ಇಂದಿನ ಸಮಸ್ಯೆಗಳಿಗೆ ಬಿಜೆಪಿ-ಕಾಂಗ್ರೆಸ್ ಕಾರಣ: ಎಸ್‌ಯುಸಿಐ ಅಭ್ಯರ್ಥಿ ಟಿ.ಸಿ.ರಮಾ ವಾಗ್ದಾಳಿ
ಬೆಂಗಳೂರು, ಎ. 8: ಬಿಜೆಪಿ ಕೋಮುವಾದಿ ಆಡಳಿತಕ್ಕೆ ಕಾಂಗ್ರೆಸ್ ಪರ್ಯಾಯ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ದೇಶವನ್ನು 5 ದಶಕಗಳಿಗೂ ಹೆಚ್ಚು ಕಾಲ ಆಳಿದ ಕಾಂಗ್ರೆಸ್ ಇಂದಿನ ಸಮಸ್ಯೆಗಳಿಗೆ ಕಾರಣವಲ್ಲವೇ? ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಸ್‌ಯುಸಿಐ ಅಭ್ಯರ್ಥಿ ಟಿ.ಸಿ.ರಮಾ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಸೋಮವಾರ ಕ್ಷೇತ್ರದ ವಿವಿಧೆಡೆಗಳಲ್ಲಿ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಗಳು ನಮ್ಮ ದೇಶದ ದೊಡ್ಡ ಬಂಡವಾಳಿಗರ ನಿಷ್ಠಾವಂತ ಪಕ್ಷಗಳು. ಒಂದೇ ನಾಣ್ಯದ ಎರಡು ಮುಖಗಳು. ಫ್ಯಾಸಿವಾದವನ್ನು ತರಲು ಈ ಎರಡೂ ಪಕ್ಷಗಳೂ ಸಿದ್ಧ ಎಂದು ವಾಗ್ದಾಳಿ ನಡೆಸಿದರು.
ಹಾಗೆಯೇ, ಜೆಡಿಎಸ್ ಆಗಲಿ ಅಥವಾ ಬೇರೆ ರಾಜ್ಯಗಳಲ್ಲಿರುವ ಇತರ ಪ್ರಾದೇಶಿಕ ಪಕ್ಷಗಳಾಗಲಿ, ಅವೆಲ್ಲವೂ ಬಂಡವಾಳಗಾರರ ಹಿತವನ್ನು ಕಾಯುತ್ತವೆಯೇ ವಿನಃ, ದುಡಿಯುವ ಜನರದ್ದಲ್ಲ. ಭ್ರಷ್ಟಾಚಾರದಲ್ಲಿ, ದುರಾಡಳಿತಗಳಲ್ಲಿ ಈ ಪಕ್ಷಗಳು ಬಿಜೆಪಿ ಹಾಗೂ ಕಾಂಗ್ರೆಸ್‌ಗಳಿಗೆ ಪೈಪೋಟಿ ನೀಡುತ್ತವೆ ಎಂದು ಟೀಕಿಸಿದರು.
ಕಾರ್ಮಿಕರ-ರೈತರ-ಬಡವರ-ಆಶಾ ಕಾರ್ಯಕರ್ತೆಯರ, ಅಂಗನವಾಡಿ ನೌಕರರ ಮತ್ತು ಮನೆಗೆಲಸದ ಮಹಿಳೆಯರ ಹಕ್ಕುಗಳಿಗಾಗಿ ನಮ್ಮ ಪಕ್ಷ ಸತತವಾಗಿ ಕೆಲಸ ಮಾಡುತ್ತಿದೆ. ಹಲವು ಕಾರ್ಮಿಕರ-ರೈತರ ಚಳುವಳಿಗಳನ್ನು ಕಟ್ಟಿದೆ. ವಿದೇಶಿ ಬ್ಯಾಂಕುಗಳಲ್ಲಿನ ಕಪ್ಪುಹಣ ತಂದು ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ 15 ಲಕ್ಷ ತುಂಬುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ, ದೇಶದ ಜನತೆಗೆ ಅಚ್ಛೇದಿನ್ ಬರಲಿವೆ ಎಂದೆಲ್ಲಾ ಘೋಷಿಸಿ ಸರಕಾರದ ಚುಕ್ಕಾಣಿ ಹಿಡಿದ ಮೋದಿ ಸರಕಾರ ಜನರಿಗೆ ಮೋಸಮಾಡಿದೆ ಎಂದು ಟೀಕಿಸಿದರು.
ಎಸ್‌ಯುಸಿಐ ಜನರ ಧ್ವನಿಯಾಗಿ ಹಲವು ಹೋರಾಟಗಳನ್ನು ಸಂಘಟಿಸುತ್ತಾ ಬಂದಿದೆ. ರಸ್ತೆ, ಚರಂಡಿ ಮತ್ತು ಕುಡಿಯುವ ನೀರಿಗಾಗಿ, ಅಕ್ರಮ ಗಣಿಗಾರಿಕೆ, ವಿನಾಶಕಾರಿ ಉಕ್ಕಿನ ಸೇತುವೆ ನಿರ್ಮಾಣದ ವಿರುದ್ಧ, ರಸ್ತೆ ಅಗಲೀಕರಣದ ವಿರುದ್ಧ ನಮ್ಮ ಪಕ್ಷವು ಹೋರಾಟಗಳನ್ನು ಸಂಘಟಿಸಿದೆ ಎಂದರು.
ನನ್ನನ್ನು ಚುನಾಯಿಸಿದರೆ ನಾನು ಹೋರಾಟದ ಧ್ವನಿಯನ್ನು ಸದನದ ಒಳಗೆ ಹಾಗೂ ಹೊರಗೂ ಎತ್ತಿಹಿಡಿಯುತ್ತೇನೆ. ರಾಮನಗರ, ಚನ್ನಪಟ್ಟಣ, ಕುಣಿಗಲ್, ಮಾಗಡಿಗಳಿಂದ ಕೆಲಸಕ್ಕಾಗಿ ಬೆಂಗಳೂರಿಗೆ ಪ್ರಯಾಣ ಮಾಡುವ ಸಾವಿರಾರು ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಹಾಗೂ ಉಚಿತ ರೈಲ್ವೆ ಪಾಸಿಗಾಗಿ ಶ್ರಮಿಸುತ್ತೇನೆ, ಲೋಕಲ್ ಟ್ರೇನ್, ವರ್ತುಲ ರೈಲ್ವೆ ವ್ಯವಸ್ಥೆಯನ್ನು ಗಟ್ಟಿಪಡಿಸುವ ನಿಟ್ಟಿನಲ್ಲಿ ಕೆಲಸಮಾಡುತ್ತೇನೆ, ಲೋಕಲ್ ಟ್ರೇನ್, ವರ್ತುಲ ರೈಲ್ವೆ ವ್ಯವಸ್ಥೆ ಈ ಕ್ಷೇತ್ರಕ್ಕೆ ಬಂದರೆ ಲಕ್ಷಾಂತರ ಪ್ರಯಾಣಿಕರಿಗೆ (ದಿನಗೂಲಿ ಕೆಲಸಗಾರರಿಗೆ) ಅನುಕೂಲವಾಗುತ್ತದೆ. ಕಾರ್ಮಿಕರಿಗೆ ಹಾಗೂ ದಿನಗೂಲಿ ಕೆಲಸಗಾರರಿಗೆ ಉಚಿತ ಪಾಸ್ ವೈವಸ್ಥೆಗಾಗಿ ಶ್ರಮಿಸುತ್ತೇನೆ ಎಂದರು.