ನನ್ನ ಪ್ರತಿಸ್ಪರ್ಧಿ ಬಿಜೆಪಿಯೆ ಹೊರತು, ಕಾಂಗ್ರೆಸ್ ಅಲ್ಲ: ಪ್ರಕಾಶ್‌ ರೈ

Update: 2019-04-09 14:54 GMT

ಬೆಂಗಳೂರು, ಎ.9: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ನನ್ನ ಪ್ರತಿಸ್ಪರ್ಧಿ ಬಿಜೆಪಿಯೆ ಹೊರತು ಕಾಂಗ್ರೆಸ್ ಅಲ್ಲವೆಂದು ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ ರೈ ತಿಳಿಸಿದ್ದಾರೆ.

ಮಂಗಳವಾರ ಶಾಂತಿನಗರದ ಸುತ್ತಮುತ್ತ ಭಾಗಗಳಲ್ಲಿ ರೋಡ್ ಶೋ ನಡೆಸಿದ ಅವರು, ಕಾಂಗ್ರೆಸ್‌ನಿಂದ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದು ಜನತೆಯ ಅರಿವಿಗೆ ಬಂದಿದೆ. ಹೀಗಾಗಿ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂದು ತಿಳಿಸಿದರು.

ಸ್ವಾತಂತ್ರ ಬಂದಾಗಿನಿಂದಲೂ ಅಲ್ಪಸಂಖ್ಯಾತರ ಮತಗಳನ್ನು ಪಡೆಯುತ್ತಿರುವ ಕಾಂಗ್ರೆಸ್, ಇಲ್ಲಿಯವರೆಗೂ ಆ ಸಮುದಾಯಕ್ಕೆ ಏನು ಮಾಡಿದೆ ಎಂಬುದು ಗೊತ್ತಿಲ್ಲ. ಕೇವಲ ಚುನಾವಣೆಯಲ್ಲಿ ಭರವಸೆಗಳ ಭಾಷಣಕ್ಕೆ ಸೀಮಿತವಾಗಿದೆ. ಇವೆಲ್ಲ ಬೆಳವಣಿಗೆಗಳಿಂದ ಅಲ್ಪಸಂಖ್ಯಾತ ಸಮುದಾಯ ನಿರಾಶರಾಗಿದ್ದಾರೆ. ಹೀಗಾಗಿ ಮತದಾರರಿಗೆ ಭರವಸೆಯ ಬೆಳಕಾಗಿ ನಾನು ಕೆಲಸ ಮಾಡಲು ಸಿದ್ಧನಿದ್ದೇನೆಂದು ಅವರು ಹೇಳಿದರು.

ಬೆಂಗಳೂರು ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆರೋಗ್ಯ ಸಮಸ್ಯೆ ಹಾಗೂ ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳ ನಿವಾರಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಕನಿಷ್ಟ ಮಟ್ಟದ ಕಾಳಜಿಯನ್ನು ವಹಿಸಿಲ್ಲ. ಇವೆಲ್ಲ ಕಾರಣಗಳಿಂದ ಜನತೆ ನನಗೆ ಮತ ಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News