ಈ ವಿರಹದ ವೇದನೆ ಹೇಳತೀರದು !: ಅಷ್ಟು ದುಬಾರಿಯಾಯಿತು ಅಮೆಝಾನ್ ಸ್ಥಾಪಕನಿಗೆ ವಿಚ್ಛೇದನ

Update: 2019-04-05 08:32 GMT

ವಾಷಿಂಗ್ಟನ್: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಜೆಫ್ ಬೆಝೋಸ್ ಹಾಗೂ ಪತ್ನಿ ಮೆಕೆಂಝಿ ವಿಚ್ಛೇದನದಲ್ಲೂ ದಾಖಲೆ ನಿರ್ಮಿಸಿದ್ದಾರೆ. 35 ಶತಕೋಟಿ ಡಾಲರ್ ಮೊತ್ತದ ಈ ವಿಚ್ಛೇದನ ವಿಶ್ವದಲ್ಲೇ ಅತ್ಯಂತ ದುಬಾರಿ ಡೈವೋರ್ಸ್ ಎನಿಸಿಕೊಂಡಿದೆ !

ವಿಚ್ಛೇದನ ಒಪ್ಪಂದದಂತೆ ಆನ್‌ಲೈನ್ ಮಾರಾಟ ದಿಗ್ಗಜ ಸಂಸ್ಥೆ ಅಮೆಝಾನ್ ಹುಟ್ಟುಹಾಕಿದ ಜೆಫ್ ಬೆಝೋಸ್ ಅವರ ಪತ್ನಿ, 25 ವರ್ಷ ಹಳೆಯ ಸಂಸ್ಥೆಯಲ್ಲಿ ಶೇಕಡ 25ರಷ್ಟು ಷೇರು ಉಳಿಸಿಕೊಳ್ಳಲಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಮತ್ತು ಬೆಝೋಸ್ ಅವರ ಬಾಹ್ಯಾಕಾಶ ಯಾನ ಸಂಸ್ಥೆ ಬ್ಲೂ ಒರಿಜಿನ್‌ನ ಎಲ್ಲ ಹಿತಾಸಕ್ತಿಗಳನ್ನು ತ್ಯಜಿಸಲಿದ್ದಾರೆ.

ಇದಕ್ಕೂ ಮೊದಲು 3.8 ಶತಕೋಟಿಯ ಆರ್ಟ್‌ ಡೀಲರ್ ಅಲೆಕ್ ವೈಲ್ಡ್‌ಸ್ಟನ್ ಮತ್ತು ಪತ್ನಿ ಜೊಸಿಲಿನ್ ಅವರ ಡೈವೋರ್ಸ್ ಅತ್ಯಂತ ದುಬಾರಿಯದ್ದು ಎನಿಸಿಕೊಂಡಿತ್ತು.

ಈ ವಿಚ್ಛೇದನ ಒಪ್ಪಂದ ಅಂಶಗಳನ್ನು ಬೆಝೋಸ್ ಪತ್ನಿ ಮೊಟ್ಟಮೊದಲು ಟ್ವೀಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಎಲ್ಲರ ಬೆಂಬಲದೊಂದಿಗೆ ಜೆಫ್ ಜತೆಗಿನ ವಿವಾಹ ವಿಚ್ಛೇದನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಇತ್ಯರ್ಥಕ್ಕೆ ಮುನ್ನ ಬೆಝೋಸ್ ಶೇಕಡ 16.3ರಷ್ಟು ಷೇರುಗಳನ್ನು ಅಮೆಝಾನ್‌ನಲ್ಲಿ ಹೊಂದಿದ್ದರು. ಇವರು ಈ ಪೈಕಿ ಶೇಕಡ 75ರಷ್ಟು ಷೇರುಗಳನ್ನು ಹೊಂದಿರುತ್ತಾರೆ. ಆದರೆ ಮೆಕೆಂಝಿ ತಮ್ಮ ಪಾಲಿನ ಷೇರಿನ ಮತ ಹಕ್ಕನ್ನು ಮಾಜಿ ಪತಿಗೆ ಬಿಟ್ಟುಕೊಟ್ಟಿದ್ದಾರೆ.

ಈ ದಂಪತಿಗೆ ನಾಲ್ವರು ಮಕ್ಕಳಿದ್ದು, 1994ರಲ್ಲಿ ಬೆಝೋಸ್ ಕಂಪನಿ ಹುಟ್ಟುಹಾಕುವ ಮೊದಲಿನಿಂದಲೂ ಜತೆಗಿದ್ದಾರೆ. ಮೆಕೆಂಝಿ ಈ ಕಂಪನಿಯ ಸಂಸ್ಥಾಪಕ ಉದ್ಯೋಗಿಗಳಲ್ಲಿ ಒಬ್ಬರು. ಕಳೆದ ವರ್ಷ 232.8 ಶತಕೋಟಿ ಡಾಲರ್ ವಹಿವಾಟು ನಡೆಸಿದ್ದ ಅಮೆಝಾನ್‌ನಿಂದಾಗಿ ಬೆಝೋಸ್ ಹಾಗೂ ಅವರ ಕುಟುಂಬ 131 ಶತಕೋಟಿ ಡಾಲರ್ ಮೌಲ್ಯದ ಆಸ್ತಿ ಸಂಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News