ದುರ್ಬಲ ವರ್ಗದ ಪರ ಕಾರ್ಮಿಕ ಪಕ್ಷದ ಪ್ರಣಾಳಿಕೆ

Update: 2019-04-02 18:19 GMT

ಬೆಂಗಳೂರು, ಎ.2: ದೇಶದ ಎಲ್ಲ ದುರ್ಬಲ ಸಮಾಜಕ್ಕೆ ಪೂರಕವಾದ ಶಿಕ್ಷಣ, ಕಾರ್ಮಿಕ, ರೈತರಿಗೆ ಗೃಹ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಕರ್ನಾಟಕ ಕಾರ್ಮಿಕ ಪಕ್ಷ ಬಿಡುಗಡೆಗೊಳಿಸಿದೆ.

ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಬಸ್ ಪಾಸ್, ಸಮವಸ್ತ್ರ, ಶೂಗಳು, ಆಹಾರ, ವಿದ್ಯಾರ್ಥಿ ವೇತನ, ಪುಸ್ತಕ ಸಾಮಗ್ರಿಗಳು, ಸೇರಿದಂತೆ ಅನೇಕ ವಸ್ತುಗಳಿಗೆ ವಿನಾಯಿತಿ ನೀಡಲಾಗುವುದು. ಎಂಜಿನಿಯರಿಂಗ್, ವೈದ್ಯಕೀಯ, ಪಶು ವೈದ್ಯ, ಕೃಷಿ, ಸಂಸ್ಕೃತಿ ಕಲೆ ಮತ್ತು ಇತರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ, ಸಾರ್ವಜನಿಕ ಕ್ಷೇತ್ರದ ಕಾರ್ಮಿಕರಿಗೆ ಬಂಡವಾಳ ಶಾಹಿಗಳಿಂದ ದೂರವಿರಲು ನಿರ್ವಹಣೆಯ ಇಎಸ್‌ಐ ಸೌಲಭ್ಯ ಮಕ್ಕಳ ವಿದ್ಯಾಭ್ಯಾಸ, ವಸತಿ, ಆರೋಗ್ಯಕ್ಕೆ ಒತ್ತು ಮತ್ತು ಸರಕಾರಿ, ಅರೆ ಸರಕಾರಿ ಕ್ಷೇತ್ರಗಳಲ್ಲಿ ತಾತ್ಕಾಲಿಕ ಕೆಲಸಗಾರರನ್ನು ಖಾಯಂ ಗೊಳಿಸುವುದು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಾರ್ಮಿಕ ಕ್ಷೇತ್ರಕ್ಕೆ ನೀಡಲಾಗುವುದು.

ರೈತರು ಈ ದೇಶದ ಬೆನ್ನೆಲುಬು. ಕೃಷಿ ಪ್ರಧಾನವಾದ ದೇಶದ ಜನಸಂಖ್ಯೆಯಲ್ಲಿ ಶೇ.60 ರಷ್ಟು ಜನ ಕೃಷಿ ಅವಲಂಬಿಸಿದ್ದಾರೆ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಸಬ್ಸಿಡಿ ರೂಪದಲ್ಲಿ ರಸಗೊಬ್ಬರ, ಬಿತ್ತನೆ ಬೀಜ ವಿತರಣೆ, ಕೈಗಾರಿಕೆ ಹಾಗೂ ಬಂಡವಾಳ ಶಾಹಿಗಳಿಂದ ರೈತರು ಅಂತರ ಕಾಯ್ದುಕೊಳ್ಳುವುದು. ಕೃಷಿ ಉತ್ಪನ್ನಗಳ ನೇರ ಮಾರಾಟ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ರೈತ ಸಮುದಾಯಕ್ಕೆ ನೀಡುವುದರ ಜೊತೆಗೆ ಮಧ್ಯಮ ವರ್ಗದವರಿಗೆ ನಿವೇಶನ, ಮನೆ, ಅನಿಲ ಸರಬರಾಜು, ವಿದ್ಯುತ್, ಗುಣಮಟ್ಟದ ಆಹಾರ, ಬಾಡಿಗೆ ನಿಯಂತ್ರಣ ಮಾರ್ಪಾಡು ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು.

ಚಿನ್ನ ಮತ್ತು ಬೆಳ್ಳಿ ಪದಾರ್ಥಗಳಿಗೆ ಜಿಎಸ್‌ಟಿ ಶೇ.5 ರಷ್ಟು ಇಳಿಕೆ. ವಿದ್ಯಾರ್ಥಿಗಳು ಪುಸ್ತಕ ಹಾಗೂ ಇನ್ನಿತರೆ ವಸ್ತುಗಳನ್ನು ಖರೀದಿಸಲು ಯಾವುದೇ ರೀತಿಯ ಜಿಎಸ್‌ಟಿ ಹಾಕದೆ ನೇರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಟ್ಟಾರೆ ಸಮಗ್ರ ಅಭಿವದ್ಧಿಯ ಚಿಂತನೆಯೊಂದಿಗೆ ಕರ್ನಾಟಕ ಕಾರ್ಮಿಕ ಪಕ್ಷ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈಗ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯ ವಿಷಯಗಳನ್ನು ಅನುಷ್ಟಾನಗೊಳಿಸಲು ಬದ್ಧವಾಗಿದೆ ಎಂದು ಕರ್ನಾಟಕ ಕಾರ್ಮಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಖ್ತರ್ ಆಲಿ ಖಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News