ಕಾಂಗ್ರೆಸ್ಸಿಗರಿಂದ ಕೀಳುಮಟ್ಟದ ರಾಜಕೀಯ: ಡಿ.ವಿ.ಸದಾನಂದಗೌಡ

Update: 2019-04-07 14:52 GMT

ಬೆಂಗಳೂರು, ಎ.7: ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಕಾಂಗ್ರೆಸ್ಸಿಗರು ತನ್ನ ವಿರುದ್ಧ ಅಪ ಪ್ರಚಾರದಲ್ಲಿ ತೊಡಗಿದ್ದು, ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಟೀಕಿಸಿದರು.

ರವಿವಾರ ಬೆಳಗ್ಗೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡ, ನಾನು ಕ್ಷೇತ್ರಕ್ಕೆ ಭೇಟಿ ನೀಡಿಲ್ಲ ಎಂದು ಆರೋಪಿಸುತ್ತಿದ್ದಾರೆ ಎಂದರು.

ನಾನು ನನ್ನ ಕ್ಷೇತ್ರದ ಜತೆಗೆ ಕೇಂದ್ರ ಸಚಿವನಾಗಿ ರಾಜ್ಯ ಮತ್ತು ದೇಶದಲ್ಲೂ ಪ್ರವಾಸ ಕೈಗೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ ಎಂದು ಸದಾನಂದ ಗೌಡ ತಿರುಗೇಟು ನೀಡಿದರು. ದೇಶದಲ್ಲಿ ಹಲವು ದಶಕಗಳ ಕಾಲ ಆಡಳಿತ ನಡೆಸಿದರೂ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಆದುದರಿಂದ, ಅವರು ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪಿಸದೆ ಟೀಕೆ ಮಾಡುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆ ಸೇರಿದಂತೆ ಹಲವು ಕಾರ್ಯಗಳಲ್ಲಿ ನಾನು ಉತ್ತಮ ಸಂಸದ ಎಂದು ಬಿ ಪ್ಯಾಕ್ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಸಂಸದರ ಅನುದಾನ ಮಾತ್ರವಲ್ಲದೆ ಆದರ್ಶ ಗ್ರಾಮ ಯೋಜನೆಯಡಿ ಬ್ಯಾಟರಾಯನಪುರ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರದ ಗ್ರಾಮಗಳನ್ನು ಸರ್ವತೋಮುಖವಾಗಿ ಅಭಿವೃದ್ದಿಪಡಿಸಿದ್ದೇನೆ ಎಂದು ಸದಾನಂದಗೌಡ ಹೇಳಿದರು.

ವಾರ್ಡ್‌ಗಳಿಗೆ ತೆರಳುವ ಕೃಷ್ಣಭೈರೇಗೌಡ, ಈ ವಾರ್ಡ್‌ಗೆ ನಾನು ಭೇಟಿ ನೀಡಿಲ್ಲ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ನಾನು ಪಾಲಿಕೆ ಸದಸ್ಯನಲ್ಲ. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಪಾಲಿಕೆ ಸದಸ್ಯರಿರುತ್ತಾರೆ. ನಾನು ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿದ್ದು, ಕೃಷ್ಣಭೈರೇಗೌಡರ ರೀತಿ ಬ್ಯಾಟರಾಯನಪುರಕ್ಕೆ ಮಾತ್ರ ಸೀಮಿತಗೊಂಡಿಲ್ಲ ಎಂದು ಅವರು ತಿರುಗೇಟು ನೀಡಿದರು.

ಇದೇ ವೇಳೆ ಟೆಂಪಲ್ಸ್ ಬೆಲ್ ಅಪಾರ್ಟ್‌ಮೆಂಟ್‌ಗೆ ತೆರಳಿ ಮತಯಾಚಿಸಿದ ಸದಾನಂದಗೌಡ, ನೀವೆಲ್ಲಾ ವಿದ್ಯಾವಂತರಾಗಿದ್ದು, ರಾಜ್ಯ ಮತ್ತು ಕೇಂದ್ರದಲ್ಲಿ ಯಾವ ವಿದ್ಯಮಾನಗಳು ನಡೆಯುತ್ತಿವೆ ಎಂಬುದನ್ನು ವಿಶ್ಲೇಷಿಸಿ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿರುವ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಕ್ಷೇತ್ರದ ಸಂಸದನಾಗಿ ನಾನು ಕಳೆದ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಅದರ ಪ್ರಗತಿ ವರದಿಯನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದು, ಇದನ್ನು ಅವಲೋಕಿಸಿ ನನ್ನನ್ನು ಬೆಂಬಲಿಸುವಂತೆ ಸದಾನಂದ ಗೌಡ ಕೋರಿದರು. ದೇಶದ ರಕ್ಷಣೆ ವಿಚಾರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ರಾಜಿ ಮಾಡಿಕೊಳ್ಳುವುದಿಲ್ಲ. ಸದೃಢ ಭಾರತ ನಿರ್ಮಾಣಕ್ಕಾಗಿ ಮೋದಿ ಶ್ರಮಿಸುತ್ತಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿರುವ ಬಿಜೆಪಿಗೆ ತಮ್ಮ ಮತವನ್ನು ನೀಡಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮಾಜಿ ಉಪ ಮೇಯರ್ ಎಸ್.ಹರೀಶ್, ಮುಖಂಡರಾದ ರಾಜೇಂದ್ರಕುಮಾರ್, ಪ್ರಸನ್ನ, ಆನಂದ್, ಗಂಗಹನುಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News