×
Ad

ರಾಜ್ಯ ಸರಕಾರದಿಂದ ಕೇಂದ್ರದ ಹಣ ದುರ್ಬಳಕೆ: ಅರವಿಂದ್ ಲಿಂಬಾವಳಿ ಆರೋಪ

Update: 2019-04-07 21:35 IST

ಬೆಂಗಳೂರು, ಎ.7: ಕೇಂದ್ರ ಸರಕಾರ ರಾಜ್ಯದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ.ಅನುದಾನ ಬಿಡುಗಡೆ ಮಾಡಿದರೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಹಣವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಆಪಾದಿಸಿದ್ದಾರೆ.

ರವಿವಾರ ನಗರದ ಮಲ್ಲೇಶ್ವರಂನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಕುಡಿಯುವ ನೀರಿಗಾಗಿ 1762 ಕೋಟಿ, ಎನ್‌ಡಿಆರ್‌ಎಫ್ ಅಡಿಯಲ್ಲಿ 7170 ಕೋಟಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಗಾಗಿ 6240 ಕೋಟಿ ರೂ.ನೀಡಿದೆ. ಆದರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಈ ಹಣವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎಂದು ಆಪಾದಿಸಿದರು.

ಧಾರವಾಡ ಕ್ಷೇತ್ರದ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೆಸರನ್ನು ಬಳಸದೆ ಮತಗಳನ್ನು ಕೇಳುತ್ತೇವೆ. ನೀವು(ಬಿಜೆಪಿ)ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಬಳಸದೆ ಜನರಲ್ಲಿ ಮತಗಳನ್ನು ಕೇಳಿ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಆದರೆ, ಈಗಾಗಲೇ ವಿನಯ್ ಕುಲಕರ್ಣಿ ಸೇರಿ ಇತರೆ ಕಾಂಗ್ರೆಸ್ ಅಭ್ಯರ್ಥಿಗಳಿಗೂ ರಾಹುಲ್ ಗಾಂಧಿ ಅವರ ಹೆಸರು ಹೇಳಿ ಮತ ಕೇಳಿದರೆ ಮತ ಹಾಕುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ, ರಾಹುಲ್ ಹೆಸರು ಹೇಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ನಮಗೆ ಬಿಜೆಪಿ ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿದರೆ ಜನರು ನಮ್ಮ ಅಭ್ಯರ್ಥಿಗಳಿಗೆ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ 5 ವರ್ಷದಲ್ಲಿ ಕರ್ನಾಟಕಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದೆ. ಅದರಲ್ಲಿ ಎಷ್ಟು ಹಣವನ್ನು ಖರ್ಚು ಮಾಡಲಾಗಿದೆಯೆಂಬುದರ ಬಗ್ಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವು ಆಡಿಟ್ ವರದಿಯನ್ನು ಜನರ ಎದುರು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಾರ್ಯಕ್ರಮಗಳಲ್ಲಿ ಮತದಾರರು ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ ಕಾರ್ಯಕರ್ತರು ಮತದಾರರ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News