡೆಸುತ್ತಿವೆ. ಆದರೆ, ಅಧಿಕಾರದಲ್ಲಿದ್ದ ಸರಕಾರ ಇವುಗಳ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ, ಬೆಂಬಲ ನೀಡುವ ಮೂಲಕ ಅವರ ಪರ ನಿಂತಿದ್ದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಈ ಲೋಕಸಭಾ ಚುನಾವಣೆಯಲ್ಲಿ ಕೋಮುವಾದ ಹಾಗೂ ಕೋಮುವಾದದ ಗಲಭೆಗಳನ್ನು ತಡೆಗಟ್ಟುವಂತಹ ಬಲಿಷ್ಠ ಕಾನೂನುಗಳನ್ನು ಜಾರಿ ಮಾಡುವ ಸಂಪೂರ್ಣ ಭರವಸೆ ನೀಡುವವರನ್ನು ಆಯ್ಕೆ ಮಾಡಬೇಕು. ಕೋಮು ಗಲಭೆಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕಾಯ್ದೆ ಜಾರಿಗೊಳಿಸಬೇಕು ಎಂದು ಹೇಳಿದರು. ಕೋಮು ಗಲಭೆಗಳಲ್ಲಿನ ಸಂತ್ರಸ್ಥರಿಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಅತ್ಯಂತ ಶೀಘ್ರವಾಗಿ ಪರಿಹಾರ ದೊರೆಯುವಂತೆ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ವರ್ಗಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಬೇಕು. ಸಾರ್ವಜನಿಕ ಬಾವಿ, ದೇವಸ್ಥಾನ, ಚಹಾ ಅಂಗಡಿ ಮೊದಲಾದ ಸಾರ್ವಜನಿಕ ಸ್ಥಳಗಳನ್ನು ಬಳಸಲು ತಡೆಯೊಡ್ಡುವುದನ್ನು, ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಕುವುದನ್ನು, ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವುದನ್ನೂ ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಗೆ ತರಬೇಕು ಎಂದರು.

ಪತ್ರಕರ್ತೆ ಆರ್.ಪೂರ್ಣಿಮಾ ಮಾತನಾಡಿ, ಮಹಿಳೆಯರಿಗಾಗಿ ಕೇಂದ್ರದಲ್ಲಿ ಅಧಿಕಾರ ನಡೆಸಿದ ಯಾವ ಸರಕಾರಗಳು ಯಾವುದೇ ಬಲಿಷ್ಠ ಕಾನೂನು ಮಾಡಲು ಸಾಧ್ಯವಾಗಿಲ್ಲ. ಬಲವಂತರಾಯ್ ಮೆಹ್ತಾ ಎಂಬುವವರು 1993 ರಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಮುಂದಾಗಿದ್ದರು. 1996 ರಲ್ಲಿ ದೇವೇಗೌಡ ಪ್ರಧಾನಿಯಾಗಿದ್ದ ಮೇಳೆ ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಬಗ್ಗೆ ಲೋಕಸಭೆಯಲ್ಲಿ ಮಸೂದೆ ಮಂಡಿಸಿದ್ದರು. ಆದರೆ ಈ ಮಸೂದೆ ಇದುವರೆಗೂ ಕಾಯ್ದೆಯಾಗಿ ಅನುಷ್ಠಾನಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲೋಕಸಭೆ, ವಿಧಾನಸಭೆಗಳಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿ ನೀಡುವ ಮೀಸಲಾತಿ ಕಾಯ್ದೆಯನ್ನು ಜಾರಿ ಮಾಡಬೇಕು. ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾಗವಹಿಸಲು ಮಹಿಳೆಯರಿಗೆ ಇರಬಹುದಾದ ಅಸಾಂವಿಧಾನಿಕ ಅಡೆತಡೆಗಳನ್ನು ತೆಗೆದುಹಾಕಿ ಶೇ.50ರಷ್ಟು ಮೀಸಲಾತಿ ಅನುಸಾರ ಮಹಿಳೆಯರು ಚುನಾವಣೆ ಎದುರಿಸಲು ಎಲ್ಲ ಅನುಕೂಲಗಳನ್ನು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News