ನ್ಯಾಶನಲ್ ಹೆರಾಲ್ಡ್ ಕಚೇರಿ ತೆರವಿಗೆ ದಿಲ್ಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

Update: 2019-04-05 18:48 GMT

ಹೊಸದಿಲ್ಲಿ, ಎ.5: ಇಲ್ಲಿರುವ ಹೆರಾಲ್ಡ್ ಹೌಸ್ ಕಟ್ಟಡವನ್ನು ತೆರವುಗೊಳಿಸುವಂತೆ ನ್ಯಾಷನಲ್ ಹೆರಾಲ್ಡ್ ಪ್ರಕಾಶಕರಾದ ಅಸೋಸಿಯೇಟೆಡ್ ಜರ್ನಲ್ಸ್ ಲಿ(ಎಜೆಎಲ್)ಗೆ ಸೂಚನೆ ನೀಡಿದ್ದ ದಿಲ್ಲಿ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ಎಜೆಎಲ್ ಅರ್ಜಿಯ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠವು ಕೇಂದ್ರದ ‘ಲ್ಯಾಂಡ್ ಆ್ಯಂಡ್ ಡೆವಲಪ್‌ಮೆಂಟ್ ಆಫೀಸ್(ಎಲ್‌ಆ್ಯಂಡ್‌ಡಿಒ)ಗೆ ನೋಟಿಸ್ ಜಾರಿಗೊಳಿಸಿದೆ.

ರಾಷ್ಟ್ರೀಯ ರಾಜಧಾನಿಯ ಐಟಿಒ ಪ್ರದೇಶದಲ್ಲಿರುವ ಹೆರಾಲ್ಡ್ ಹೌಸ್ ಕಟ್ಟಡವನ್ನು ಬಲವಂತವಾಗಿ ತೆರವುಗೊಳಿಸುವ ಕೇಂದ್ರ ಸರಕಾರದ ಯಾವುದೇ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಎಜೆಎಲ್ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ತಳ್ಳಿಹಾಕಿದ್ದು ಲೀಸ್ ಷರತ್ತನ್ನು ಎಜೆಎಲ್ ಉಲ್ಲಂಘಿಸಿದೆ ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿ ಎಜೆಎಲ್ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

ಎಜೆಎಲ್ ಶೇರುಗಳನ್ನು ಯಂಗ್ ಇಂಡಿಯಾ (ವೈಐ) ಕಂಪೆನಿಗೆ ವರ್ಗಾಯಿಸಿರುವ ವ್ಯವಹಾರ ರಹಸ್ಯ, ಕುಟಿಲ ಕ್ರಮವಾಗಿದೆ ಎಂಬ ವಾದವನ್ನು ದಿಲ್ಲಿ ಹೈಕೋರ್ಟ್ ಎತ್ತಿಹಿಡಿದಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ತಾಯಿ ಸೋನಿಯಾ ಗಾಂಧಿ ವೈಐ ಕಂಪೆನಿಯ ಹೆಚ್ಚಿನ ಸಂಖ್ಯೆಯ ಶೇರುಗಳನ್ನು ಹೊಂದಿದ್ದಾರೆ.

ಲೀಸ್ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಈ ಕಟ್ಟಡದಲ್ಲಿ ಯಾವುದೇ ಮುದ್ರಣ ಮತ್ತು ಪ್ರಕಟಣೆ ಪ್ರಕ್ರಿಯೆ ನಡೆಯುತ್ತಿಲ್ಲ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತಿರುವ ಹಿನ್ನೆಲೆಯಲ್ಲಿ 56 ವರ್ಷದ ಲೀಸ್ ಗುತ್ತಿಗೆಯನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರಕಾರ 2018ರ ಅಕ್ಟೋಬರ್ 30ರಂದು ಸೂಚನೆ ನೀಡಿತ್ತು.

ಈಗ ಕೇಂದ್ರದಲ್ಲಿರುವ ಆಡಳಿತ ವ್ಯವಸ್ಥೆ ನೆಹರೂ ಸಿದ್ಧಾಂತದ ಕುರಿತ ತನ್ನ ದ್ವೇಷಭಾವನೆಯನ್ನು ಜಾಹೀರುಗೊಳಿಸಿದೆ. ಪ್ರತಿಯೊಂದು ವಿಷಯಕ್ಕೂ ನೆಹರೂರನ್ನು ದೂರುವುದು ಕೇಂದ್ರ ಸರಕಾರದ ಜಾಯಮಾನವಾಗಿದೆ ಎಂದು ಎಜೆಎಲ್ ಹೈಕೋರ್ಟ್‌ಗೆ ಸಲ್ಲಿಸಿದ್ದ ಮನವಿಯಲ್ಲಿ ತಿಳಿಸಿತ್ತು. ಅಲ್ಲದೆ ಇಂಗ್ಲಿಷ್ ದಿನಪತ್ರಿಕೆ ನ್ಯಾಷನಲ್ ಹೆರಾಲ್ಡ್‌ನ ಡಿಜಿಟಲ್ ಆವೃತ್ತಿ, ಹಿಂದಿಯ ನವಜೀವನ್ ಮತ್ತು ಉರ್ದುವಿನ ಕ್ವಾಮಿ ಆವಾಝ್ ಪತ್ರಿಕೆಗಳು 2016-17ರಿಂದ ಕಾರ್ಯನಿರ್ವಹಿಸುತ್ತಿವೆ . ಜೊತೆಗೆ 2017ರ ಸೆ.24ರಿಂದ ‘ನ್ಯಾಷನಲ್ ಹೆರಾಲ್ಡ್ ಆನ್ ಸಂಡೆ’ ಪತ್ರಿಕೆ ಆರಂಭವಾಗಿದ್ದು ಇದರ ಪ್ರಕಾಶನ ಸ್ಥಳ ಐಟಿಒ ಕಟ್ಟಡದ ಆವರಣವಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News