ಮಾನವೀಯತೆ ಮೆರೆದ ಸಂಸದ ಡಿ.ಕೆ.ಸುರೇಶ್

Update: 2019-04-07 13:29 GMT

ಬೆಂಗಳೂರು, ಎ.7: ದ್ವಿಚಕ್ರ ವಾಹನ ಅಪಘಾತವಾಗಿ ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಿ.ಕೆ. ಸುರೇಶ್ ಮಾನವೀಯತೆ ಮೆರೆದಿದ್ದಾರೆ.

ಶನಿವಾರ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ತಮ್ಮ ಸ್ವಗ್ರಾಮ ದೊಡ್ಡಹಾಳಲ್ಲಿಗೆ ತೆರಳುತ್ತಿರುವಾಗ ಕನಕಪುರ ಸಮೀಪದ ಹರಲಾಳು ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಮುಖಾಮುಖಿ ಅಪಘಾತ ಸಂಭವಿಸಿತು. ಅಪಘಾತದಲ್ಲಿ ಇಬ್ಬರು ಯುವಕರು ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿರುವುದನ್ನು ನೋಡಿದ ಡಿ.ಕೆ.ಸುರೇಶ್, ತಕ್ಷಣವೇ ಆ ಯುವಕರ ನೆರವಿಗೆ ಧಾವಿಸಿದರು.

ಅಪಘಾತಗೊಂಡವರ ಪೈಕಿ ಓರ್ವ ಯುವಕನನ್ನು ಹರಲಾಳು ಗ್ರಾಮದ ಶಿವಸ್ವಾಮಿ (19) ಹಾಗೂ ಮತ್ತೊಬ್ಬ ಯುವಕ ಹೊಂಗನಹಳ್ಳಿ ಗ್ರಾಮದ ನವೀನ್(28) ಎಂದು ಹೇಳಲಾಗಿದೆ. ಒಬ್ಬ ಯುವಕನನ್ನು ಸುರೇಶ್ ತಮ್ಮದೇ ಎಸ್ಕಾರ್ಟ್ ವಾಹನದಲ್ಲಿ ಹಾಗೂ ಮತ್ತೊಬ್ಬ ಯುವಕನನ್ನು ಇನ್ನೊಂದು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿದರು.

ಶಿವಸ್ವಾಮಿ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದು, ನವೀನ್‌ನನ್ನು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಗೊಂಡ ಸಂದರ್ಭದಲ್ಲಿ ಹಬ್ಬದ ಪ್ರಯುಕ್ತ ರಜೆ ಇದ್ದರೂ ಆರೋಗ್ಯ ಕೇಂದ್ರಕ್ಕೆ ಕರೆ ಮಾಡಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಡಿ.ಕೆ.ಸುರೇಶ್, ನಂತರ ಯುವಕನ ಚಿಕಿತ್ಸೆ ಕುರಿತು ನಿಮ್ಹಾನ್ಸ್ ವೈದ್ಯಾಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಈ ಎಲ್ಲ ಕಾರ್ಯ ಮುಗಿಸಿದ ನಂತರ ಅವರು ತಮ್ಮ ಸ್ವಗ್ರಾಮಕ್ಕೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News