ಎ.4 ರಂದು ‘ಮಹಿಳಾ ನಡಿಗೆ-ಭಾರತ’ ಹೋರಾಟ

Update: 2019-04-03 16:51 GMT

ಬೆಂಗಳೂರು, ಎ.3: ದೇಶಾದ್ಯಂತ ಮಹಿಳೆಯರು ಮತ್ತು ಅಂಚಿಗೆ ದೂಡಲ್ಪಟ್ಟ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳ ಮೇಲೆ ದಾಳಿ ನಡೆಸುತ್ತಿರುವವರ ವಿರುದ್ಧ ನಾಳೆ ‘ಮಹಿಳಾ ನಡಿಗೆ-ಭಾರತ’ ಘೋಷಣೆಯೊಂದಿಗೆ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿವಿಧ ಮಹಿಳಾ ಸಂಘಟನೆಗಳಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಗತಿಪರ ಚಿಂತಕಿ ಕವಿತಾ ಲಂಕೇಶ್ ಮಾತನಾಡಿ, ಅಸಮ್ಮತಿ ಧ್ವನಿಗಳನ್ನು ಏಕೀಕರಿಸುತ್ತ ಮಹಿಳೆಯರ ಮತ್ತು ಅಂಚಿಗೆ ದೂಡಲ್ಪಟ್ಟಿರುವ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳ ವಿರುದ್ಧ ದಾಳಿ ನಡೆಸುತ್ತಿರುವ ಶಕ್ತಿಗಳನ್ನು ಸೋಲಿಸುವ ಉದ್ದೇಶದಿಂದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಭಾರತದ ಮಹಿಳೆಯರು ಬಿಜೆಪಿ ಸರಕಾರದ ಮಹಿಳಾ ಸಬಲೀಕರಣ ಮತ್ತು ಬೇಟಿ ಬಚಾವೋ ಎಂಬ ಖಾಲಿ ಮತ್ತು ಕೆಲಸಕ್ಕೆ ಬಾರದ ಆಶ್ವಾಸನೆಗಳ ವಿರುದ್ಧ ಪ್ರಶ್ನೆಗಳನ್ನು ಎತ್ತಬೇಕಾಗಿದೆ. ನಮಗೆ ದೃಢವಾದ ಹಕ್ಕುಗಳು ಬೇಕು ಕೃತಕವಾದ ಮಾತುಗಳಲ್ಲ. 5 ವರ್ಷಗಳಲ್ಲಿ ಮೋದಿ ಸರಕಾರವು ಮಹಿಳೆಯರಿಗಾಗಿ ಸುರಕ್ಷಿತ ಮತ್ತು ಘನತೆಯುಕ್ತ ಕೆಲಸವಾಗಲಿ ಜೀವನ ವೇತನವಾಗಲಿ ನೀಡುವುದರಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಕಳೆದ 5 ವರ್ಷಗಳಿಂದ ಆಡಳಿತ ನಡೆಸಿದ ಮೋದಿ ನೇತೃತ್ವದ ಸರಕಾರ ಮಹಿಳೆಯರ, ಮಕ್ಕಳ ಹಾಗೂ ಮುಸಲ್ಮಾನ ಮತ್ತು ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಗೋರಕ್ಷಣೆಯ ನೆಪದಲ್ಲಿ ಸಾಮೂಹಿಕ ಹತ್ಯೆಗಳನ್ನು ನಡೆಸುವುದಲ್ಲದೆ, ಭಯ ಮತ್ತು ಅಸುರಕ್ಷಿತ ವಾತಾವರಣ ನಿರ್ಮಾಣ ಮಾಡಲಾಗಿದೆ. ಇದರಿಂದ ಮಹಿಳೆಯರು ಆತಂಕದ ಜೀವನ ಸಾಗಿಸುವಂತಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News