ಮೋದಿ ಚಿತ್ರ ಬಿಡುಗಡೆಗೆ ತಡೆ ನೀಡಲು ಹೈಕೋರ್ಟ್ ನಕಾರ
ಬೆಂಗಳೂರು, ಎ.3: ಕರ್ನಾಟಕದಲ್ಲಿ ಪಿಎಂ ನರೇಂದ್ರ ಮೋದಿ ಜೀವನಾಧಾರಿತ ಚಿತ್ರದ ಬಿಡುಗಡೆಗೆ ತಡೆ ನೀಡಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಅರ್ಜಿದಾರರಿಗೆ ಚುನಾವಣೆ ಆಯೋಗದಲ್ಲಿ ದೂರು ನೀಡಲು ಸೂಚಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.
ಈ ಕುರಿತು ಎಲ್. ರಮೇಶ್ ನಾಯ್ಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ವಕೀಲರೂ ಆಗಿರುವ ಅರ್ಜಿದಾರ ರಮೇಶ್ ನಾಯ್ಕಾ ಅವರು, ರಾಜ್ಯದಲ್ಲಿ ಪಿಎಂ ನರೇಂದ್ರ ಮೋದಿ ಜೀವನಾಧಾರಿತ ಚಿತ್ರವನ್ನು ಬಿಡುಗಡೆ ಮಾಡಿದರೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತಾಗುತ್ತದೆ. ಈ ಚಿತ್ರವನ್ನು ಪ್ರಚಾರಕ್ಕಾಗಿ ಬಿಡುಗಡೆಗೊಳಿಸದಂತಾಗುತ್ತದೆ. ಹೀಗಾಗಿ, ಈ ಚಿತ್ರಕ್ಕೆ ತಡೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಸರಕಾರದ ಪರ ವಾದಿಸಿದ ವಕೀಲ ಎಸ್.ಎಚ್.ಪ್ರಶಾಂತ್ ಅವರು, ಪಿಎಂ ನರೇಂದ್ರ ಚಿತ್ರದ ಬಿಡುಗಡೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಹೈಕೋರ್ಟ್ ಈಗಾಗಲೇ ವಜಾಗೊಳಿಸಿದೆ. ಹೀಗಾಗಿ, ಈ ಪೀಠವು ಅರ್ಜಿಯನ್ನು ವಜಾಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಪಿಎಂ ನರೇಂದ್ರ ಮೋದಿ ಚಿತ್ರವು ಎ.12ರಂದು ಬಿಡುಗಡೆ ಆಗಲಿದೆ. ವಕೀಲರ ವಾದ ಆಲಿಸಿದ ನ್ಯಾಯಪೀಠವು ಚುನಾವಣೆ ಆಯೋಗಕ್ಕೆ ದೂರು ನೀಡಲು ಸೂಚಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.