ಕಾಂಗ್ರೆಸ್ ನಾಯಕರೇ ಮೈತ್ರಿ ಸರಕಾರವನ್ನು ಬೀಳಿಸಲಿದ್ದಾರೆ: ಮಾಜಿ ಡಿಸಿಎಂ ಆರ್.ಅಶೋಕ್
ಬೆಂಗಳೂರು, ಎ.8: ರಾಜ್ಯದ ಸಮ್ಮಿಶ್ರ ಸರಕಾರದ ಬಗ್ಗೆ ಜನತೆಗೆ ಭ್ರಮನಿರಸನವಾಗಿದೆ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ನಾಯಕರೇ ಈ ಸರಕಾರವನ್ನು ಬೀಳಿಸಲಿದ್ದಾರೆ. ಎರಡೂ ಪಕ್ಷಗಳ ನಿತ್ಯದ ಜಗಳ, ಕಚ್ಚಾಟ ಜನರಲ್ಲಿ ಬೇಸರ ತರಿಸಿದೆ. ಈ ಸರಕಾರ ಹೆಚ್ಚು ದಿನ ಉಳಿಯದು ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದರು.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‌ಕ್ಲಬ್ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಾಗ ಇಡೀ ದೇಶಕ್ಕೆ ಈ ಮೈತ್ರಿ ಮಾದರಿ ಎಂದೆಲ್ಲ ಬೊಗಳೆ ಬಿಟ್ಟಿದ್ದ ನಾಯಕರುಗಳಿಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡ ನಂತರ ನಡೆದಿರುವ ಬೆಳವಣಿಗೆಗಳು ಪಾಠ ಕಲಿಸಿವೆ ಎಂದು ಭಾವಿಸುತ್ತೇನೆ. ಕಾರ್ಯಕರ್ತರುಗಳು ಈ ಮೈತ್ರಿಯನ್ನು ಒಪ್ಪಿಕೊಂಡಿಲ್ಲ ಎಂಬುದು ಜಗಜ್ಜಾಹೀರಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಸಮ್ಮಿಶ್ರ ಸರಕಾರ ಅತ್ಯಂತ ಕೆಟ್ಟ ಸರಕಾರವಾಗಿದೆ. ಈ ಸರಕಾರ ಸಂಪೂರ್ಣ ವಿಫಲವಾಗಿದೆ. ಎರಡೂ ಪಕ್ಷದ ಕಾರ್ಯಕರ್ತರ ಪ್ರತಿಭಟನೆ, ಗಲಾಟೆ ಇನ್ನೂ ನಿಂತಿಲ್ಲ. ಜೆಡಿಎಸ್ ನಾಯಕರಿಗೆ ಕಾಂಗ್ರೆಸ್‌ನ ಸಿದ್ಧರಾಮಯ್ಯನವರ ಗುತ್ತಿಗೆದಾರರು ನಿರ್ಮಿಸಿರುವ ರಸ್ತೆ ಉಬ್ಬುಗಳು ಅಡ್ಡಿಯಾಗಿವೆ ಎಂದು ಅವರು ವ್ಯಂಗ್ಯವಾಡಿದರು.
ಬೆಂಗಳೂರು ದಕ್ಷಿಣದಲ್ಲಿ ಯುವ ಮುಖಕ್ಕೆ ಆದ್ಯತೆ ನೀಡಲು ತೇಜಸ್ವಿನಿ ಅನಂತ ಕುಮಾರ್‌ರವರಿಗೆ ಟಿಕೆಟ್ ನೀಡಿಲ್ಲ ಅಷ್ಟೆ. ಅದು ಬಿಟ್ಟು ಬೇರೆ ಏನೂ ಕಾರಣ ಇಲ್ಲ. ಬಿಜೆಪಿಯ ತೀರ್ಮಾನಕ್ಕೂ, ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿಯ ನಾಯಕರುಗಳೇ ತೀರ್ಮಾನ ಕೈಗೊಳ್ಳುತ್ತಾರೆ. ಆರ್‌ಎಸ್‌ಎಸ್ ನಾಯಕರುಗಳಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜೆಡಿಎಸ್ ನಾಯಕರ ಜತೆ ಯಾವುದೇ ಒಳ ಒಪ್ಪಂದ ಇಲ್ಲ. ಜೆಡಿಎಸ್‌ನ ಮಾಜಿ ಪ್ರಧಾನಿ ದೇವೇಗೌಡರ ಜತೆಯಾಗಲೀ, ಮುಖ್ಯಮಂತ್ರಿ ಕುಮಾರಸ್ವಾಮಿ ಜತೆಯಾಗಲೀ ತಾವು ಒಳ ಒಪ್ಪಂದ ಮಾಡಿಕೊಂಡಿಲ್ಲ. ಒಳ ಒಪ್ಪಂದ ಮಾಡಿಕೊಂಡಿರುವವರು ಸಚಿವ ಡಿ.ಕೆ.ಶಿವಕುಮಾರ್. ನಾನು ರಾಜಕೀಯವಾಗಿ ಬೆಳೆಯಬೇಕಿದೆ. ದೇವೇಗೌಡರ ಕುಟುಂಬ ಹಾಗೂ ಡಿ.ಕೆ.ಶಿವಕುಮಾರ್ ತಮ್ಮ ಪ್ರಬಲ ವಿರೋಧಿ ಎಂದು ಅಶೋಕ್ ಹೇಳಿದರು.
ನಾನು ರಾಜಕೀಯ ಸನ್ಯಾಸಿಯಲ್ಲ. ನಾನೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಅವಕಾಶಕ್ಕಾಗಿ ಕಾಯಬೇಕು ಅಷ್ಟೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ತಡವರಿಸುತ್ತಾ ಉತ್ತರಿಸಿದರು.
ಈ ಲೋಕಸಭಾ ಚುನಾವಣೆ ದೇಶದ ಪ್ರಧಾನಿಯನ್ನು ನಿರ್ಧರಿಸುವ ಚುನಾವಣೆಯಾಗಿದೆ. ಮೋದಿ ಪ್ರಧಾನಿಯಾಗಬೇಕೆ, ರಾಹುಲ್‌ಗಾಂಧಿ ಪ್ರಧಾನಿಯಾಗಬೇಕೆ ಎಂಬ ಬಗ್ಗೆ ದೇಶದಲ್ಲಿ ಚರ್ಚೆ ನಡೆದಿದೆ. - ಆರ್.ಅಶೋಕ್, ಮಾಜಿ ಡಿಸಿಎಂ