‘ನಮೋ ಟಿವಿ’ ಪರವಾನಿಗೆ ಇರುವ ಚಾನೆಲ್ ಅಲ್ಲ, ಅದು ಜಾಹೀರಾತು ವೇದಿಕೆ ಎಂದ ಕೇಂದ್ರ: ವರದಿ

Update: 2019-04-03 09:37 GMT

ಹೊಸದಿಲ್ಲಿ, ಎ.3: ‘ನಮೋ ಟಿವಿ’ ಪರವಾನಿಗೆ ಹೊಂದಿದ ಚಾನೆಲ್ ಅಲ್ಲ, ಬದಲಾಗಿ ‘ಡೈರೆಕ್ಟ್ ಟು ಹೋಮ್’ ಜಾಹೀರಾತು ವೇದಿಕೆ ಎಂದು  ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಚುನಾವಣಾ ಆಯೋಗಕ್ಕೆ ತಿಳಿಸಿದೆ ಎಂದು indiatoday.in ವರದಿ ಮಾಡಿದೆ.

ಲೋಕಸಭಾ ಚುನಾವಣೆಗಿಂತ ಮುಂಚಿತವಾಗಿ ‘ನಮೋ ಟಿವಿ’ಯನ್ನು ಆರಂಭಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ, ಸಚಿವಾಲಯದಿಂದ ವರದಿ ಕೇಳಿತ್ತು. ಪಕ್ಷವು ಜಾಹೀರಾತು ವೆಚ್ಚಗಳನ್ನು ಭರಿಸುತ್ತಿದೆ ಎಂದು ಸಚಿವಾಲಯ ತನ್ನ ಉತ್ತರದಲ್ಲಿ ತಿಳಿಸಿತ್ತು.

ಪ್ರಧಾನಿಯ ಚುನಾವಣಾ ಅಭಿಯಾನವನ್ನು ಪ್ರಸಾರ ಮಾಡುವ 24  ಗಂಟೆಗಳ ವಾಹಿನಿ ‘ನಮೋ ಟಿವಿ’ಯನ್ನು ಮಾರ್ಚ್ 31ರಂದು ಆರಂಭಿಸಲಾಗಿತ್ತು. ಮಾರ್ಚ್ 31ರಂದು ಪ್ರಧಾನಿಯ ‘ಮೈ ಭೀ ಚೌಕೀದಾರ್’ ಅಭಿಯಾನದ ಭಾಷಣವನ್ನು ಒಂದು ಗಂಟೆ ನೇರ ಪ್ರಸಾರವನ್ನು ದೂರದರ್ಶನ ಹೇಗೆ ಮಾಡಿತ್ತೆಂಬ ಪ್ರಶ್ನೆಯನ್ನೂ ಚುನಾವಣಾ ಆಯೋಗ ಕೇಳಿತ್ತು.

ಪ್ರಧಾನಿಯ ಚುನಾವಣಾ ಪ್ರಚಾರ ಭಾಷಣಗಳ ಹೊರತಾಗಿ ಅವರ ಇತರ ಭಾಷಣಗಳ  ತುಣುಕುಗಳನ್ನೂ ನಮೋ ಟಿವಿ ಪ್ರಸಾರ ಮಾಡುತ್ತಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಈ ವಾಹಿನಿಯನ್ನು ಏಕೆ ಆರಂಭಿಸಲಾಗಿದೆ ಎಂದು ಕಾಂಗ್ರೆಸ್ ಮತ್ತು ಎಎಪಿ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದವು. ದಿಲ್ಲಿ ಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ಪಕ್ಷ ಕೂಡ ಚುನಾವಣಾ ಆಯೋಗಕ್ಕೆ  ಪತ್ರ ಬರೆದು, ಬಿಜೆಪಿ ಈ ವಾಹಿನಿ ಆರಂಭಿಸಲು ಸೂಕ್ತ ಪರವಾನಿಗೆಗಳನ್ನು ಪಡೆದಿವೆಯೇ ಎಂದು ಪ್ರಶ್ನಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News