ಟಾಗೋರ್ ವೈಸ್‌ರಾಯ್‌ಗೆ ಬರೆದಿದ್ದರು ಮಾರ್ಮಿಕ ಪತ್ರ...

Update: 2019-04-02 18:36 GMT

‘‘ಸಮಯ ಈಗ ಬಂದಿದೆ’’ ಎಂದು ವೈಸ್‌ರಾಯ್‌ಗೆ ಬರೆದ ಪತ್ರದಲ್ಲಿ ಟಾಗೋರ್, ‘‘ಗೌರವದ ಪದಕವು ಅಪಮಾನಕರ ಸನ್ನಿವೇಶದಲ್ಲಿ ನಮ್ಮನ್ನು ಅಸಮಂಜಸವಾಗಿ ಅಣಕಿಸುತ್ತಿದೆ’’ ಎಂದಿದ್ದರು. ಪತ್ರದಲ್ಲಿ ಹರಿತವಾದ ಪದಗಳನ್ನು ಬಳಸಿರುವ ಟಾಗೋರ್ ಹೀಗೆ ಮುಂದುವರಿಯುತ್ತಾರೆ. ‘‘ನಾನೀಗ ಎಲ್ಲ ರೀತಿಯ ವಿಶೇಷ ಬಿರುದು, ಪುರಸ್ಕಾರಗಳನ್ನು ಕಡಿದುಕೊಡು, ಮಾನವಜೀವಿಗಳಿಗೆ ಯೋಗ್ಯವಲ್ಲದ ತುಚ್ಛೀಕರಣದೊಂದಿಗೆ ನರಳುತ್ತಿರುವ ನನ್ನ ದೇಶದ ಜನತೆಯ ಜೊತೆ ನಿಲ್ಲುತ್ತೇನೆ’’ ಅಂತಿಮವಾಗಿ ಅವರು ವೈಸ್‌ರಾಯ್‌ಗೆ ‘‘...ನನ್ನನ್ನು ನೈಟ್‌ಹುಡ್ ಪದವಿಯಿಂದ ವಿಮೋಚನೆಗೊಳಿಸಿ’’ ಎಂದು ಬರೆದಿದ್ದರು. ಗೋಪಾಲಕೃಷ್ಣ ಗಾಂಧಿ

ಎಪ್ರಿಲ್ 13ಕ್ಕೆ ‘ಜಲಿಯನ್‌ವಾಲಾ ಬಾಗ್’ ಹತ್ಯಾಕಾಂಡದ ಕರಾಳ ಘಟನೆಗೆೆ 100 ವರ್ಷ ತುಂಬುತ್ತದೆ. ಒಂದು ವೇಳೆ ಒಂದು ಸ್ಥಳ ಅಥವಾ ಆವರಣವು ಇತಿಹಾಸದ ಬದಲಾವಣೆಯ ಸಂಕೇತವೆನಿಸಿಕೊಂಡಿದ್ದರೆ, ಅದು ಜಲಿಯನ್‌ವಾಲಾ ಬಾಗ್ ಎಂದು ನಿರ್ವಿವಾದವಾಗಿ ಹೇಳಿಕೊಳ್ಳಬಹುದಾಗಿದೆ. ಇದೇ ರೀತಿ ಎರಡು ಸಹಸ್ರಮಾನಗಳ ಹಿಂದೆ ಗೋಲ್ಗೊಥಾ, ಎಪ್ಪತ್ತು ವರ್ಷಗಳ ಹಿಂದೆ ಆ್ಯಶ್‌ವಿಟ್ಝ್, 1960ರಲ್ಲಿ ದಕ್ಷಿಣ ಆಫ್ರಿಕದ ಶಾರ್ಪ್ ವಿಲ್ಲೆ, 1989ರಲ್ಲಿ ಚೀನಾದ ತಿಯೆನ್ಮಾನ್ ಚೌಕ ಇತ್ಯಾದಿ ಸ್ಥಳಗಳು ಇತಿಹಾಸದ ಬದಲಾವಣೆಗೆ ಸಾಕ್ಷಿಗಳಾಗಿವೆ.

ಒಂದು ನೂರು ವರ್ಷಗಳು, ರಾಜಕೀಯ ಇತಿಹಾಸದ ಮಟ್ಟಿಗೆ ಒಂದು ಸುದೀರ್ಘವಾದ ಅವಧಿಯಾಗಿದೆ. ಯಾವುದೇ ಘಟನೆಯ ಮಹತ್ವವನ್ನು ಆನಂತರ ಸಂಭವಿಸಿದ ಇತರ ಘಟನಾವಳಿಗಳು ಮರೆಮಾಚಲು, ಇಷ್ಟು ಕಾಲಾವಧಿ ಸಾಕಾಗುತ್ತದೆ. ಆದರೆ ಅಮೃತಸರದ ಜಲಿಯನ್‌ವಾಲಾ ಬಾಗ್ ಘಟನೆಯ ವಿಷಯದಲ್ಲಿ ಹಾಗಾಗಲಿಲ್ಲ. 1919ರ ಎಪ್ರಿಲ್ 13ರಂದು ಅಮೃತಸರ ನಗರವು, ಅಕ್ಷರಶಃ ‘ಸಮಗ್ರ ಭಾರತ’ವಾಗಿ ಮಾರ್ಪಾಡುಗೊಂಡಿತು. ಆಕ್ರೋಶಭರಿತ, ರಕ್ತಸಿಕ್ತವಾದ ಆದರೆ, ಅಶ್ಚರ್ಯಕರವಾಗಿ ಹಾಗೂ ಅಭೂತಪೂರ್ವವಾಗಿ ದೃಢನಿಶ್ಚಯದಿಂದ ಕೂಡಿದ ಭಾರತ ಅದಾಗಿತ್ತು. ಜಲಿಯನ್‌ವಾಲಾ ಬಾಗ್ ಯಾವುದೇ ಘಟನೆ ಅಥವಾ ಸಂದರ್ಭದ ಸ್ಥಳವೆನಿಸಿಕೊಳ್ಳದೆ, ಅದೊಂದು ಯಾತನೆಯ ಸ್ಥಳವಾಗಿ ಬಿಟ್ಟಿತು. ಈ ಯಾತನೆಯು ಎಷ್ಟು ತೀವ್ರವಾಗಿತ್ತೆಂದರೆ, ಭಾರತದ ರಾಜಕೀಯ ಮನಸ್ಥಿತಿ, ಭಾರತೀಯರ ಯೋಚನಾ ಲಹರಿಯನ್ನು ಅದು ಬದಲಾಯಿಸಿಬಿಟ್ಟಿತು.

ಜಲಿಯನ್‌ವಾಲಾಬಾಗ್‌ನಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳ ಹತ್ಯಾಕಾಂಡ ನಡೆದ ಸಮಯದಲ್ಲಿ ಭಾರತದ ಖ್ಯಾತ ಸಾಹಿತಿ, ಕವಿ ರವೀಂದ್ರನಾಥ ಟಾಗೋರ್ ಅವರು ‘ಸರ್’ ಬಿರುದು ಹೊಂದಿದ್ದರು. ಅವರಿಗೆ ಆಗ ಸಾಹಿತ್ಯದ ನೊಬೆಲ್ ಪುರಸ್ಕಾರ ದೊರೆತು ಆರು ವರ್ಷಗಳು ಕಳೆದಿದ್ದವು. ಹತ್ಯಾಕಾಂಡಕ್ಕೆ ಒಂದು ದಿನ ಮುಂಚೆ ಅಂದರೆ 1919ರ ಎಪ್ರಿಲ್ 12ರಂದು ಅವರು ಶಾಂತಿನಿಕೇತನದಿಂದ ಮಹಾತ್ಮಾ ಗಾಂಧೀಜಿಯವರಿಗೆ ಪತ್ರವೊಂದನ್ನು ಬರೆದಿದ್ದರು. ಹೃದಯಸ್ಪರ್ಶಿಯಾದ ಈ ಪತ್ರದಲ್ಲಿ ಅವರು ‘‘ಸ್ವಾತಂತ್ರ ಮಹಾನ್ ಕೊಡುಗೆ’’ ಎಂದು ಯಾವುದನ್ನು ಬಣ್ಣಿಸಿದ್ದರೋ ಆ ಬಗ್ಗೆ ಮಾತನಾಡಿದ್ದರು.

 ‘‘.... ಭಾರತದ ಗೆಲುವಿನ ಅವಕಾಶವು, ಆಕ್ರಮಣ ತಮ್ಮ ಹಕ್ಕೆಂದು ಪ್ರತಿಪಾದಿಸಿ, ಆಕೆಯನ್ನು ಆಳುವ ಜನರಿಗಿಂತ ತಾನು ನೈತಿಕವಾಗಿ ಶ್ರೇಷ್ಠಳು ಎಂಬುದನ್ನು ಆಕೆ ಸಾಬೀತುಪಡಿಸಿದಾಗಲೇ ದೊರೆಯುತ್ತದೆ. ಆಕೆಯು ಇಚ್ಛಾಪೂರ್ವಕವಾಗಿ ತನ್ನ ಯಾತನೆಯ ವ್ರತವನ್ನು ಸ್ವೀಕರಿಸಿಕೊಳ್ಳಬೆೇಕು. ಈ ಯಾತನೆಯು ಆಕೆಯ ಶ್ರೇಷ್ಠತೆಯ ಕಿರೀಟವಾಗುತ್ತದೆ. ಒಳಿತಿನ ಮೇಲೆ ಸಂಪೂರ್ಣ ನಂಬಿಕೆಯಿರಿಸಿಕೊಂಡು ಆಕೆ, ಚೈತನ್ಯದ ಶಕ್ತಿಯನ್ನು ಅಣಕಿಸುವ ಅಹಂಕಾರದ ಮುಂದೆ ನಿಸ್ಸಂಕೋಚವಾಗಿ ನಿಂತುಕೊಳ್ಳಬೇಕಾಗಿದೆ’’.

ಕವಿಯಾದ ಟಾಗೋರ್ ಅವರು ಈ ಕವನದ ಸಾಲಿನೊಂದಿಗೆ ತಮ್ಮ ಪತ್ರವನ್ನು ಕೊನೆಗೊಳಿಸಿದರು. ‘‘ಸಾವಿನಲ್ಲಿ ನನಗೆ ಬದುಕಿನ ಮೇಲೆ, ಸೋಲಿನಲ್ಲಿ ನನಗೆ ಗೆಲುವಿನ ಮೇಲೆ, ನಿರಾಶೆಯ ಸೌಂದರ್ಯದಲ್ಲಿ ಅವಿತುಕೊಂಡಿರುವ ಶಕ್ತಿಯನ್ನು, ನೋವನ್ನು ಸ್ವೀಕರಿಸುವ ಆದರೆ ಅದನ್ನು ತೀರಿಸಲು ಒಲ್ಲದ ಘನತೆಯನ್ನು ನನಗೆ ಕೊಡು’’ ಎಂಬ ಕವನವನ್ನು ಅವರು ಬರೆದಿದ್ದರು.

ಪತ್ರದಲ್ಲಿ ಭವಿಷ್ಯಜ್ಞಾನವು ಎಷ್ಟು ಅಸಾಧಾರಣವಾದುದಾಗಿತ್ತೋ, ಅದರಲ್ಲಿನ ದೃಢತೆ ಕೂಡಾ ಅತ್ಯದ್ಭುತವಾದುದಾಗಿತ್ತು. ಮಹಾತ್ಮಾ ಗಾಂಧೀಜಿಯವರಿಗೆ ಕವಿ ರವೀಂದ್ರನಾಥ್ ಬರೆದ ಈ ಪತ್ರವು, ಜಲಿಯನ್‌ವಾಲಾ ಬಾಗ್‌ನಲ್ಲಿ ರಕ್ತಪಾತ ಸಂಭವಿಸಿದಾಗ ಬ್ರಿಟಿಶರ ಆಳ್ವಿಕೆಯ ಅಂಚೆ ದಾರಿಯಲ್ಲಿ ಹಾದುಹೋಗುತ್ತಿದ್ದಿರಬಹುದು.

ಅದೃಷ್ಟವಶಾತ್ ಆ ಪತ್ರವು ಸೆನ್ಸಾರ್‌ಗೊಳ್ಳದೆ ತನ್ನ ಗಮ್ಯಸ್ಥಾನವನ್ನು ತಲುಪಿತ್ತು. ಆ ಹೊತ್ತಿಗೆ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಘಟನೆಗಾಗಿ ಇಡೀ ದೇಶದ ಆತ್ಮ ರೋದಿಸುತ್ತಿತ್ತು. 1919ರ ಮೇ 30ರಂದು ರವೀಂದ್ರನಾಥ್ ಟಾಗೋರ್ ಮತ್ತೊಮ್ಮೆ ತನ್ನ ಪೆನ್ನನ್ನು ಎತ್ತಿಕೊಂಡರು. ಈ ಸಲ ಅವರು ಕೇವಲ ನೊಬೆಲ್ ಸಾಹಿತಿಯಾಗಿ ಮಾತ್ರವಲ್ಲ, ಬ್ರಿಟಿಷ್‌ಚಕ್ರಾಧಿಪತ್ಯದ ‘ನೈಟ್(knight) ಪದವಿ’ ಪುರಸ್ಕೃತನೆಂಬ ನೆಲೆಯಲ್ಲಿ, ವೈಸ್‌ರಾಯ್ ಲಾರ್ಡ್ ಚೆಲ್ಮ್‌ಫೋರ್ಡ್ ಅವರಿಗೆ ಪತ್ರ ಬರೆದರು. ಅದೊಂದು ಪರಿಪೂರ್ಣವಾದ ಬರವಣಿಗೆಯಾಗಿತ್ತು. ಓದುಗರು ಅದನ್ನು ವಿವಿಧ ರೀತಿಗಳಲ್ಲಿ ಗ್ರಹಿಸಿಕೊಳ್ಳಬಹುದಾಗಿದೆ. ಅದನ್ನು ನಾನಿಲ್ಲಿ ಸುದೀರ್ಘವಾಗಿ ಉಲ್ಲೇಖಿಸುತ್ತಿದ್ದೇನೆ.

ಭಾರತದಲ್ಲಿ ಬ್ರಿಟಿಷ್ ಪ್ರಜೆಗಳಾಗಿ ನಮ್ಮ ಅಸಹಾಯಕ ಸ್ಥಿತಿಯನ್ನು ಜಲಿಯನ್‌ವಾಲಾ ಬಾಗ್ ಘಟನೆಯು ತೋರಿಸಿಕೊಟ್ಟಿದೆ ಎಂದು ಟಾಗೋರ್ ಬರೆದಿದ್ದರು. ‘‘ಇತ್ತೀಚಿನ ಹಾಗೂ ಹಳೆಯದಾದ ಕೆಲವೊಂದು ಅಪವಾದಗಳನ್ನು ಹೊರತು ಪಡಿಸಿದರೆ ನಾಗರಿಕ ಸರಕಾರಗಳ ಇತಿಹಾಸದಲ್ಲೇ ಇದೊಂದು ಸಮಾನಾಂತರವಿಲ್ಲದ ಘಟನೆಯಾಗಿದೆ. ಯಾತನಾಮಯವಾದ ಸುದ್ದಿಗಳು ನೀರವ ವೌನವನ್ನು ಭೇದಿಸಿ, ಭಾರತದ ಪ್ರತಿ ಮೂಲೆಗೂ ತಲುಪಿವೆ’’ ಎಂದು ಅವರು ಪತ್ರದಲ್ಲಿ ಬರೆದಿದ್ದರು. ಭಾರತಕ್ಕಾದ ನೋವನ್ನು, ಆಡಳಿತಗಾರರು ನಿರ್ಲಕ್ಷಿಸುತ್ತಿದ್ದಾರೆಂದು ಪತ್ರದಲ್ಲಿ ಟಾಗೋರ್ ಅಸಮಾಧಾನ ವ್ಯಕ್ತಪಡಿಸಿದ್ದರು. ‘‘ಬಹುಶಃ ಆಡಳಿತಗಾರರು ಈ ಘಟನೆಯನ್ನು ತಮಗೆ ಪ್ರಯೋಜನಕರವಾದುದೆಂದು ಕಲ್ಪಿಸಿಕೊಂಡು ಪರಸ್ಪರ ಅಭಿನಂದಿಸಿ ಕೊಳ್ಳುತ್ತಿರಬಹುದು’’’ ಎಂದು ಅವರು ನೋವಿನೊಂದಿಗೆ ಹೇಳಿದ್ದರು. ‘‘ಕೆಲವರಂತೂ ಕನಿಷ್ಠ ಮಟ್ಟದ ಪರಿಶೀಲನೆ ನಡೆಸುವ ಬದಲಾಗಿ ನಮ್ಮ ಯಾತನೆಯ ಅಣಕವಾಡಿದ್ದರು’’ ಎಂದು ಟಾಗೋರ್ ವಿಷಾದಿಸಿದ್ದರು.

ಈ ಪತ್ರದ ಉಪಸಂಹಾರವು ಒಂದು ಸ್ಪಷ್ಟ ನಿರ್ಧಾರದಿಂದ ಕೂಡಿದ್ದಾಗಿತ್ತು. ‘‘ಸಮಯ ಈಗ ಬಂದಿದೆ’’ ಎಂದು ವೈಸ್‌ರಾಯ್‌ಗೆ ಬರೆದ ಪತ್ರದಲ್ಲಿ ಟಾಗೋರ್, ‘‘ಗೌರವದ ಪದಕವು ಅಪಮಾನಕರ ಸನ್ನಿವೇಶದಲ್ಲಿ ನಮ್ಮನ್ನು ಅಸಮಂಜಸವಾಗಿ ಅಣಕಿಸುತ್ತಿದೆ’’ ಎಂದಿದ್ದರು. ಪತ್ರದಲ್ಲಿ ಹರಿತವಾದ ಪದಗಳನ್ನು ಬಳಸಿರುವ ಟಾಗೋರ್ ಹೀಗೆ ಮುಂದುವರಿಯುತ್ತಾರೆ. ‘‘ನಾನೀಗ ಎಲ್ಲ ರೀತಿಯ ವಿಶೇಷ ಬಿರುದು, ಪುರಸ್ಕಾರಗಳನ್ನು ಕಡಿದುಕೊಡು, ಮಾನವಜೀವಿಗಳಿಗೆ ಯೋಗ್ಯವಲ್ಲದ ತುಚ್ಛೀಕರಣದೊಂದಿಗೆ ನರಳುತ್ತಿರುವ ನನ್ನ ದೇಶದ ಜನತೆಯ ಜೊತೆ ನಿಲ್ಲುತ್ತೇನೆ’’ ಅಂತಿಮವಾಗಿ ಅವರು ವೈಸ್‌ರಾಯ್‌ಗೆ ‘‘...ನನ್ನನ್ನು ನೈಟ್‌ಹುಡ್ ಪದವಿಯಿಂದ ವಿಮೋಚನೆಗೊಳಿಸಿ’’ ಎಂದು ಬರೆದಿದ್ದರು. ಚೈತನ್ಯದ ಶಕ್ತಿಯನ್ನು ಅಣಕಿಸುವ ದರ್ಪದ ನಡವಳಿಕೆಯ ವಿರುದ್ಧ ಟಾಗೋರ್ ವ್ಯಕ್ತಪಡಿಸಿರುವ ಖಂಡನೆಯು, ಯಾವುದೇ ದೇಶಕ್ಕೂ ಬಿಸಿಮುಟ್ಟಿಸಬಹುದಾಗಿದೆ. ಜಗತ್ತಿನ ಎಲ್ಲೆಡೆ ಸ್ವಾತಂತ್ರಕ್ಕೆ ಬೆಲೆ ನೀಡುವ ವ್ಯಕ್ತಿಗಳನ್ನು ಸಬಲೀಕರಣಗೊಳಿಸಬಲ್ಲದು.

ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News