ಬೆಂಗಳೂರು ಉತ್ತರ ಕ್ಷೇತ್ರ: ವಿಶಿಷ್ಟ ರೀತಿಯಲ್ಲಿ ಕೃಷ್ಣ ಭೈರೇಗೌಡ ಪ್ರಚಾರ

Update: 2019-04-07 18:04 GMT

ಬೆಂಗಳೂರು, ಎ.7: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇಗೌಡ ರವಿವಾರ ನಗರದ ಒರಾಯನ್ ಮಾಲ್ ನಲ್ಲಿ ವಿಶಿಷ್ಟ ರೀತಿಯ ಚುನಾವಣಾ ಪ್ರಚಾರ ನಡೆಸಿದರು.

ಒರಾಯನ್ ಮಾಲ್ ನಲ್ಲಿ ನಡೆದ ಆಕರ್ಷಕ ಫ್ಲಾಶ್ ಮಾಬ್ ಡ್ಯಾನ್ಸ್‌ನಲ್ಲಿ ಕಾಣಿಸಿಕೊಂಡ ಕೃಷ್ಣ ಭೈರೇಗೌಡ, ಸ್ಥಳದಲ್ಲಿದ್ದ ಯುವಕರೊಂದಿಗೆ ಮಾತುಕತೆ ನಡೆಸಿ, ಮತದಾನದ ಮಹತ್ವ ವಿವರಿಸಿದರು. ಹೈ-ಫೈ ಜನರಲ್ಲಿ ಹಾಗೂ ಯುವ ಸಮೂಹದಲ್ಲಿ ಚುನಾವಣಾ ಮಹತ್ವದ ಅರಿವು ಮೂಡಿಸಲಿಕ್ಕಾಗಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಾಲ್ ಗೆ ಆಗಮಿಸಿದ್ದ ಜನರಿಗೆ ಖುದ್ದಾಗಿ ಕೃಷ್ಣ ಭೈರೇಗೌಡ ತಮ್ಮ ಪರಿಚಯ ಹೇಳಿಕೊಂಡರು.

ಬೆಂಗಳೂರಿನಂತ ಕಾಸ್ಮೊಪಾಲಿಟಿನ್ ನಗರದಲ್ಲಿ ಎಲ್ಲ ವರ್ಗದ ಜನರು ಇದ್ದಾರೆ. ಅದರಲ್ಲೂ ಅತಿ ಹೆಚ್ಚು ವಿದ್ಯಾವಂತರು ನಗರದಲ್ಲಿ ವಾಸವಿದ್ದಾರೆ. ಆದರೆ, ಯಾವುದೇ ಚುನಾವಣೆಯಲ್ಲೂ ನಗರದ ಕ್ಷೇತ್ರಗಳಲ್ಲಿ ಶೇ.50-55ಕ್ಕಿಂತ ಹೆಚ್ಚಿನ ಮತದಾನ ಆಗುತ್ತಿಲ್ಲ. ವಿದ್ಯಾವಂತರ ನಗರದಲ್ಲಿ ಇಂತಹ ಧೋರಣೆ ಶೋಭೆ ತರುವುದಿಲ್ಲ. ಜನರಲ್ಲಿ ಪ್ರಜಾಪ್ರಭುತ್ವದ ಹಾಗೂ ಮತದಾನದ ಜಾಗೃತಿ ಮೂಡಿಸಬೇಕಿದೆ ಎಂದರು.

ನಾನು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವಿವೇಚನೆಯಿಂದ ಮತ ಚಲಾಯಿಸಿ. ಮತ ಚಲಾಯಿಸುವುದು ಬರೀ ಹಕ್ಕು ಅಷ್ಟೇ ಅಲ್ಲ, ಅದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಹೀಗಾಗಿ ಮತ ಚಲಾಯಿಸಿ ನಿಮ್ಮ ಜವಾಬ್ದಾರಿ ನಿಭಾಯಿಸಿ ಎಂದು ಅವರು ಮನವಿ ಮಾಡಿದರು.

ಒರಯಾನ್ ಮಾಲ್ ಗೆ ಆಗಮಿಸುವ ಮುನ್ನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ದೇವಸಂದ್ರ, ಬಸವನಪುರ ಏರಿಯಾಗಳಿಗೆ ತೆರಳಿ ಶಾಸಕ ಭೈರತಿ ಬಸವರಾಜು ಹಾಗೂ ಜೆಡಿಎಸ್ ಮುಖಂಡ ಗೋಪಾಲ್ ಜೊತೆ ಕಾರ್ಯಕರ್ತರ ಸಭೆಗಳನ್ನು ನಡೆಸಿ ಮತಯಾಚನೆ ಮಾಡಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಭಾಗಿಯಾಗಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಸ್ಥಳೀಯ ನಾಯಕರಿಗೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News