×
Ad

ಬಿಜೆಪಿ ನಾಯಕರಿಂದ ಬೆಂಗಳೂರು ಲೂಟಿ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-04-08 21:47 IST

ಬೆಂಗಳೂರು, ಎ.8: ಬೆಂಗಳೂರನ್ನು ಲೂಟಿ ಮಾಡಿದ್ದು ಬಿಜೆಪಿ ನಾಯಕರು. ವ್ಯಾಪಕ ಭ್ರಷ್ಟಾಚಾರ ನಡೆಸಿದ್ದರಿಂದಲೇ ಬಿಬಿಎಂಪಿ ಕಡತಗಳು ಸಿಗಬಾರದೆಂದು ಅವುಗಳನ್ನು ರಾತ್ರೋರಾತ್ರಿ ಬೆಂಕಿ ಹಾಕಿ ಸುಟ್ಟರು. ಬಿಜೆಪಿ ಅಭ್ಯರ್ಥಿಗಳು ಮೋದಿ ಮುಖ ನೋಡಿ ಮತ ಕೊಡಿ ಎನ್ನುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಸೋಮವಾರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಪರವಾಗಿ, ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕುರುಬರಹಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗಳನ್ನುದ್ದೇಶಿಸಿ ಅವರು ಮಾತನಾಡಿದರು.

ನಮ್ಮ ಸರಕಾರಕ್ಕೆ ಇನ್ನೂ ನಾಲ್ಕು ವರ್ಷ ಯಾವುದೇ ತೊಂದರೆಯಾಗಲ್ಲ. ಆದರೂ, ಸರಕಾರ ಕೆಡವಲು ಕುತಂತ್ರ ರಾಜಕಾರಣ ನಡೆಸುತ್ತಿದ್ದಾರೆ. ದೀಪಾವಳಿಗೆ ಬೀಳುತ್ತೆ, ಯುಗಾದಿಗೆ ಬೀಳುತ್ತೆ ಎಂದು ಪುಕಾರು ಹಬ್ಬಿಸುತ್ತಿದ್ದಾರೆ. ಇದೀಗ ಮೇ 23ಕ್ಕೆ ಗಡುವು ನೀಡಿದ್ದಾರೆ ಎಂದು ಮುಖ್ಯಮಂತ್ರಿ ವ್ಯಂಗ್ಯವಾಡಿದರು.

ನಮ್ಮ ಶಾಸಕರಿಗೆ ಕೋಟ್ಯಂತರ ರೂಪಾಯಿ ಆಮಿಷ ಒಡ್ಡುತ್ತಿದ್ದಾರೆ. ನೆಮ್ಮದಿಯಾಗಿ ಸರಕಾರ ನಡೆಸಲು ಬಿಜೆಪಿ ನಾಯಕರು ಬಿಡುತ್ತಿಲ್ಲ. ಇವೆಲ್ಲದರ ನಡುವೆಯೂ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ನರೇಂದ್ರ ಮೋದಿ ಯಾವತ್ತೂ ಬಂದು ನಿಮ್ಮ ಕೆಲಸ ಮಾಡಲ್ಲ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸೋದು ನಾವು ಮಾತ್ರ. ಹೀಗಾಗಿ ಮೈತ್ರಿ ಅಭ್ಯರ್ಥಿಗೆ ಮತ ನೀಡಿ, ಎರಡೂ ಪಕ್ಷದ ನಾಯಕರು ಒಟ್ಟಿಗೆ ಕೆಲಸ ಮಾಡಿ ಎಂದು ಅವರು ಕರೆ ನೀಡಿದರು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಇದು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ. ರಾಜ್ಯದ ದೃಷ್ಟಿಯಿಂದಲೂ ಬಹುಮುಖ್ಯವಾದ ಚುನಾವಣೆ. ಐದು ವರ್ಷದ ಹಿಂದೆ ದೇಶದ ಜನ ಮೋದಿ ನಂಬಿ ಬಹುಮತ ಕೊಟ್ಟರು ಎಂದರು.

ಕೋಟ್ಯಂತರ ಯುವಕರು ಉದ್ಯೋಗಕ್ಕಾಗಿ ಮೋದಿ ಕಡೆ ನೋಡಿದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಮೋದಿ ಹೇಳಿದರು. ಆದರೆ ಇವತ್ತು ಏನಾಗಿದೆ. ದೇಶದ ಯುವಕರಿಗೆ ಮೋದಿ ಉತ್ತರ ಕೊಡಲು ಆಗುತ್ತಿಲ್ಲ. ರಾತ್ರೋರಾತ್ರಿ ನೋಟ್ ಬ್ಯಾನ್ ಮಾಡಿ ಜನರಿಗೆ ತೊಂದರೆ ಕೊಟ್ಟರು ಎಂದು ಅವರು ಟೀಕಿಸಿದರು.

ಅವೈಜ್ಞಾನಿಕವಾಗಿ ಜಿಎಸ್ಟಿ ಜಾರಿ ಮಾಡಿ ಮಜ್ಜಿಗೆ ಮೇಲೂ ತೆರಿಗೆ ವಿಧಿಸಿದರು. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಕಡಿಮೆಯಾದರು ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಲಿಲ್ಲ. ಭ್ರಷ್ಟಾಚಾರದ ವಿರುದ್ಧ ಮಾತಾಡುತ್ತಲೇ, ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿರು ಎಂದು ಅವರು ಆರೋಪಿಸಿದರು.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸಂಸದರಾಗಿರುವ ಸದಾನಂದಗೌಡ ಯಾವುದೇ ಕೆಲಸ ಮಾಡಿಲ್ಲ. ಹೀಗಾಗಿಯೇ ಮೋದಿ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಮೋದಿ ಮುಖ ನೋಡಿ ಮತ ಹಾಕುವುದಾದರೆ ಅವರು ಯಾಕೆ ಇಲ್ಲಿಗೆ ಬೇಕು. ಹೀಗಾಗಿ ನಿಮ್ಮಿಂದಿಗೆ ಕೆಲಸ ಮಾಡುತ್ತಿರುವ ಕೃಷ್ಣ ಭೈರೇಗೌಡರಿಗೆ ಮತ ನೀಡಿ ಎಂದು ಅವರು ಮನವಿ ಮಾಡಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಸದಾನಂದಗೌಡರಿಗೂ, ಕೃಷ್ಣಭೈರೇಗೌಡರಿಗೂ ಅಜಗಜಾಂತರ ವ್ಯತ್ಯಾಸ ಇದೆ. ಕೃಷ್ಣಭೈರೇಗೌಡ ಕೆಲಸ ಮಾಡುವ ಮಂತ್ರಿ, ಸದಾನಂದಗೌಡ ನಿಷ್ಕ್ರಿಯ ಮಂತ್ರಿ. ಮೋದಿ ಅವರದು ಬರೀ ಬಡಾಯಿ. ಬೆಂಗಳೂರಿಗೆ ಮೋದಿ ಕೊಡುಗೆ ಶೂನ್ಯ ಎಂದರು.

ಮನ್ ಕೀ ಬಾತ್‌ನಿಂದ ಬಡವರ ಹೊಟ್ಟೆ ತುಂಬಲ್ಲ. ಯುವಕರಿಗೆ ಉದ್ಯೋಗ ಸಿಕ್ಕಿಲ್ಲ, ರೈತರಿಗೆ ಲಾಭ ಆಗಿಲ್ಲ. ರೈತರ ಸಾಲ ಮನ್ನಾ ಮಾಡಿ ಅಂದಾಗ ನಮ್ಮ ಬಳಿ ನೋಟು ಪ್ರಿಂಟ್ ಮಾಡುವ ಮಿಷನ್ ಇಲ್ಲ ಎಂದರು. ಆದರೆ ಇದೇ ಬಿಜೆಪಿ ನಾಯಕರ ಮನೆಯಲ್ಲಿ ನೋಟು ಎಣಿಸುವ ಯಂತ್ರ ಸಿಕ್ಕಿತು. ಇಂತಹ ಬಿಜೆಪಿ ನಾಯಕರನ್ನು ತಿರಸ್ಕರಿಸಿ ಕೃಷ್ಣಭೈರೇಗೌಡಗೆ ಮತ ನೀಡಿ ಎಂದು ಅವರು ಮನವಿ ಮಾಡಿದರು.

ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಮಾತನಾಡಿ, ನನಗೆ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಇರಲಿಲ್ಲ. ಮೈತ್ರಿ ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಸ್ಪರ್ಧಿಸಿದ್ದೇನೆ. ಮೈತ್ರಿ ಸರಕಾರದ ಉಳಿವಿಗೆ ಸ್ಪರ್ಧಿಸಿರುವ ನನಗೆ ಮತ ನೀಡಿ ಎಂದು ಕೋರಿದರು.
ಪ್ರಚಾರ ಸಭೆಯಲ್ಲಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಶಾಸಕರಾದ ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಎನ್.ಎ.ಹಾರೀಸ್, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ನಸೀರ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News