ಮಾದಕ ವಸ್ತು ಮಾರಾಟ: ವಿದೇಶಿ ಪ್ರಜೆ ಸೆರೆ; 10 ಕೆಜಿ ಗಾಂಜಾ ಜಪ್ತಿ

Update: 2019-04-07 17:47 GMT

ಬೆಂಗಳೂರು, ಎ.7: ಮಾದಕ ವಸ್ತು ಗಾಂಜಾ ವಶದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ನೈಝೀರಿಯಾ ದೇಶದ ಓರ್ವನನ್ನು ಬಂಧಿಸಿ, 5 ಲಕ್ಷ ಮೌಲ್ಯದ 10 ಕೆ.ಜಿ. ಗಾಂಜಾ ಜಪ್ತಿ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನೈಝೀರಿಯಾ ಮೂಲದ ಯೂಸಫ್ ಬಂಧಿತ ಆರೋಪಿ ಎಂದು ಸಿಸಿಬಿ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

ನಗರದ ಹೊರಮಾವು ಬಳಿಯ ಮುನಿತಾಯಪ್ಪ ಲೇಔಟ್‌ನ 2ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ಆರೋಪಿ ಯೂಸಫ್ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು, ಸಂಗ್ರಹಿಸಿ ಇಟ್ಟಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯು ನೈಝೀರಿಯಾ ದೇಶದಿಂದ ವಿದ್ಯಾಭ್ಯಾಸಕ್ಕಾಗಿ ಭಾರತಕ್ಕೆ ಬಂದು ಕಲ್ಕೆರೆಯಲ್ಲಿ ವಾಸ್ತವ್ಯ ಹೂಡಿ, ತಮಿಳುನಾಡು ಮೂಲದ ವ್ಯಕ್ತಿಯಿಂದ ಗಾಂಜಾ ಖರೀದಿ ಮಾಡಿಕೊಂಡು ಬಂದು ತನ್ನ ವಶದಲ್ಲಿಟ್ಟುಕೊಂಡು ತನ್ನದೇ ವ್ಯವಸ್ಥಿತ ರೀತಿಯಲ್ಲಿ ಜಾಲ ಸಂಘಟಿಸಿ, ಪರಿಚಿತರಿಗೆ ಮಾರಾಟ ಮಾಡುತ್ತಿರುವ ಅಂಶ ಪ್ರಾಥಮಿಕ ವಿಚಾರಣೆಯಿಂದ ಬೆಳಕಿಗೆ ಬಂದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈತನ ವಶದಲ್ಲಿದ್ದ ಮಾದಕ ವಸ್ತು 10 ಕೆ.ಜಿ ತೂಕದ ಗಾಂಜಾ, ಎರಡು ಮೊಬೈಲ್ ನಗದು ಜಪ್ತಿ ಮಾಡಿ, ಇಲ್ಲಿನ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News