ಮಾತಿನಲ್ಲೇ ಅಭಿವೃದ್ಧಿ ಮಾಡುವ ಮೋದಿ ಬಗ್ಗೆ ಎಚ್ಚರ: ರಾಮಲಿಂಗಾರೆಡ್ಡಿ

Update: 2019-04-03 15:22 GMT

ಬೆಂಗಳೂರು, ಮಾ. 3: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಹಲವು ಬಾರಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ ಯಾವುದೇ ಪ್ರಗತಿಯಾಗಿಲ್ಲ. ಕೇಂದ್ರ ಸರಕಾರದ ಯೋಜನೆಗಳನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಮಾಡುವಲ್ಲಿ ಬಿಜೆಪಿ ನಾಯಕರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಬುಧವಾರ ಬನ್ನೇರುಘಟ್ಟ ರಸ್ತೆ ಮೀನಾಕ್ಷಿ ಮಾಲ್ ಬಳಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಜಂಟಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಆಯ್ಕೆಯಾಗಿದ್ದ ದಿ.ಅನಂತಕುಮಾರ್ ಕ್ಷೇತ್ರವನ್ನು ನಿರ್ಲಕ್ಷಿಸಿದ್ದರು. ಈ ಭಾಗದಲ್ಲಿ ಮಳೆ ಬಂದರೆ ಇಡೀ ಪ್ರದೇಶ ಕೆರೆಯಂತಾಗುತ್ತದೆ. ಜನ ಜೀವನ ತೀವ್ರ ಸಂಕಷ್ಟ ಅನುಭವಿಸುತ್ತಿದೆ. ಆದರೂ ಅವರು ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರಲಿಲ್ಲ. ಇದರ ಸೂಕ್ತ ಪರಿಹಾರ ದೊರೆಯಬೇಕಾದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದ ಅವರು, ಕೇಂದ್ರದ ಬಿಜೆಪಿ ಸರಕಾರ ಯುವಕರಿಗೆ ಉದ್ಯೋಗ ಕಲ್ಪಿಸುವಲ್ಲಿ ವಿಫಲವಾಗಿದ್ದು, ಕಪ್ಪುಹಣ ತಂದು ಅಭಿವೃದ್ಧಿ ಮಾಡುವ ಭರವಸೆಗಳು ಇನ್ನೂ ಭರವಸೆಗಳಾಗಿಯೇ ಉಳಿದಿವೆ.

ಪ್ರಧಾನಿ ಮೋದಿ ಅವರಂತೂ ಬಾಯಿ ಮಾತಿನಲ್ಲೇ ಎಲ್ಲ ಅಭಿವೃದ್ಧಿ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷದವರು ಬೋಗಸ್ ಮಾತು, ಪೊಳ್ಳು ವಾಗ್ದಾನಗಳನ್ನು ನೀಡುತ್ತಾ ಬರುತ್ತಿದ್ದಾರೆ. ಮೋದಿ ಮಾತಿಗೆ ಮರುಳಾದರೆ ದೇಶ ಅಪಾಯಕ್ಕೆ ಸಿಲುಕಲಿದೆ. ಹೀಗಾಗಿ ವಿವೇಚನೆಯಿಂದ ಮತ ಚಲಾಯಿಸಬೇಕು. ಬೆಂ.ದಕ್ಷಿಣ ಕ್ಷೇತ್ರದಲ್ಲಿ ಮಹಿಳಾ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿದ್ದು, ಎಲ್ಲರೂ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು ಎಂದು ರಾಮಲಿಂಗಾರೆಡ್ಡಿ ಕರೆ ನೀಡಿದರು.

ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಮಾತನಾಡಿ, ಈ ಭಾಗದಲ್ಲಿ ಕಾಂಗ್ರೆಸ್ ಬಗ್ಗೆ ಒಲವು ವ್ಯಕ್ತವಾಗಿದ್ದು, ನಮ್ಮ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಅವರ ಗೆಲುವಿಗೆ ಉತ್ತಮ ಅವಕಾಶವಿದೆ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ನಂತರ ಬೊಮ್ಮನಹಳ್ಳಿ ಮತ್ತಿತರ ಕಡೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ. ಮಳೆ ಬಂದರೆ ತೊಂದರೆ ಎದುರಿಸುವ ಪ್ರದೇಶಗಳನ್ನು ವಾಸ ಯೋಗ್ಯ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News