ಕಾಂಗ್ರೆಸ್‌ನಿಂದ ದಕ್ಷಿಣ ರಾಜ್ಯಗಳ ಅಭಿವೃದ್ಧಿ ನಿರ್ಲಕ್ಷ್ಯ: ಸಿ.ಟಿ.ರವಿ

Update: 2019-04-03 12:54 GMT

ಬೆಂಗಳೂರು, ಎ.3: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋಲು ಖಚಿತವಾದ ನಂತರ, ದಕ್ಷಿಣದ ಕಡೆ ಮುಖ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ರಾಜ್ಯಗಳ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ತಾವು ವಯನಾಡ್ ಆಯ್ಕೆ ಮಾಡಿಕೊಂಡಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ವಾಸ್ತವವಾಗಿ ಅಲ್ಪಸಂಖ್ಯಾತರು ಹೆಚ್ಚಿರುವ ಕಾರಣಕ್ಕೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು. ದಕ್ಷಿಣದ ಬಗ್ಗೆ ಅವರಿಗೆ ಕಿಂಚಿತ್ತೂ ಒಲವಿಲ್ಲ. ದಕ್ಷಿಣ ರಾಜ್ಯಗಳು ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ನೆಹರೂ ಕುಟುಂಬದವರನ್ನು ಗೆಲ್ಲಿಸಿದ್ದವು. ಆದರೆ, ಅವರು ದಕ್ಷಿಣದಿಂದ ಆಯ್ಕೆಯಾದರೂ, ದಕ್ಷಿಣದ ಕಡೆ ಮುಖ ಮಾಡಲೇ ಇಲ್ಲ ಎಂದು ಅವರು ಹೇಳಿದರು.

ಸೋನಿಯಾಗಾಂಧಿ ಅವರನ್ನು ಬಳ್ಳಾರಿ ಜನ ಆರಿಸಿ ಕಳುಹಿಸಿದ್ದರೂ, ಅವರು ಈ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದರು. ಇದರಿಂದ ಬಳ್ಳಾರಿಗೆ ನೀಡಲಾಗಿದ್ದ ವಿಶೇಷ ಪ್ಯಾಕೇಜ್ ಭರವಸೆಯಾಗಿಯೇ ಉಳಿದುಕೊಂಡಿತು ಎಂದು ಸಿ.ಟಿ.ರವಿ ದೂರಿದರು.

ದಕ್ಷಿಣ ರಾಜ್ಯಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಿರುವ ಕಾಂಗ್ರೆಸ್, ದಕ್ಷಿಣ ಭಾಗದ ನಾಯಕರಿಗೆ ರಾಜಕೀಯ ಆದ್ಯತೆಯನ್ನೂ ನೀಡದೆ ಮೋಸ ಮಾಡಿದೆ. ಸಣ್ಣ ವಿಷಯ ಮುಂದಿಟ್ಟುಕೊಂಡು ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿತು. ನಿಜಲಿಂಗಪ್ಪ, ದೇವರಾಜ ಅರಸು, ನೀಲಂ ಸಂಜೀವರೆಡ್ಡಿ, ಪಿ.ವಿ.ನರಸಿಂಹರಾವ್ ಸೇರಿದಂತೆ ಅನೇಕ ದಕ್ಷಿಣ ಭಾರತದ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಲಾಯಿತು ಎಂದು ಅವರು ಹೇಳಿದರು.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ದಕ್ಷಿಣ ರಾಜ್ಯಗಳಿಗೆ 13ನೇ ಹಣಕಾಸು ಆಯೋಗದಲ್ಲಿ 3.63 ಲಕ್ಷ ಕೋಟಿ ರೂ.ಒದಗಿಸಿತ್ತು. ಆದರೆ, ನರೇಂದ್ರಮೋದಿ ನೇತೃತ್ವದ ಬಿಜೆಪಿ ಅಧಿಕಾರಾವಧಿಯಲ್ಲಿ ದಕ್ಷಿಣದ ಐದು ರಾಜ್ಯಗಳಿಗೆ 9.13 ಲಕ್ಷ ಕೋಟಿ ರೂ.ಒದಗಿಸಲಾಗಿದೆ. ಈ ಎಲ್ಲ ಕಾರಣಗಳಿಂದ ದಕ್ಷಿಣವನ್ನು ಪ್ರತಿನಿಧಿಸುವ ಯಾವುದೇ ನೈತಿಕತೆಯನ್ನು ಕಾಂಗ್ರೆಸ್ ಉಳಿಸಿಕೊಂಡಿಲ್ಲ ಎಂದು ಸಿ.ಟಿ.ರವಿ ಆರೋಪಿಸಿದರು.

ಹಿಂದೂ ರಾಷ್ಟ್ರವಾಗಿಸಲು ಬಿಜೆಪಿ ನಾಯಕರು ಸಂಚು ರೂಪಿಸಿದ್ದಾರೆ ಎಂದು ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಆದರೆ, ಭಾರತ ಹಿಂದೂ ರಾಷ್ಟ್ರವೇ ಆಗಿದ್ದು, ಇದರಲ್ಲಿ ಸಂಚು ರೂಪಿಸಬೇಕಾದ್ದು ಏನೂ ಇಲ್ಲ. ದೇವೇಗೌಡರು ಒಂದೊಂದು ಸಮುದಾಯದ ಬಳಿ ಒಂದೊಂದು ರೀತಿ ಹೇಳುತ್ತಾರೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರ ಪತನಕ್ಕೆ ಸಮಯ ನಿಗದಿಯಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಇದು ಸ್ಫೋಟಗೊಳ್ಳಲಿದೆ ಎಂದು ಸಿ.ಟಿ.ರವಿ ಹೇಳಿದರು.

ಪತ್ರಿಕಾಗೊಷ್ಠಿಯಲ್ಲಿ ಬಿಜೆಪಿ ಸಹ ವಕ್ತಾರ ಎ.ಎಚ್.ಆನಂದ, ಮುಖಂಡರಾದ ಚಿ.ನಾ.ರಾಮು, ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News