ಮೋದಿ.. ಮೋದಿ ಎನ್ನುವವರ ಮನೆಯಲ್ಲಿ ಅನ್ನಭಾಗ್ಯದ ಅಕ್ಕಿ: ರಮಾನಾಥ ರೈ

Update: 2019-04-08 05:08 GMT

ಬಂಟ್ವಾಳ, ಎ.8: ಚುನಾವಣಾ ಪ್ರಚಾರಕ್ಕೆ ವಿಷಯವಿಲ್ಲದೆ ‘ಮತ್ತೊಮ್ಮೆ ಮೋದಿ... ಮತ್ತೊಮ್ಮೆ ಮೋದಿ’ ಎಂದು ಬಿಜೆಪಿ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಇವರ ಮನೆಯಲ್ಲಿ ಬೇಯಿತ್ತಿರುವುದು ಮಾತ್ರ ಸಿದ್ದರಾಮಯ್ಯ ಸರಕಾರದ ಅನ್ನಭಾಗ್ಯದ ಅಕ್ಕಿ ಎಂದುದ.ಕ. ಕಾಂಗ್ರೆಸ್-ಜೆಡಿಎಸ್ ಜಂಟಿ ಚುನಾವಣಾ ಸಮಿತಿಯ ಅಧ್ಯಕ್ಷ ಬಿ.ರಮಾನಾಥ ರೈಟೀಕಿಸಿದ್ದಾರೆ.

ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರ ಚುನಾವಣಾ ಪೂರ್ವ ತಯಾರಿಯ ಬಗ್ಗೆ ‘ವಾರ್ತಾಭಾರತಿ’ ಜೊತೆ ಅವರು ಮಾತನಾಡಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಮತ್ತು ಬರಲೂಬಾರದು. ಒಂದು ವೇಳೆ ಬಂದರೆ ಅದರಿಂದ ದೇಶದ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಅಪಾಯ ಖಂಡಿತ ಎಂದು ರಮಾನಾಥ ರೈ ಅಭಿಪ್ರಾಯಿಸಿದ್ದಾರೆ.

ಈ ಚುನಾವಣೆ ಯಾರೊಬ್ಬರ ಶಕ್ತಿ ಪ್ರದರ್ಶನವಲ್ಲ. ದೇಶದ ಭವಿಷ್ಯವನ್ನು ರೂಪಿಸುವ ಮತ್ತು ತೀರ್ಮಾನ ಮಾಡುವ ಚುನಾವಣೆ. ಈ ದೇಶಕ್ಕೆ ಯಾರು ಬೇಕು? ಯಾರು ಬೇಡ? ಎಂಬ ನಿರ್ಧಾರವನ್ನು ಮುಂದಿಟ್ಟು ಈ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಒಂದು ವೇಳೆ ಬಿಜೆಪಿ ಜಯಿಸಿದರೆ, ಮುಂದಿನ ದಿನಗಳಲ್ಲಿ ಚುನಾವಣೆ ಇರುತ್ತದೋ?, ಇಲ್ಲವೋ? ಎಂಬುದು ಗೊತ್ತಿಲ್ಲ. ಅದಲ್ಲದೆ, ನಮ್ಮ ಸಂವಿಧಾನಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಚುನಾವಣೆ ಸಂವಿಧಾನದ ಅಳಿವು-ಉಳಿವಿನ ಪ್ರಶ್ನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

►ಮೋದಿಯಿಂದ ಸಮಾಜದ ವಿಭಜನೆ

ನರೇಂದ್ರ ಮೋದಿ ಸಮಾಜವನ್ನು ವಿಭಜನೆ ಮಾಡುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಹುಲ್ ಗಾಂಧಿ ಹಿಂದೂಗಳಿಗೆ ಹೆದರಿ ವಯನಾಡ್‌ಗೆ ಓಡಿದ್ದಾರೆ ಎಂದು ಹೇಳಿರುವ ಮೋದಿ ಮಾತಿಗೆ ಬೇರೆಯೆ ಅರ್ಥ ಬರುತ್ತದೆ. ದೇಶದ ಪ್ರಧಾನಿಯೆ ಸಮಾಜವನ್ನು ಒಡೆಯುವ ಹೇಳಿಕೆ ನೀಡಿದರೆ, ಈ ಸಮಾಜ ಎಲ್ಲಿಗೆ ಹೋಗಿ ತಲುಪಬಹುದು ಎಂದು ಜನರು ಚಿಂತಿಸಬೇಕಿದೆ ಎಂದು ಹೇಳಿದರು.

► ಕಾಂಗ್ರೆಸ್ ನನಗೆ ಸಾಕಷ್ಟು ಅವಕಾಶ ಕೊಟ್ಟಿದೆ

ಮಿಥುನ್ ರೈ ಉತ್ಸಾಹಿ ಯುವಕ, ಕಾರ್ಯಕರ್ತ ಮತ್ತು ಯುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ. ಅದಕ್ಕಾಗಿ ಹೈಕಮಾಂಡ್ ಈ ಬಾರಿ ಯುವಕರಿಗೆ ಅವಕಾಶ ಕಲ್ಪಸಿದೆ. ಟಿಕೆಟ್ ವಿಚಾರದಲ್ಲಿ ಯಾವುದೆ ಗೊಂದಲಗಳಿರಲಿಲ್ಲ. ಕಾಂಗ್ರೆಸ್‌ನಿಂದ ನನಗೆ ಸಾಕಷ್ಟು ಅವಕಾಶಗಳು ಲಭಿಸಿವೆ. ಒಂದು ಪಕ್ಷ 8 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟ ಋಣ ತನ್ನ ಮೇಲಿದೆ. ಮೂರು ಬಾರಿ ಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿಯಾಗಿ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಈ ಋಣ ತೀರಿಸಲು ಮತ್ತು ಪಕ್ಷದ ಋಣಮುಕ್ತನಾಗಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್‌ನಲ್ಲಿ ಬಹಳ ಸಂತೋಷದಲ್ಲಿದ್ದು, ಮಿಥನ್ ರೈ ಗೆಲುವಿಗಾಗಿ ಪೂರ್ಣ ಮನಸ್ಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಬಿಚ್ಚು ಮನಸ್ಸಿನಿಂದ ಹೇಳಿದರು.

► ಮೋದಿ-ನಳಿನ್ ಸಾಧನೆ ಶೂನ್ಯ

ದೇಶಕ್ಕೆ ನರೇಂದ್ರ ಮೋದಿ ಅವರ ಕೊಡುಗೆ ಶೂನ್ಯ. ಅದೇ ರೀತಿ ದ.ಕ. ಜಿಲ್ಲೆಗೆ ಸಂಸದ ನಳಿನ್ ಕುಮಾರ್ ಕಟೀಲು ಕೊಡುಗೆ ಡಬಲ್ ಶೂನ್ಯ. ದ.ಕ. ಜಿಲ್ಲೆ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ಹಿಂದುಳಿದಿದೆ. ಇದನ್ನು ಬಿಜೆಪಿಯವರು ಕೂಡಾ ಒಪ್ಪಿಕೊಂಡಿದ್ದಾರೆ. ದೇಶಕ್ಕೆ ಮತ್ತು ಜಿಲ್ಲೆಗೆ ಮೋದಿ ಹಾಗೂ ಬಿಜೆಪಿ ಸಂಸದರ ಕೊಡುಗೆ ಏನು? ಎಂದು ಪ್ರಶ್ನಿಸಿದ ಅವರು, ಒಎನ್‌ಜಿಸಿ, ಎಂಆರ್‌ಪಿಎಲ್, ವಿಮಾನ ನಿಲ್ದಾಣ, ಹಡಗು ನಿಲ್ದಾಣ, ಎನ್‌ಐಟಿಕೆ ಇಂಜಿನಿಯರ್ ಕಾಲೇಜು, ಪಾಸ್‌ಪೋರ್ಟ್ ರೀಜನಲ್ ಕಚೇರಿ, ರೈಲ್ವೇ ಜಾಲಗಳ ಅಭಿವೃದ್ಧಿ ಜಿಲ್ಲೆಗೆ ಕಾಂಗ್ರೆಸ್ ನೀಡಿದ ಕೊಡುಗೆ. ಸಂಸದರಾಗಿ ಶ್ರೀನಿವಾಸ್ ಮೂಲ್ಯ, ಶಂಕರ ಆಳ್ವ, ಜನಾರ್ದನ ಪೂಜಾರಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಬಿಜೆಪಿಯ ಸಂಸದರ ಶ್ರಮ ಹಾಗೂ ಪಾತ್ರ ಇದರಲಿಲ್ಲ ಎಂದು ವಿವರಿಸಿದರು.

► ಅವಧಿ ಮುಕ್ತಾಯವಾಗುವಾಗ ಕಾಮಗಾರಿಗೆ ಶಂಕುಸ್ಥಾಪನೆ

ದ.ಕ. ಜಿಲ್ಲೆಗೆ 16 ಸಾವಿರ ಕೋಟಿ ರೂ. ಮಂಜೂರಾಗಿದೆಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳುತ್ತಾ ತಿರುಗು ತ್ತಿದ್ದಾರೆ. ಹಾಗಾದರೆ ಆ ಅನುದಾನವೆಲ್ಲ ಎಲ್ಲಿಗೆ ಹೋದವು ಎಂದು ಪ್ರಶ್ನಿಸಿದ ರೈ, ಸಾಮಾನ್ಯವಾಗಿ ಐದು ವರ್ಷಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಚುನಾವ ಣೆಯ ಪೂರ್ವದಲ್ಲಿ ಉದ್ಘಾಟನೆ ಮಾಡುತ್ತಾರೆ. ಆದರೆ, ನಳಿನ್ ಆಗಲ್ಲ. ಈ ಮೊದಲು ಆರಂಭಿಸಿರುವ ಕಾಮ ಗಾರಿಯನ್ನು ಅರ್ಧದಲ್ಲೆ ಕೈಬಿಟ್ಟು ಅವಧಿ ಮುಗಿಯುವ ಹಂತದಲ್ಲಿ ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡು ತ್ತಾರೆ ಎಂದು ವ್ಯಂಗ್ಯವಾಡಿದರು.

► ಬಿಜೆಪಿಯಿಂದ ದುರ್ಬಲ ವರ್ಗಕ್ಕೆ ಮೋಸ

ಜನರನ್ನು ಮೋಸ ಮಾಡುವುದೇ ಬಿಜೆಪಿಯ ಉದ್ದೇಶ. ಬಲಿಷ್ಠ ವರ್ಗದವರಿಗೆ ಸಹಾಯ ಮಾಡುವುದು ಮತ್ತು ದುರ್ಬಲ ವರ್ಗದ ಜನರಿಗೆ ಮೋಸ ಮಾಡುವುದೆ ಬಿಜೆಪಿಯ ಅಜೆಂಡಾ. ಆದರೆ ಕಾಂಗ್ರೆಸ್ ಬಡವರಿಗೆ, ದುರ್ಬಲ ವರ್ಗ, ಅಲ್ಪಸಂಖ್ಯಾತ, ಪರಿಶಿಷ್ಟರ ಪರವಾಗಿದೆ. ಕಾಂಗ್ರೆಸ್‌ನ ಈ ನೀತಿ ಬಿಜೆಪಿ ಸಹಿಸಲಾಗುತ್ತಿಲ್ಲ. ಇದು ಸ್ವಾಭಾವಿಕ. ಇಂದಿರಾ ಗಾಂಧಿ ಜಾರಿಗೊಳಿಸಿದ್ದ ಭೂಮಸೂದೆ ಕಾಯ್ದೆಯಿಂದ ಭೂ ವಂಚಿತರಾಗಿರುವ ಬಲಿಷ್ಠ ವರ್ಗದವರೆ ಬಿಜೆಪಿಯ ಓಟ್ ಬ್ಯಾಂಕ್ ಎಂದರು.

► ಹರಿಕೃಷ್ಣ ಬಂಟ್ವಾಳ ಪಕ್ಷಾಂತರಿ

ಹರಿಕೃಷ್ಣ ಬಂಟ್ವಾಳ ಪಕ್ಷ ವಿರೋಧಿ ಚಟುವಟಿಕೆಯಿಂದ ಪಕ್ಷದಿಂದ ಉಚ್ಛಾಟನೆಗೊಂಡವರು. ಸುಳ್ಳು ಹೇಳುವ ಅವರನ್ನು ಯಾರೂ ನಂಬುವುದಿಲ್ಲ ಎಂದರು.

ಹರಿಕೃಷ್ಣ ಬಂಟ್ವಾಳ್ ಕಾಂಗ್ರೆಸ್ ಸೇರಿದಂದಿನಿಂದ ಒಮ್ಮೆಯೂ ಜನಾರ್ದನ ಪೂಜಾರಿ ಗೆದ್ದಿಲ್ಲ. ಇದೀಗ ಅವರು ನಳಿನ್ ಕುಮಾರ್ ಪರವಾಗಿದ್ದಾರೆ. ನಳಿನ್ ಸೋಲು ಕೂಡಾ ಖಚಿತ ಎಂದರು.

► ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆ

ಕಳೆದ ಚುನಾವಣೆಯಲ್ಲಿ ನಾವು ಸಾಮಾಜಿಕ ಜಾಲತಾಣಗಳಲ್ಲಿ ಹಿನ್ನಡೆಯಲ್ಲಿದ್ದೆವು. ಈಗ ಸಾಮಾಜಿಕ ಜಾಲತಾಣಗಳಲ್ಲೂ ಪರಿಣಾಮಕಾರಿಯಾಗಿ ಪ್ರಚಾರ ಮಾಡುತ್ತಿದ್ದೇವೆ. ಬಿಜೆಪಿಯ ಅಪಪ್ರಚಾರಗಳಿಗೆ ತಕ್ಷಣ ಪ್ರತ್ಯುತ್ತರ ನೀಡುತ್ತಿದ್ದೇವೆ ಎಂದರು.

ಮತೀಯವಾದಕ್ಕೆ ಕಾಂಗ್ರೆಸ್ ವಿರೋಧ

ಹರೀಶ್ ಪೂಜಾರಿ, ಅಶ್ರಫ್ ಕಲಾಯಿ, ಶರತ್ ಮಡಿವಾಳ ಹತ್ಯೆ ಮಾಡಿದ್ದು, ಯಾರು ಎಂಬುವುದು ಜನರಿಗೆ ತಿಳಿದಿದೆ. ಬಿಜೆಪಿ ಹತ್ಯೆಗಳಲ್ಲಿ ಶಾಮೀಲಾಗಿದೆ. ಆದರೆ ಅಂತಹ ಯಾವುದೇ ಕೃತ್ಯಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿಲ್ಲ. ಕಾಂಗ್ರೆಸ್ ಬಹುಸಂಖ್ಯಾತ, ಅಲ್ಪಸಂಖ್ಯಾತ ಮತೀಯವಾದವನ್ನು ಖಂಡಿಸುತ್ತದೆ ಮತ್ತು ವಿರೋಧಿಸುತ್ತದೆ ಎಂದು ರಮಾನಾಥ ರೈ ಹೇಳಿದರು.

ಹಿಂದುಳಿದ-ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ-ಪಂಗಡಗಳಿಗೆ ಹಾಗೂ ಸಾಮಾಜಿಕ ನ್ಯಾಯ ವನ್ನು ಅಪೇಕ್ಷಿಸುವವರು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಸಮಾಜದಲ್ಲಿ ಸಾಮಾಜಿಕ ಬದಲಾವಣೆ ತರಲು ಸಾಧ್ಯ.

 ಬಿ.ರಮಾನಾಥ ರೈ

ಮತದಾರರು ಕಾಂಗ್ರೆಸ್ ಕೈ ಹಿಡಿಯುತ್ತಾರೆ

ದ.ಕ. ಜಿಲ್ಲೆಯ ಜನರು ಬದಲಾವಣೆಯನ್ನು ಬಯಸಿದ್ದಾರೆ. ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ದೇಶದ ಪರಿಸ್ಥಿತಿಯ ತಿಳುವಳಿಕೆಯ ಜೊತೆಗೆ ಮನವರಿಕೆಯೂ ಆಗಿದೆ. ಭವಿಷ್ಯದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗುವ ಸನ್ನಿವೇಶದಲ್ಲಿ ನಾವಿದ್ದೇವೆ. ಈ ಬಾರಿ ಜನರು ಬದಲಾವಣೆಯ ಸಂಕಲ್ಪ ಮಾಡಿದ್ದು, ಕಾಂಗ್ರೆಸ್ ಕೈ ಹಿಡಿಯುತ್ತಾರೆ. ನಮ್ಮ ಅಭ್ಯರ್ಥಿ ಮಿಥುನ್ ರೈಯವರನ್ನು ಬಹುಮತದಿಂದ ಆರಿಸುತ್ತಾರೆ ಎನ್ನುವ ವಿಶ್ವಾಸ ನಮಗಿದೆ ಎಂದು ರಮಾನಾಥ ರೈ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News