ಸೈನಿಕರ ಶ್ರಮವನ್ನು ರಾಜಕೀಯಕ್ಕೆ ಬಳಸಿಕೊಂಡ ಏಕೈಕ ಮುಖಂಡ ಮೋದಿ: ಐವಾನ್ ಡಿಸೋಜಾ

Update: 2019-04-03 13:03 GMT

ಬೆಂಗಳೂರು, ಎ. 3: ರಾಷ್ಟ್ರದ ಶೇ.20 ರಷ್ಟು ಬಡವರಿಗೆ ವಾರ್ಷಿಕ 72 ಸಾವಿರ ರೂ.ಭದ್ರತೆ, 150 ದಿನಗಳ ನರೇಗಾ ಉದ್ಯೋಗ, ಸಾಮಾಜಿಕ ಭದ್ರತೆ, ರಾಷ್ಟ್ರ ನಿರ್ಮಾಣಕ್ಕೆ ಭರವಸೆ ನೀಡಿದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಪರಿಷತ್ ಸದಸ್ಯ ಐವಾನ್ ಡಿಸೋಜಾ ಮನವಿ ಮಾಡಿದ್ದಾರೆ.

ಬುಧವಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರ ಹೊಸಕೋಟೆ ಕ್ಷೇತ್ರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಹೇಳಿದ ಪ್ರಧಾನಿ ಮೋದಿಗೆ ಸರಿಯಾದ ಪಾಠ ಕಲಿಸಲು ಸೂಕ್ತ ಸಮಯ ಎಂದರು.

ಪ್ರಧಾನಿ ಮೋದಿ ಬಡವರು, ರೈತರು ಎಲ್ಲರನ್ನು ಮೋಸಗೊಳಿಸಿದ್ದಲ್ಲದೆ, ಕೋಟ್ಯಂತರ ರೂಪಾಯಿ ವಂಚನೆ ಮಾಡಿ ದೇಶಬಿಟ್ಟ ಉದ್ಯಮಿಗಳಿಗೆ ಬೆಂಬಲಿಸುವ ಮೂಲಕ ದೇಶದ ಜನತೆಗೆ ದ್ರೋಹ ಮಾಡಿದ್ದಾರೆ ಎಂದು ಐವನ್ ಡಿಸೋಜಾ ವಾಗ್ದಾಳಿ ನಡೆಸಿದರು.

ಯುಪಿಎ ಸರಕಾರ 72ಸಾವಿರ ಕೋಟಿ ರೂ.ರೈತರ ಸಾಲಮನ್ನಾ ಮಾಡಿದ್ದು, ಡಾ.ಮನಮೋಹನ್ ಸಿಂಗ್ ರೈತರ ಸಾಲಮನ್ನಾ ಮಾಡಬಹದೆಂಬುದನ್ನು ದೇಶಕ್ಕೆ ತೋರಿಸಿಕೊಟ್ಟರೆ, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೋದಿ ರೈತರ ಸಾಲಮನ್ನಾ ಮಾಡಲಾಗುವುದಿಲ್ಲ ಎಂದು ಹೇಳಿ ರೈತರ ಆತ್ಮಹತ್ಯೆಗೆ ಕಾರಣರಾದರು ಎಂದು ಟೀಕಿಸಿದರು.

ದೇಶದ ಭದ್ರತೆ ವಿಚಾರದಲ್ಲಿ ಸೈನಿಕರು ಬಲಿಯಾದರೂ, ಸೈನಿಕರಿಗಿಂತ ರಾಜಕೀಯ ಮುಖ್ಯವೆಂದು ಹೇಳುವ ಮೂಲಕ ಸೈನಿಕರ ಶ್ರಮವನ್ನು ರಾಜಕೀಯಕ್ಕೆ ಬಳಸಿಕೊಂಡ ಏಕೈಕ ಮುಖಂಡ ಮೋದಿ ಎಂದ ಅವರು, ಮಾಜಿ ಸಿಎಂ ಬಿಎಸ್‌ವೈ ಸೈನಿಕರು ಬಲಿಯಾಗಿರುವುದರಿಂದ ರಾಜ್ಯದಲ್ಲಿ 22ಕ್ಷೇತ್ರಗಳಲ್ಲಿ ಬಿಜೆಪಿಯೇ ಜಯಗಳಿಸುತ್ತದೆ ಎಂದಿದ್ದು, ಅವರಿಗೆ ಸೂಕ್ತ ಪಾಠ ಕಲಿಸಬೇಕೆಂದು ಕರೆ ನೀಡಿದರು.

ದೇಶದ ರಕ್ಷಣೆಗಾಗಿ ಸಾಮಾಜಿಕ ಅಭಿವೃದ್ಧಿ ಕಾರ್ಯ ನಿರ್ವಹಿಸಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದು. ರೈತರ ಸಾಲಮನ್ನಾ, ಅನ್ನಭಾಗ್ಯ ಜಾರಿಗೊಳಿಸುವ ಮೂಲಕ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಿದೆ. ಹೀಗಾಗಿ ಜನರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕೆಂದು ಮನವಿಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News