ಎ. 5: ದುಬೈಯಲ್ಲಿ ಬಿಆರ್ ಶೆಟ್ಟಿ ನೇತೃತ್ವದಲ್ಲಿ 'ಹಮ್ ಭಿ ಚೌಕಿದಾರ್' ಎಂಬ ಪಕ್ಷೇತರ ಕಾರ್ಯಕ್ರಮ !

Update: 2019-04-04 19:04 GMT

ದುಬೈ, ಎ.4: ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿಯವರ ನೇತೃತ್ವದಲ್ಲಿ ದುಬೈಯಲ್ಲಿ ಎ.5ರಂದು ನಡೆಯಲಿರು 'ಎನ್ ಆರ್ ಐ ಗ್ಲೋಬಲ್‌ ಬ್ಯುಸಿನೆಸ್ ಸಮ್ಮಿಟ್' ಕಾರ್ಯಕ್ರಮ ರಾಜಕೀಯ ಪ್ರೇರಿತ‌ ಎನ್ನುವ ಆರೋಪಗಳು ಕೇಳಿ ಬಂದಿವೆ.‌

ಬಿ.ಆರ್. ಶೆಟ್ಟಿ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 5000ಕ್ಕೂ ಹೆಚ್ಚು ಎನ್ ಆರ್ ಐಗಳು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಯಕ್ರಮದ ಪೋಸ್ಟರ್‌ಗಳಲ್ಲಿ 'ಹಮ್ ಭಿ ಚೌಕಿದಾರ್' ಎಂದು ಬರೆಯಲಾಗಿದ್ದು, ಲೋಕಸಭಾ ಚುನಾವಣೆ‌ ಹಿನ್ನೆಲೆಯಲ್ಲಿ ಮೋದಿ ಸರಕಾರದ‌‌ ಪರ ಪ್ರಚಾರಕ್ಕಾಗಿ ಉದ್ಯಮಿಗಳ ಸಮಾವೇಶದ ಹೆಸರಲ್ಲಿ ಇದನ್ನು ನಡೆಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ದುಬೈಯಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ, "ಇದು ರಾಜಕೀಯ ಪ್ರೇರಿತ ಕಾರ್ಯಕ್ರಮವೇ ?' ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಂಘಟಕರು, ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ‌ ಕಾರ್ಯಕ್ರಮವಲ್ಲ ಎಂದಿದ್ದಾರೆ ಬಿಆರ್ ಶೆಟ್ಟಿ ಅವರು. ಹಾಗಾದರೆ ಹಮ್ ಭಿ ಚೌಕಿದಾರ್ ಎಂಬ ಘೋಷನೆ ಯಾಕಿದೆ ಎಂದು ಪತ್ರಕರ್ತರು ಕೇಳಿದ್ದಕ್ಕೆ "ಆ ವಾಕ್ಯ ಖುಷಿಯಾಯಿತು, ಅದಕ್ಕೆ ಇಟ್ಟೆವು," ಎಂದು ಬಿಆರ್ ಶೆಟ್ಟಿ ಸಮಜಾಯಿಶಿ ನೀಡಿದ್ದಾರೆ.

ಆದರೆ ಸುದ್ದಿಗೋಷ್ಟಿಯಲ್ಲಿ ಮೋದಿ ಆಪ್ತ ಸ್ವಾಮಿ ಪರಮಾತ್ಮಾನಂದ ಉಪಸ್ಥಿತರಿದ್ದರು. ಅವರು ವಿದೇಶದಲ್ಲಿದ್ದು ದೇಶದ ಚಿಂತನೆ ಮಾಡುವವರು ಎಲ್ಲರೂ ಚೌಕಿದಾರರೇ ಎಂದು ಹೇಳಿದ್ದಾಗಿ ಕೇರಳದ ಮಾಧ್ಯಮಗಳು ವರದಿ ಮಾಡಿವೆ.

ಕಾರ್ಯಕ್ರಮಕ್ಕೆ ಸಂಘ ಪರಿವಾರದ ಭಾಷಣಕಾರ, ಮೋದಿ ಪ್ರಚಾರಕ ಚಕ್ರವರ್ತಿ ಸೂಲಿಬೆಲೆಯವರೂ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬಿಆರ್ ಶೆಟ್ಟಿಯವರು ಬಿಜೆಪಿ ಹಾಗು ಸಂಘ ಪರಿವಾರದ ಬೆಂಬಲಿಗರಾಗಿ ಬಹಿರಂಗವಾಗಿಯೇ ಇತ್ತೀಚೆಗೆ ಗುರುತಿಸಿಕೊಂಡಿದ್ದಾರೆ. ಮೋದಿ ಸರಕಾರವೇ ಮತ್ತೆ ಬರಬೇಕು ಎಂದು ಹೇಳುವ ಅವರು ನಟಿಸಿದ ಜಾಹೀರಾತೊಂದು ಇತ್ತೀಚೆಗೆ ಬಿಡುಗಡೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News