ಜೈಲಿಗೆ ಹೋಗಿಬಂದವರೆಲ್ಲ ಈಗ ಚೌಕೀದಾರ್‌ಗಳು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ

Update: 2019-04-08 13:23 GMT

ಬೆಂಗಳೂರು, ಎ. 8: ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿಬಂದವರು ಇದೀಗ ‘ನಾನೂ ಚೌಕೀದಾರ’ ಎನ್ನುತ್ತಿದ್ದಾರೆ. ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ದನ ರೆಡ್ಡಿ, ಶ್ರೀರಾಮುಲು ನಾವು ಚೌಕೀದಾರ್‌ಗಳು ಎನ್ನುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಸೋಮವಾರ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ರಿಝ್ವನ್ ಅರ್ಶದ್ ಪರ ಇಲ್ಲಿನ ರಾಜಾಜಿನಗರದಲ್ಲಿ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಅವರು, ಮೋದಿ ಭ್ರಷ್ಟಾಚಾರದಲ್ಲಿ ಭಾಗಿದಾರನಾಗಿದ್ದು, ಅವರು ಚೌಕೀದಾರ್ ಆಗಲು ಸಾಧ್ಯವೇ ಇಲ್ಲ ಎಂದು ಟೀಕಿಸಿದರು.

ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರೆ ಏಕೆ ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಾರೆ. ಈ ಕ್ಷೇತ್ರದಲ್ಲಿ ಪಿ.ಸಿ.ಮೋಹನ್ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ನನ್ನ ಅವಧಿಯಲ್ಲಿ ಬೆಂಗಳೂರು ಸಾಕಷ್ಟು ಅಭಿವೃದ್ಧಿಯಾಗಿದೆ. ಯುವಕರು ಉದ್ಯೋಗ ಕೇಳಿದರೆ ಮೋದಿ, ಅಮಿತ್ ಶಾ ಪಕೋಡ ಮಾರಾಟ ಮಾಡಿ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಶ್ರೀಮಂತರಿಗೆ ಅಚ್ಛೇದಿನ ಬಂದಿದೆ ಹೊರತು ಬಡವರಿಗೆ ಬಂದಿಲ್ಲ. ಉದ್ಯಮಿಗಳ 3.50 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ರೈತರ ಸಾಲಮನ್ನಾ ಮಾಡಿ ಎಂದರೆ ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆ ಎಂದು ಟೀಕಿಸಿದ ಅವರು, ಒಂದೇ ಒಂದು ದಿನ ಸಂಸತ್‌ನಲ್ಲಿ ಕ್ಷೇತ್ರದ ವಿಷಯದ ಬಗ್ಗೆ ಮಾತನಾಡಿಲ್ಲ. ಇವರನ್ನು ಮತ್ತೆ ಸಂಸತ್‌ಗೆ ಕಳಿಸುತ್ತೀರಾ ಎಂದು ಮತದಾರರಿಗೆ ಕೇಳಿದರು.

ಕ್ಷೇತ್ರ ಪ್ರತಿನಿಧಿಸುವವರು ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಕೇಂದ್ರದಿಂದ ಏನೇನು ಯೋಜನೆ ತಂದಿದ್ದೇನೆಂದು ಎದೆ ತಟ್ಟಿ ಹೇಳಲಿ ಎಂದು ಸವಾಲು ಹಾಕಿದ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿಗೆ ಮತ ಕೇಳುವ ನೈತಿಕತೆ ಇಲ್ಲ. ಹೀಗಾಗಿ ಮೋದಿ ಹೆಸರು ಹೇಳಿಕೊಂಡು ತಿರುಗಾಡುತ್ತಿದ್ದಾರೆಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News