ಮಲೇಶ್ಯ ಮಣಿಸುವ ವಿಸ್ವಾಸದಲ್ಲಿ ಭಾರತ

Update: 2019-04-03 18:45 GMT

ಕೌಲಾಲಂಪುರ, ಎ.3: ಹಲವು ಧನಾತ್ಮಕ ಫಲಿತಾಂಶಗಳ ಬಳಿಕ ಭಾರತ ಮಹಿಳಾ ಹಾಕಿ ತಂಡ ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಗುರುವಾರದಿಂದ ಮಲೇಶ್ಯ ವಿರುದ್ಧ ಆರಂಭವಾಗಲಿರುವ 5 ಪಂದ್ಯಗಳ ಸರಣಿಯಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ತಂಡವನ್ನು ಗೋಲ್‌ಕೀಪರ್ ಸವಿತಾ ಮುನ್ನಡೆಸುತ್ತಿದ್ದಾರೆ.

ಈ ವರ್ಷಾರಂಭದಲ್ಲಿ ಸ್ಪೇನ್ ಪ್ರವಾಸ ಕೈಗೊಂಡಿದ್ದ ಭಾರತ 2018ರ ವಿಶ್ವಕಪ್ ಕಂಚು ವಿಜೇತ ಆತಿಥೇಯ ತಂಡದ ವಿರುದ್ಧ ಒಂದು ಜಯ (5-2), ಎರಡು ಡ್ರಾ (1-1, 2-2) ಹಾಗೂ ಒಂದು ಸೋಲು (2-3) ಕಾಣುವ ಮೂಲಕ ಉತ್ತಮ ಪ್ರದರ್ಶನ ನೀಡಿ ಸದ್ಯ ಮಲೇಶ್ಯ ಸರಣಿಗೆ ತೆರಳಿದೆ.

ಕಳೆದ ವರ್ಷದ ವಿಶ್ವಕಪ್ ರನ್ನರ್‌ಅಪ್ ತಂಡ ಐರ್ಲೆಂಡ್‌ನ್ನು ಒಂದು ಪಂದ್ಯದಲ್ಲಿ 3-0ಯಿಂದ ಸೋಲಿಸಿ ಮತ್ತೊಂದು ಪಂದ್ಯದಲ್ಲಿ 1-1 ಗೋಲು ಡ್ರಾ ಸಾಧಿಸಿದ್ದ ಭಾರತ ತನ್ನ ಪ್ರದರ್ಶನವನ್ನು ಮತ್ತಷ್ಟು ಸುಧಾರಿಸಿದೆ.

‘‘ಯಾವಾಗಲೂ ಪ್ರದರ್ಶನವನ್ನು ಉತ್ತಮವಾಗಿಟ್ಟುಕೊಳ್ಳುವುದು ಸರಳವಲ್ಲ, ಅದಕ್ಕೆ ಶಿಸ್ತು ಹಾಗೂ ಜವಾಬ್ದಾರಿ ಬೇಕಾಗುತ್ತದೆ. ನಮ್ಮ ತಂಡ ಅಂತಹ ನಾಯಕತ್ವವನ್ನು ಬೆಳೆಸಿಕೊಳ್ಳುವುದನ್ನು ನಾನು ಬಯಸುತ್ತೇನೆ. ನಮ್ಮ ಸವಾಲು ಎದುರಾಳಿ ಅಲ್ಲ ಬದಲಾಗಿ ನಾವೇ’’ ಎಂದು ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಜೊಯರ್ಡ್ ಮರಿಜ್ನೆ ಅಭಿಪ್ರಾಯಪಡುತ್ತಾರೆ.

ಮಲೇಶ್ಯವನ್ನು ಪ್ರಮುಖ ಟೂರ್ನಿಯೊಂದರಲ್ಲಿ ಕೊನೆಯ ಬಾರಿ ಭಾರತ ಮಹಿಳಾ ಹಾಕಿ ತಂಡ ಎದುರಿಸಿದ್ದು 2017ರ ಏಶ್ಯಕಪ್‌ನಲ್ಲಿ. ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಭಾರತ 2-0ಯಿಂದ ಗೆದ್ದಿತ್ತು. ಆ ಬಳಿಕ ಫೈನಲ್ ಪಂದ್ಯದಲ್ಲಿ ಚೀನಾವನ್ನು ಮಣಿಸಿ ಪ್ರಶಸ್ತಿ ಎತ್ತಿಹಿಡಿದಿತ್ತು.

ಗುರುವಾರದಿಂದ ಆರಂಭವಾಗುವ ಸರಣಿಯ ಪಂದ್ಯಗಳು ಎ.11ಕ್ಕೆ ಕೊನೆಗೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News