×
Ad

ಏರ್‌ಪೋರ್ಟ್ ಮೆಟ್ರೋ ಯೋಜನೆಗೆ ಭೂಮಿ ಹಸ್ತಾಂತರ

Update: 2019-04-02 22:21 IST

ಬೆಂಗಳೂರು, ಎ.2: ಹೈಸ್ಪೀಡ್ ರೈಲು ಯೋಜನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರ ಸ್ವಾಧೀನ ಮಾಡಿಕೊಡಿದ್ದ ಭೂಮಿಯನ್ನು ಏರ್‌ಪೋರ್ಟ್ ಮೆಟ್ರೋ ಯೋಜನೆಗಾಗಿ ಬಿಎಂಆರ್‌ಸಿಎಲ್‌ಗೆ ಹಸ್ತಾಂತರ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 1.05 ಲಕ್ಷ ಚದರ ಮೀಟರ್ ಭೂಮಿಯು ಮೆಟ್ರೊ ಯೋಜನೆಗಾಗಿ ನೀಡಿದ್ದು, ಅದಕ್ಕಾಗಿ ಮೆಟ್ರೋ ನಿಗಮ ಪ್ರಾಧಿಕಾರಕ್ಕೆ ಸುಮಾರು 141 ಕೋಟಿ ರೂ. ಪಾವತಿಸಿದೆ. 2008 ರಲ್ಲಿ ರೈಲು ಯೋಜನೆಗಾಗಿ ಬಳ್ಳಾರಿ ರಸ್ತೆಯ ಎಸ್ಟಿಮ್ ಮಾಲ್‌ನಿಂದ ಟ್ರಂಪೆಟ್ ಜಂಕ್ಷನ್‌ವರೆಗೆ ಭೂಮಿಯನ್ನು ಪ್ರಾಧಿಕಾರವು ಸ್ವಾಧೀನಪಡಿಸಿಕೊಂಡಿತ್ತು. ಇದೇ ವೇಳೆ ಮೆಟ್ರೋ ಯೋಜನೆ ಪ್ರಗತಿಯಲ್ಲಿತ್ತು.

ವಿಮಾನ ನಿಲ್ದಾಣಕ್ಕೆ ಹೈ ಸ್ಪಿಡ್ ರೈಲು ಬದಲು ಮೆಟ್ರೋ ಮಾರ್ಗ ನಿರ್ಮಿಸುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಹೈ ಸ್ಪಿಡ್ ರೈಲು ಯೋಜನೆಯನ್ನು ಕೈ ಬಿಟ್ಟಿದ್ದರೂ ಸ್ವಾಧೀನಪಡಿಸಿಕೊಂಡಿದ್ದ ಭೂಮಿ ಪ್ರಾಧಿಕಾರದ ಬಳಿಯೇ ಇತ್ತು. ಇದೇ ಭೂಮಿಯನ್ನು ಮೆಟ್ರೋಗೆ ಬಳಸಿಕೊಳ್ಳಲು ನಿರ್ಧರಿಸಿದ್ದು, ಇದರಿಂದ ಭೂಸ್ವಾಧೀನ ಪ್ರಕ್ರಿಯೆಯ ಸಮಸ್ಯೆ ಪರಿಹಾರವಾದಂತಾಗಿದೆ.

2 ನೇ ಹಂತದ ಮೆಟ್ರೋ ಯೋಜನೆಯಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗ ನಿರ್ಮಾಣವಾಗುತ್ತಿದೆ. ನಾಗವಾರದ ಬಳಿಕ ಏರ್‌ಫೋರ್ಟ್ ಮಾರ್ಗ ನಿರ್ಮಾಣವಾಗಲಿದೆ. ಹೆಬ್ಬಾಳವನ್ನು ಹಾದುಹೋದ ಬಳಿಕ ಈ ಮಾರ್ಗ ಎಸ್ಟಿಮ್ ಮಾಲ್‌ನಿಂದ ಟ್ರಂಪೆಟ್‌ವರೆಗೆ ಸಾಗಲಿದೆ. ಹೆದ್ದಾರಿಯ ಬದಿಯಲ್ಲಿಯೇ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಈ ಸಂಪೂರ್ಣ ಭೂಮಿ ಹೆದ್ದಾರಿ ಪ್ರಾಧಿಕಾರದ ಬಳಿ ಇದ್ದು, ಅದನ್ನು ಬಿಎಂಆರ್ಸಿಎಲ್‌ಗೆ ನೀಡುವ ಪ್ರಕ್ರಿಯೆ ನಡೆಯಲಿದೆ.

ಅಂದಾಜು 10,584 ಕೋಟಿ ರೂ.ವೆಚ್ಚದ ಏರ್‌ಫೋರ್ಟ್ ಮೆಟ್ರೋ ಯೋಜನೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಬಳಿಕ ಇದಕ್ಕೆ ಕೇಂದ್ರ ಸರಕಾರದಿಂದ ಅನುಮೋದನೆ ದೊರೆಯಲಿದೆ. ಒಟ್ಟು 17 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿದ್ದು, 2023-24 ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕೆ.ಆರ್.ಪುರದಿಂದ ಹೆಬ್ಬಾಳದವರೆಗೆ ಹೊರವರ್ತುಲ ರಸ್ತೆಯಲ್ಲಿ ಪ್ರತಿ 1.4 ಕಿ.ಮೀ.ಗೆ ಒಂದರಂತೆ ಮೆಟ್ರೋ ನಿಲ್ದಾಣ ನಿರ್ಮಾಣವಾಗಲಿದೆ. ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ 26 ಕಿ.ಮೀ. ದೂರವಿದ್ದು, ಇಲ್ಲಿ 7 ಮೆಟ್ರೊ ನಿಲ್ದಾಣಗಳು ಬರಲಿವೆ. ಯಲಹಂಕ ವಾಯುನೆಲೆ ಬಳಿ ಭೂ ಮಟ್ಟದಲ್ಲಿ ಹಾಗೂ ಕೆಐಎ ಒಳಗೆ 2 ನೆಲದಾಳದ ಮೆಟ್ರೋ ನಿಲ್ದಾಣ ನಿರ್ಮಾಣಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News