ಯುವ ನಾಯಕ ಕೃಷ್ಣ ಭೈರೇಗೌಡಗೆ ಮತ ನೀಡಿ: ಎಚ್.ಡಿ.ದೇವೇಗೌಡ

Update: 2019-04-09 12:59 GMT

ಬೆಂಗಳೂರು, ಎ.9: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇಗೌಡ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಮ್ಮ ಪರವಾಗಿ ಹಗಲಿರುಳು ಕೆಲಸ ಮಾಡಬಲ್ಲ ಬುದ್ಧಿವಂತ ಯುವ ನಾಯಕ ನಿಮಗೆ ಸಿಕ್ಕಿದ್ದಾರೆ. ಮತದಾರರಿಗೆ ಕೈಮುಗಿದು ಕೇಳುತ್ತೇನೆ. ದಯಮಾಡಿ ಕೃಷ್ಣ ಭೈರೇಗೌಡರಿಗೆ ಮತ ನೀಡಿ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು.

ಮಂಗಳವಾರ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರು ವಾಯುನೆಲೆ ಬಳಿಯಿರುವ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಐದು ವರ್ಷಗಳಲ್ಲಿ ನರೇಂದ್ರ ಮೋದಿ ಏನು ಮಾಡಿದ್ದಾರೆ ಎಂಬುದನ್ನು ವಿಮರ್ಶೆ ಮಾಡಿ. ಅವರು ಕೊಟ್ಟಂತಹ ಆಶ್ವಾಸನೆ ಏನು, ಅವು ಎಷ್ಟರ ಮಟ್ಟಿಗೆ ಈಡೇರಿವೆ ಎಂಬುದನ್ನು ತಿಳಿದುಕೊಳ್ಳಿ ಎಂದರು.

ಮೋದಿ ಅವರಿಂದ ಬಡವರಿಗೆ ಅನುಕೂಲವಾಗುವ ಯಾವ ಯೋಜನೆಯು ಜಾರಿಯಾಗಲಿಲ್ಲ. ಹೀಗಾಗಿಯೇ ಕಳೆದ ಬಾರಿ 295 ಸ್ಥಾನಗಳನ್ನು ಪಡೆದಂತೆ ಈ ಬಾರಿ ಆಗುವುದಿಲ್ಲ ಎಂಬುದು ಬಿಜೆಪಿ ಪಕ್ಷಕ್ಕೆ ಗೊತ್ತಿದೆ. ಅದಕ್ಕಾಗಿ ಪುಲ್ವಾಮಾ ಘಟನೆಗೆ ಮತ್ತೊಂದು ಸ್ವರೂಪ ಕೊಟ್ಟು, ಐದು ವರ್ಷಗಳಲ್ಲಿ ದೇಶದ ರಕ್ಷಣೆಗೆ ಬೇಕಾದ ಸಾಮಗ್ರಿಗಳನ್ನು ಜೋಡಿಸಿದ್ದೇವೆ. ರಷ್ಯಾ, ಚೀನಾಗಿಂತ ಮುಂದೆ ಹೋಗಿದ್ದೇವೆ, ಆಕಾಶದಲ್ಲಿ ಯುದ್ಧ ಮಾಡುತ್ತೇವೆ ಎಂಬ ಮಾತುಗಳನ್ನಾಡುತ್ತಾರೆ ಎಂದು ಅವರು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಡಾ.ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಯಾವೆಲ್ಲಾ ಕ್ಷಿಪಣಿಗಳು ಉಡಾವಣೆಯಾಗಿವೆ ಎಂಬುದು ಜನರಿಗೆ ಗೊತ್ತು. ಆದರೆ ಎಲ್ಲವನ್ನೂ ನಾವೇ ಮಾಡಿರುವುದು ಎಂದು ಮೋದಿ ಹೇಳಿಕೊಳ್ಳುತ್ತಾರೆ. ಅವರೇನೆ ಹೇಳಿಕೊಂಡರೂ ಸಮೀಕ್ಷೆಗಳನ್ನು ನೋಡಿದಾಗ ಅತಂತ್ರ ಸ್ಥಿತಿ ಬರುತ್ತದೆ ಎಂಬುದು ವ್ಯಕ್ತವಾಗಿದೆ. ಮತ್ತೆ ನನಗೆ ಸಂಸತ್ತಿಗೆ ಹೋಗುವ ಅವಕಾಶ ಸಿಕ್ಕಿದರೆ ಮೋದಿಯ ಎದುರು ಹೋರಾಡುವ ಶಕ್ತಿ ನನಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 18 ರಿಂದ 20 ಸ್ಥಾನ ನಾವು ಗೆದ್ದರೆ ಸಮ್ಮಿಶ್ರ ಸರಕಾರಕ್ಕೊಂದು ಅರ್ಥ ಬರುತ್ತದೆ. ಹೆಚ್ಚು ಸ್ಥಾನ ಗೆಲ್ಲಲೇಬೇಕು ಎನ್ನುವ ಹಠ ಈ ವಯಸ್ಸಲ್ಲೂ ನನಗಿದೆ. ನೀವು ಎರಡೂ ಪಕ್ಷಗಳ ಕಾರ್ಯಕರ್ತರು ಇದೇ ರೀತಿ ಕೆಲಸ ಮಾಡಿದರೆ ಗೆಲುವು ನಮ್ಮದಾಗಲಿದೆ. ಹೀಗಾಗಿ ಉತ್ತರ ಭಾಗದ ಮೈತ್ರಿ ನಾಯಕರು ಕೃಷ್ಣಭೈರೇಗೌಡರ ಗೆಲುವಿಗೆ ಕೆಲಸ ಮಾಡಿ ಎಂದು ದೇವೇಗೌಡ ಕರೆ ನೀಡಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಹನ್ನೊಂದು ತಿಂಗಳ ಕಾಲ ಪ್ರಧಾನಿ ಆಗಿದ್ದ ದೇವೇಗೌಡರು ಜನ ಮನ ಗೆಲ್ಲುವಂತ ಕೆಲಸ ಮಾಡಿದ್ದರು. ಆದರೆ ಬಡಾಯಿ ಕೊಚ್ಚಿಕೊಂಡು ಬಂದ ಮೋದಿ ಅವರು ಐದು ವರ್ಷಗಳ ಕಾಲ ಬರೀ ಸುಳ್ಳನ್ನೇ ಹೇಳಿದರು ಎಂದು ಟೀಕಿಸಿದರು.

ಜನ ನೆನಪಿಟ್ಟುಕೊಳ್ಳುವ ಒಂದೇ ಒಂದು ಕೆಲಸ ಮೋದಿ ಮಾಡಲಿಲ್ಲ. ಜಗತ್ತಿನಲ್ಲಿ ಅತಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ಇದ್ದರೆ ಅದು ಮೋದಿ ಮಾತ್ರ. ಮೋದಿಯವರ ಬಾಯಿ ಬಡಾಯಿ, ಸಾಧನೆ ಶೂನ್ಯ. ಬಿಜೆಪಿ ಪ್ರಣಾಳಿಕೆ ‘ಓಲ್ಡ್ ವೈನ್ ಇನ್ ನ್ಯೂ ಬಾಟಲ್’(ಹೊಸ ಬಾಟಲಿಯಲ್ಲಿ ಹಳೆ ಮದ್ಯ) ಇದ್ದಂತೆ ಎಂದು ಅವರು ಆರೋಪಿಸಿದರು.

ಆರ್ಟಿಕಲ್ 370, ರಾಮ ಮಂದಿರ, ರೈತರ ಆದಾಯ ಹೆಚ್ಚಿಸೋದು ಯಾವುದೂ ಹೊಸ ವಿಚಾರ ಅಲ್ಲ. ಹಳೆ ವಿಚಾರಗಳನ್ನೇ ಮತ್ತೆ ಪ್ರಸ್ತಾಪ ಮಾಡಿದ್ದಾರೆ. ರಾಹುಲ್ ಗಾಂಧಿ, ದೇವೇಗೌಡರು ಮತ್ತು ನಮಗೆಲ್ಲ ಶಕ್ತಿ ಬರಬೇಕಾದರೆ ಕೃಷ್ಣಭೈರೇಗೌಡರನ್ನು ನೀವೆಲ್ಲಾ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಮಾತನಾಡಿ, ನಾನು ಗೆದ್ದು ಸಂಸದ ಆಗಿ ಆಯ್ಕೆಯಾದರೆ ನಿಮ್ಮ ಎಂಎಲ್ಎ ಯಾರೆಂಬ ಆಲೋಚನೆ ಕೂಡ ನಿಮಗೆ ಬರದಂತೆ ಕೆಲಸ ಮಾಡುತ್ತೇನೆ. ನಿಮ್ಮ ಎಂಪಿ, ಎಂಎಲ್ಎ, ಕಾರ್ಪೋರೇಟರ್, ಗ್ರಾಮ ಪಂಚಾಯತ್ ಸದಸ್ಯ ಎಲ್ಲವೂ ನಾನೇ. ನನ್ನ ಅದೇ ಹಳೆ ಕಚೇರಿ, ಅದೇ ಕುರ್ಚಿ, ಅದೇ ಮೇಜು, ಅಲ್ಲೇ ನಾನು ಇರುತ್ತೇನೆ ಎಂದರು.

ಯಾವುದೇ ಪಕ್ಷ ಭೇದವಿಲ್ಲದೆ ನೀವೆಲ್ಲರೂ ಬಂದು ನನ್ನ ಕಾಣಬಹುದು. ನನಗೆ ರಾಜಕೀಯ ಶಕ್ತಿ ನೀಡಿದ ನಿಮ್ಮ ಋಣ ತೀರಿಸಲು, ನಿಮ್ಮ ಪರವಾಗಿ ಕೆಲಸ ಮಾಡಲು ಸದಾ ಸಿದ್ದನಿರುತ್ತೇನೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವೆ ಡಾ.ಜಯಮಾಲಾ, ಎಐಸಿಸಿಯಿಂದ ನೇಮಕಗೊಂಡಿರುವ ಚುನಾವಣಾ ವೀಕ್ಷಕ ಸುಬ್ಬರಾಮಿರೆಡ್ಡಿ ಸೇರಿದಂತೆ ಹಲವು ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News