ಸಮೀರ್ ವರ್ಮಾಗೆ ಆಘಾತಕಾರಿ ಸೋಲು

Update: 2019-04-03 03:19 GMT

ಕೌಲಾಲಂಪುರ, ಎ.2: ಕಠಿಣ ಹೋರಾಟ ನೀಡಿದ ಹೊರತಾಗಿಯೂ ಮಂಗಳವಾರ ಮಲೇಶ್ಯ ಓಪನ್ ಪ್ರಥಮ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.2 ಆಟಗಾರ ಚೀನಾದ ಶಿ ಯುಖಿಗೆ ಭಾರತದ ಸಮೀರ್ ವರ್ಮಾ ಮಣಿದಿದ್ದಾರೆ.

 ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ವಿಶ್ವ ಟೂರ್ ಫೈನಲ್ಸ್‌ನಲ್ಲಿ ಶಿ ಯುಖಿಗೆ ಸೋತಿದ್ದ ಮಧ್ಯಪ್ರದೇಶದ 24 ವರ್ಷದ ಆಟಗಾರ ಸಮೀರ್, 65 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ 20-22, 23-21, 12-21 ಗೇಮ್‌ಗಳಿಂದ ಪರಾಭವಗೊಂಡರು.

ಪ್ರಥಮ ಗೇಮ್‌ನ ಆರಂಭದಲ್ಲಿ ಉಭಯ ಆಟಗಾರರು 8-8ರ ಸಮಬಲ ಸಾಧಿಸಿದ್ದರು. ಆ ಬಳಿಕ 11-16ರಿಂದ ಹಿಂದೆ ಬಿದ್ದ ಸಮೀರ್ ಮತ್ತೆ ಚೇತರಿಸಿಕೊಂಡರೂ ಈ ಗೇಮ್ 22-20 ರಿಂದ ಯುಖಿ ವಶವಾಯಿತು. ಎರಡನೇ ಗೇಮ್‌ನಲ್ಲಿ ಕೂಡ ಅಷ್ಟೇನೂ ವ್ಯತ್ಯಾಸ ಕಾಣಿಸಲಿಲ್ಲ. ಆರಂಭದಲ್ಲಿ ಭಾರತದ ಆಟಗಾರ 11-16ರಿಂದ ಹಿನ್ನಡೆ ಅನುಭವಿಸಿದ್ದರು. ತಿರುಗೇಟು ನೀಡಿದ ಅವರು ಮೂರು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಳ್ಳುವ ಮೂಲಕ ಗೇಮ್‌ನ್ನು 23-21ರಿಂದ ಗೆದ್ದುಕೊಂಡರು.

ಆದರೆ ಅಂತಿಮ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಯುಖಿ ಭಾರೀ ಅಂತರದಿಂದ ಗೇಮ್ ವಶಪಡಿಸಿಕೊಳ್ಳುವ ಮೂಲಕ ಪಂದ್ಯವನ್ನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು.

ಮಿಶ್ರ ಡಬಲ್ಸ್‌ನಲ್ಲಿ ಜಯ: ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಹಾಗೂ ಎನ್. ಸಿಕ್ಕಿ ರೆಡ್ಡಿ ಜೋಡಿ ಐರ್ಲೆಂಡ್‌ನ ಸ್ಯಾಮ್ ಮ್ಯಾಗೀ ಹಾಗೂ ಚೋಲೆ ಮ್ಯಾಗೀ ಅವರನ್ನು 22-20. 24-22 ಗೇಮ್‌ಗಳ ಅಂತರದಿಂದ ಸೋಲಿಸುವ ಮೂಲಕ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News