ಬಿಬಿಎಂಪಿ ವ್ಯಾಪ್ತಿಯಲ್ಲಿ ಎ.5ರಿಂದ ಮತದಾರರ ಚೀಟಿಗಳ ವಿತರಣೆ: ಮಂಜುನಾಥ ಪ್ರಸಾದ್

Update: 2019-04-03 16:14 GMT

ಬೆಂಗಳೂರು, ಎ.3 : ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಎ.5 ರಿಂದ ಮತದಾರರಿಗೆ ಭಾವಚಿತ್ರವಿರುವ ಮತದಾರರ ಚೀಟಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೈಗೊಂಡಿರುವ ಸಿದ್ಧತೆಗಳ ಕುರಿತು ನಗರ ಪೊಲೀಸ್ ಆಯುಕ್ತರೊಂದಿಗೆ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಹೋಗಿ ಅಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಮತದಾರರ ಚೀಟಿಯನ್ನು ನೀಡಲಿದ್ದಾರೆ. ಇದರೊಂದಿಗೆ ಮತದಾನದ ದಿನ ಮತಗಟ್ಟೆಯಲ್ಲಿ ಪಾಲಿಸಬೇಕಾದ ನಿಯಮಗಳು, ಮತದಾನ ಮಾಡುವ ವಿಧಾನ, ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಯಾರಿಗೆ ನೀಡಬೇಕು ಹೀಗೆ ಹಲವು ಮಾಹಿತಿಯುಳ್ಳ ಗೈಡ್‌ನ್ನು ಪ್ರತಿ ಮನೆಗೆ ನೀಡಲಾಗುವುದು ಎಂದರು.

ಎರಡು ಬ್ಯಾಲೆಟ್ ಯುನಿಟ್ ಬಳಕೆ: ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳಿದ್ದು, ಎಲ್ಲದರಲ್ಲಿಯೂ 15ಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಪ್ರತಿ ಮತಗಟ್ಟೆಯಲ್ಲೂ 2 ಬ್ಯಾಲೆಟ್ ಯುನಿಟ್ ಬಳಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಬೆಂಗಳೂರು ನಗರ ವ್ಯಾಪ್ತಿಯ ಲೋಕಸಭಾ ಕ್ಷೇತ್ರಗಳಲ್ಲಿ ಬ್ಯಾಲೆಟ್ ಯುನಿಟ್(ಇವಿಎಂ)ಗಳು ಕಡಿಮೆಯಿದ್ದು, ಚುನಾವಣಾ ಆಯೋಗದ ಅನುಮತಿ ಪಡೆದು ಬೇರೆ ಜಿಲ್ಲೆಗಳಲ್ಲಿನ ಯುನಿಟ್‌ಗಳನ್ನು ತರಿಸಿಕೊಳ್ಳಲಾಗುತ್ತಿದೆ. ಇದರೊಂದಿಗೆ ಎಂ3 ಬ್ಯಾಲೆಟ್ ಯುನಿಟ್‌ಗಳನ್ನು ಹೊರ ರಾಜ್ಯಗಳಿಂದ ತರಿಸಿಕೊಳ್ಳಲು ಕೇಂದ್ರ ಚುನಾವಣಾ ಆಯೋಗದಿಂದ ಅನುಮತಿ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಅಧಿಕಾರಿ ಸಿಬ್ಬಂದಿಗೆ ತರಬೇತಿ: ನಗರದ ಮೂರು ಲೋಕಸಭಾ ಕ್ಷೇತ್ರಗಳು ಹಾಗೂ ಪಾಲಿಕೆಯ ವ್ಯಾಪ್ತಿಗೆ ಬರುವ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 8514 ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಒಟ್ಟು 42 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನೇಮಿಸಿಕೊಳ್ಳಲಾಗಿದೆ. ಅದರಂತೆ ಈಗಾಗಲೇ ಪಿಆರ್‌ಓ ಹಾಗೂ ಎಆರ್‌ಓಗಳಿಗೆ ಮೊದಲ ಹಂತದ ತರಬೇತಿ ನೀಡಲಾಗಿದ್ದು, ಎ.11ರಂದು ಎಲ್ಲ 42 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದರು. ನಗರದ 1600 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಸೂಕ್ಷ್ಮ ವೀಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಜತೆಗೆ ವೆಬ್‌ಕ್ಯಾಸ್ಟಿಂಗ್ ಹಾಗೂ ವಿಡಿಯೋ ಕವರೇಜ್ ಮಾಡಲಾಗುತ್ತಿದ್ದು, ವೀಕ್ಷಕರಿಗೂ ಎ.8 ಹಾಗೂ 16ರಂದು ತರಬೇತಿ ನೀಡಲಾಗುವುದು ಎಂದು ಹೇಳಿದರು.

ವಿಶೇಷ ಚೇತನರಿಗೆ ಕ್ಯಾಬ್ ಸೇವೆ:

ಮತದಾನದಲ್ಲಿ ಭಾಗಿಯಾಗುವ ವಿಕಲಚೇತನರಿಗೆ ಖಾಸಗಿ ಕ್ಯಾಬ್‌ಗಳನ್ನು ಕಾಯ್ದಿರಿಸಲು ಚುನಾವಣಾ ಆಯೋಗ ಮುಂದಾಗಿದ್ದು, ಆಯೋಗದಲ್ಲಿ ಹೆಸರು ನೋಂದಣಿ ಮಾಡಿಕೊಂಡ ವಿಕಲಚೇತನರಿಗೆ ಉಚಿತ ಕ್ಯಾಬ್ ಬಳಸಲು ಕೂಪನ್ ನೀಡಲಾಗುತ್ತದೆ. ಆಯೋಗದ ಸಹಾಯವಾಣಿ 1950ಗೆ ಕರೆ ಮಾಡಿ ವಾಹನ ವ್ಯವಸ್ಥೆ ಕೋರಿದ ವಿಕಲಚೇತನರಿಗೆ ಉಚಿತ ಕ್ಯಾಬ್ ಸೇವೆಗೆ ಕೂಪನ್ ನೀಡಲಾಗುವುದು ಎಂದು ಹೇಳಿದರು. ಈಗಾಗಲೇ ಖಾಸಗಿ ವಾಹನ ಸೇವಾ ಸಂಸ್ಥೆ ಓಲಾ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ವಿಕಲಚೇತನ ಮತದಾರರನ್ನು ಮನೆಯಿಂದ ಮತಗಟ್ಟೆಗೆ ಕರೆತಂದು ಮತದಾನದ ಬಳಿಕ ಮತ್ತೆ ಅವರನ್ನು ಮನೆಗೆ ಬಿಡಲಾಗುವುದು. ಮತಗಟ್ಟೆಗಳಲ್ಲಿಯೂ ವಿಕಲಚೇತನರಿಗಾಗಿ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. ಆಯೋಗದಿಂದಲೇ ಕ್ಯಾಬ್‌ಗೆ ತಗಲುವ ವೆಚ್ಚ ಪಾವತಿಸಲು ಸಿದ್ಧವಿದ್ದು, ಎ.10ರೊಳಗೆ ತಮಗೆ ಬೇಕಾಗುವ ಸೇವೆಗಳ ಬಗ್ಗೆ ವಿಕಲಚೇತನರು ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ನಗರ ಜಿಲ್ಲಾಧಿಕಾರಿ ವಿಜಯಶಂಕರ್, ವಿಶೇಷ ಆಯುಕ್ತ ಮನೋಜ್‌ಕುಮಾರ್ ಮೀನಾ ಸೇರಿದಂತೆ ಪ್ರಮುಖರು ಹಾಜರಿದ್ದರು.

ಇಡಿಸಿ, ಅಂಚೆ ಮತದಾನಕ್ಕೆ ಅವಕಾಶ

ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿಗೆ ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್ (ಇಡಿಸಿ) ಹಾಗೂ ಅಂಚೆ ಮತದಾನದ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡ ಸಿಬ್ಬಂದಿಯು ಅದೇ ಲೋಕಸಭಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಅವರು ಕೆಲಸ ಮಾಡುವ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ ಮತ ಚಲಾಯಿಸಬಹುದಾಗಿದೆ. ಅದೇ ರೀತಿ ಬೇರೊಂದು ಲೋಕಸಭಾ ಕ್ಷೇತ್ರದಲ್ಲಿ ಕೆಲಸಕ್ಕೆ ನಿಯೋಜನೆಗೊಂಡಿದ್ದರೆ ಅಂಚೆ ಮೂಲಕ ಮತದಾನ ಮಾಡಬಹುದಾಗಿದೆ. ಅದರಂತೆ ಈಗಾಗಲೇ ಅಧಿಕಾರಿಗಳಿಗೆ ಅಂಚೆ ಮತದಾನ ಮಾಡಲು ಅಗತ್ಯವಾದ ಬ್ಯಾಲೆಟ್ ಪೇಪರ್ ಹಾಗೂ ದೃಢೀಕರಣ ಪತ್ರದ ಜತೆಗೆ ಪ್ರತ್ಯೇಕ ಲಕೋಟೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ನಗರದಲ್ಲಿ ಪರವಾನಗಿ ಪಡೆದಿರುವ 8,556 ಶಸ್ತ್ರಸ್ತ್ರಗಳ ಪೈಕಿ 7,528ನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದುವುಗಳಿಗೆ ಮನವಿ ಮೇರೆಗೆ ವಿನಾಯಿತಿ ನೀಡಲಾಗಿದೆ. ಶಾಂತಿಯುತವಾಗಿ ಚುನಾವಣೆ ನಡೆಸಬೇಕೆಂಬ ಉದ್ದೇಶದಿಂದ ಭದ್ರತೆಗಾಗಿ 12 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಜತೆಗೆ ಒಂದು ಕೇಂದ್ರ ಮೀಸಲು ಪಡೆಯಿದ್ದು, ಮತದಾನದ ವೇಳೆ ಇನ್ನೂ 12 ಪಡೆಗಳು ಬರುವ ನಿರೀಕ್ಷೆಯಿದೆ. ಜತೆಗೆ ಮತಗಟ್ಟೆಗಳಿಗೆ ನಿರಂತರವಾಗಿ ಭೇಟಿ ನೀಡುವ ಉದ್ದೇಶದಿಂದ 400 ಸೆಕ್ಟರ್ ಮೊಬೈಲ್ ತಂಡ ರಚಿಸಿದ್ದು, ಸುಮಾರು 3 ಸಾವಿರ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ.

-ಟಿ.ಸುನೀಲ್ ಕುಮಾರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News