ನೈತಿಕ ಚುನಾವಣೆ ಮುಖ್ಯ ಧ್ಯೇಯವಾಗಬೇಕು: ಸಂಜೀವ್‌ ಕುಮಾರ್

Update: 2019-04-09 14:29 GMT

ಬೆಂಗಳೂರು, ಎ.9: ಚುನಾವಣೆಯು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಇದರ ಮಹತ್ವದ ಬಗ್ಗೆ ಅರಿಯಬೇಕು. ಮತದಾನ ಅತ್ಯಮೂಲ್ಯವಾಗಿರುವ ಕಾರಣ ಮತದಾರರಿಗೆ ನೈತಿಕ ಚುನಾವಣೆಯ ಹಾದಿ ಕ್ಲಿಷ್ಟಕರವಾದರೂ ಮುಖ್ಯ ಧ್ಯೇಯವಾಗಿರಬೇಕು ಎಂದು ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಅಭಿಪ್ರಾಯಿಸಿದ್ದಾರೆ.

ನಗರದಲ್ಲಿಂದು ಪ್ರೆಸ್‌ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ ಮಾಧ್ಯಮ ಸಂವಾದದಲ್ಲಿ ಮಂಗಳವಾರ ಪಾಲ್ಗೊಂಡು ಅವರು ಮಾತನಾಡಿದರು.

ಮತದಾನವು ಕೇವಲ ಹಕ್ಕು ಮಾತ್ರವಲ್ಲ, ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ. ಮತದಾನ ಅತ್ಯಮೂಲ್ಯವಾಗಿರುವ ಕಾರಣ ಮತದಾರರ ನೈತಿಕ ಚುನಾವಣೆಯ ಹಾದಿ ಕ್ಲಿಷ್ಟಕರವಾದರೂ ಮುಖ್ಯಧ್ಯೇಯವಾಗಿರಬೇಕು. ಸೂಕ್ತ ಅಭ್ಯರ್ಥಿ ಯಾರು ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಮತದಾರರು ವಿವೇಚನೆಯಿಂದ ತೀರ್ಮಾನ ಕೈಗೊಂಡು ಮತಚಲಾವಣೆ ಮಾಡಬೇಕು. ಅಭ್ಯರ್ಥಿಗಳ ಆಸ್ತಿಯ ವಿವರ, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಸೇರಿದಂತೆ ಇತರೆ ಮಾಹಿತಿಗಳನ್ನು ಸಲ್ಲಿಕೆಯಾಗಿರುವ ಪ್ರಮಾಣಪತ್ರದಲ್ಲಿ ದಾಖಲಾಗಿರುತ್ತವೆ. ಅವುಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. ಆಸ್ತಿಯ ಬೆಳವಣಿಗೆ ಕುರಿತು ಮಾಹಿತಿ ತಿಳಿದುಕೊಳ್ಳಬಹುದು. ಅಭ್ಯರ್ಥಿಗಳ ಕುರಿತು ಸಂಪೂರ್ಣವಾಗಿ ಮಾಹಿತಿ ಪಡೆದುಕೊಂಡು ಚರ್ಚೆ ನಡೆಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದರು.

ಪ್ರಜಾಪ್ರಭುತ್ವದ ಹಬ್ಬದಲ್ಲಿ ನಡೆಯಲಿರುವ ಚುನಾವಣೆಯು ಪಾರದರ್ಶಕವಾಗಿರಬೇಕು. ಅದರಲ್ಲಿ ಅಕ್ರಮ ನಡೆಯದಂತೆ ತಡೆಯಲು ಮತದಾರರು ಸಹಕಾರ ನೀಡಬೇಕು. ಅಕ್ರಮಗಳ ಕುರಿತು ಗಮನಕ್ಕೆ ಬಂದರೆ ಜನತೆಯು ಸಿ-ವಿಜಿಲ್ ಆ್ಯಪ್ ಮೂಲಕ ದೂರು ನೀಡಬಹುದಾಗಿದೆ. ರಾಜ್ಯಕ್ಕೆ ಹೋಲಿಸಿದರೆ ಈ ಆ್ಯಪ್ ಕೇರಳ ರಾಜ್ಯದಲ್ಲಿ ಸದುಪಯೋಗವಾಗಿದೆ. ಕೇರಳದಲ್ಲಿ 8 ಸಾವಿರ ದೂರುಗಳು ಸಿ-ವಿಜಿಲ್ ಮೂಲಕ ದಾಖಲಾಗಿವೆ. ಆದರೆ, ರಾಜ್ಯದಲ್ಲಿ ಕೇವಲ 1,688 ದೂರುಗಳು ಮಾತ್ರ ದಾಖಲಾಗಿವೆ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ ಚುನಾವಣಾ ಆಯೋಗ ನೀಡಿರುವ ಟೋಲ್ ಫ್ರೀ ಸಂಖ್ಯೆ 1950 ಅಡಿಯಲ್ಲಿ ಇದುವರೆಗೂ 70 ಸಾವಿರಕ್ಕಿಂತ ಅಧಿಕ ಕರೆಗಳು ಬಂದಿದ್ದು, ಈ ಪೈಕಿ 3716 ದೂರುಗಳಾಗಿವೆ. ಇನ್ನುಳಿದವು ಮಾಹಿತಿಗಾಗಿ ಮಾಡಿರುವ ಕರೆಗಳಾಗಿವೆ. ಪತ್ರಿಕೆಗಳ ಮೂಲಕ 263 ದೂರುಗಳನ್ನು, 59 ವಿದ್ಯುನ್ಮಾನ ಮಾಧ್ಯಮ ಮತ್ತು 194 ಸಾಮಾಜಿಕ ಜಾಲತಾಣಗಳ ಮೂಲಕ ದೂರುಗಳನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳ ಮೇಲೆ ಆಯೋಗವು ಹೆಚ್ಚಿನ ನಿಗಾವಹಿಸಿದೆ. ವಾಟ್ಸಾಪ್ ಗ್ರೂಪ್ ಮತ್ತು ವೈಯಕ್ತಿಕವಾಗಿ ಪ್ರಚಾರ ಮಾಡುವ ಕುರಿತು ಗಮನಿಸಲಾಗುತ್ತಿದೆ. ವೈಯಕ್ತಿಕ ನಿಂದನೆ, ಟೀಕೆಗಳನ್ನು ಮಾಡುವುದು ಸಾಬೀತಾದರೆ ಸೂಕ್ತ ಕ್ರಮ ಜರುಗಿಸಲಾಗುವುದು. ಫೇಸ್‌ಬುಕ್, ಟ್ವೀಟರ್‌ಗಳಿಗೆ ಈಗಾಗಲೇ ಚುನಾವಣಾ ಆಯೋಗ ನಿರ್ದೇಶನ ನೀಡಿದ್ದು, ಕೋಮುಸೌಹಾರ್ದತೆ ಕೆಡಿಸುವ, ಅಸಭ್ಯವಾದ ಮಾಹಿತಿಗಳನ್ನು ತೆಗೆಯಲು ಸೂಚಿಸಲಾಗಿದೆ ಎಂದು ಹೇಳಿದರು.

ವಿದ್ಯಾವಂತರು, ಶ್ರೀಮಂತರು ಮತದಾನದಿಂದ ದೂರ ಉಳಿಯುತ್ತಿದ್ದು, ಮತದಾನ ಪ್ರಮಾಣ ಕಡಿಮೆಯಾಗಲು ಕಾರಣವಾಗುತ್ತಿದೆ. ಇಂತಹವರಲ್ಲಿ ಬೆಂಗಳೂರು ನಗರದಲ್ಲಿಯೇ ಅಧಿಕ ಸಂಖ್ಯೆಯಲ್ಲಿರುವುದು ಬೇಸರದ ಸಂಗತಿಯಾಗಿದೆ. ಎಲ್ಲರೂ ಮತ ಚಲಾಯಿಸಿದಾಗಲೇ, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕತೆ ಇರುತ್ತದೆ ಎಂದು ಅವರು ನುಡಿದರು.

4 ಲಕ್ಷ ಮಂದಿ ನಿಯೋಜನೆ: ರಾಜ್ಯದಾದ್ಯಂತ ಎರಡು ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಕಾರ್ಯಕ್ಕಾಗಿ 4 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಮೂರುವರೆ ಲಕ್ಷ ಸಿವಿಲ್ ಸಿಬ್ಬಂದಿ ಮತ್ತು 80 ಸಾವಿರ ಪೊಲೀಸರು ಚುನಾವಣಾ ದಿನದಂದು ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಜೀವ್ ಕುಮಾರ್ ತಿಳಿಸಿದರು.

ಪ್ರತಿ ಮತಗಟ್ಟೆಯಲ್ಲಿ ನಾಲ್ಕು ಸಿಬ್ಬಂದಿ ಸೇರಿದಂತೆ ಇತರರು ನಿಯೋಜನೆಗೊಂಡಿದ್ದಾರೆ. ಚುನಾವಣೆ ದಿನದಂದು 4 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡಿದರೆ, ಮತ ಎಣಿಕೆ ದಿನದಂದು 30 ಸಾವಿರ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿಯೊಬ್ಬರಿಗೂ ಈಗಾಗಲೇ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ತರಬೇತಿ ನೀಡಲಾಗಿದೆ ಎಂದರು.

ಅಂಗವಿಕಲ ಮತದಾರರಿಗೆ ಮತದಾನ ವೇಳೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ತಯಾರಿ ನಡೆಸಲಾಗಿದೆ. 4.30 ಲಕ್ಷ ಅಂಗವಿಕಲ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇದುವರೆಗೂ ನೋಂದಣಿ ಮಾಡಿಕೊಳ್ಳದವರಿಗೆ ಇನ್ನೂ ಅವಕಾಶವಿದ್ದು, ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಸಂಜೀವ್ ಕುಮಾರ್ ಮಾಹಿತಿ ನೀಡಿದರು.

ಹೆಚ್ಚುವರಿ ಸಿಬ್ಬಂದಿ ಅಗತ್ಯ

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಪ್ರತಿ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ವಿವಿ ಪ್ಯಾಟ್ ಮತಗಳನ್ನು ಮತ್ತು ಮತಯಂತ್ರಗಳನ್ನು ತಾಳೆ ಮಾಡುವ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ. ಇದೀಗ ಪ್ರತಿ ವಿಧಾನಸಭಾ ಕ್ಷೇತ್ರದ ಕನಿಷ್ಠ ಐದು ಮತಗಟ್ಟೆಗಳ ವಿವಿ ಪ್ಯಾಟ್ ಮತಗಳ ಎಣಿಕೆ ಮಾಡಿ, ಮತಯಂತ್ರಗಳೊಂದಿಗೆ ತಾಳೆ ಮಾಡುವ ಕುರಿತು ಸುಪ್ರೀಂಕೋರ್ಟ್ ನಿರ್ದೇಶನದಿಂದ ಐದು ಸಾವಿರಕ್ಕೂ ಹೆಚ್ಚು ಹೆಚ್ಚುವರಿ ಸಿಬ್ಬಂದಿಯ ಅಗತ್ಯತೆ ಇದೆ.

-ಸಂಜೀವ್ ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ

ಮಕ್ಕಳ ಬಳಕೆ ಸಲ್ಲ:

ಲೋಕಸಭಾ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮಕ್ಕಳನ್ನು ಚುನಾವಣಾ ಕೆಲಸಕ್ಕೆ ಬಳಕೆ ಮಾಡಿಕೊಳ್ಳಬಾರದು. ಈ ಕುರಿತು ಸ್ಥಳೀಯ ಜಿಲ್ಲಾ ಚುನಾವಣಾಧಿಕಾರಿಗಳು ಕ್ರಮ ವಹಿಸಲಿದ್ದಾರೆ ಎಂದು ಸಂಜೀವ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News