ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪ್ರಣಾಳಿಕೆ ಬಿಡುಗಡೆ

Update: 2019-04-08 13:57 GMT

ಬೆಂಗಳೂರು, ಎ.8: ಸಂವಿಧಾನದ ಆಶಯಗಳಿಗೆ ಪೂರಕವಾಗಿ, ದೇಶದ ಎಲ್ಲ ಜನ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶೀಮಾ ಮೊಹ್ಸಿನ್ ಹೇಳಿದರು.

ಸೋಮವಾರ ಶಿವಾಜಿನಗರದಲ್ಲಿರುವ ಪಕ್ಷದ ಕಚೇರಿ ವೆಲ್ಫೇರ್ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಮಹಿಳೆಯರು, ಯುವಕರು, ರೈತರು, ಕಾರ್ಮಿಕರು, ಬಡವರಿಗೆ ಸಿಗಬೇಕಾದ ಹಕ್ಕುಗಳನ್ನು ಕಲ್ಪಿಸಿಕೊಡುವುದು ನಮ್ಮ ಉದ್ದೇಶ. ಜನ ಸಾಮಾನ್ಯರು ಸ್ವಾತಂತ್ರ, ಸುರಕ್ಷತೆ, ಶಾಂತಿ, ನ್ಯಾಯ, ಅಭಿವೃದ್ಧಿ, ಸಮಾನ ಅವಕಾಶಗಳನ್ನು ಪಡೆಯುವಂತಾಗಬೇಕು ಎಂದು ಅವರು ಹೇಳಿದರು.

ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು: ಶ್ರೀಮಂತರಿಗೆ ಸೂಪರ್ ಟ್ಯಾಕ್ಸ್, ಸಮಾಜದ ಎಲ್ಲ ವರ್ಗದ ಮಕ್ಕಳಿಗಾಗಿ ಏಕರೂಪ ಶಾಲೆಗಳ ನಿರ್ಮಾಣ, ಭೂ ರಹಿತರಿಗೆ ಭೂಮಿ ಹಂಚಲು ಲ್ಯಾಂಡ್ ಬ್ಯಾಂಕ್ ರಚನೆ ಮಾಡುವುದು.

ರೈಲ್ವೆ ಮಂಡಳಿಯ ಮಾದರಿಯಲ್ಲಿ ಕೃಷಿ ಮಂಡಳಿ ರಚನೆ, ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ, ನಗರ ಪ್ರದೇಶದವರಿಗೂ ಉದ್ಯೋಗ ಖಾತರಿ ಯೋಜನೆ ಜಾರಿ, ಕಾಶ್ಮೀರದಲ್ಲಿನ ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಕ್ರಮ.

ಕೋಮುಗಲಭೆಗಳಲ್ಲಿ ಸಂತ್ರಸ್ತರಾಗುವವರಿಗಾಗಿ ನ್ಯಾಯ ಒದಗಿಸಲು ನೂತನ ಕಾನೂನು ಜಾರಿ, ಅಲ್ಪಸಂಖ್ಯಾತರಿಗಾಗಿ ಉಪ ಯೋಜನೆ ಜಾರಿ, ಮಹಿಳೆಯರಿಗೆ ಎಲ್ಲ ರಂಗಗಳಲ್ಲೂ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ಕಾನೂನು ಜಾರಿಗೆ ತರಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಭರವಸೆ ನೀಡಿದೆ.

ನಮ್ಮ ಪಕ್ಷವು ದೇಶದಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಬೆಳೆದಿಲ್ಲ ಎಂಬ ಸತ್ಯ ನಮಗೆ ಗೊತ್ತಿದೆ. ಆದರೆ, ದೇಶದಲ್ಲಿ ಮೌಲ್ಯಾಧಾರಿತ ರಾಜಕೀಯದ ಮೂಲಕ ಧನಾತ್ಮಕವಾದ ಬದಲಾವಣೆ ತರಬೇಕು ಎಂಬುದು ನಮ್ಮ ಸಂಕಲ್ಪ ಎಂದು ಶೀಮಾ ಮೊಹ್ಸಿನ್ ತಿಳಿಸಿದರು.

ಇದೇ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮುಖವಾಣಿ ಉರ್ದು ಮಾಸಿಕ ಪತ್ರಿಕೆ ‘ಸಿಯಾಸಿ ಬಸೀರತ್’ ಬಿಡುಗಡೆ ಮಾಡಲಾಯಿತು. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News