ಗಾಂಧಿ ವಿಚಾರಧಾರೆ ದೃಶ್ಯ ಮಾಧ್ಯಮದ ಮೂಲಕ ತಲುಪಲಿ: ನಾಗತಿಹಳ್ಳಿ ಚಂದ್ರಶೇಖರ್

Update: 2019-04-09 15:16 GMT

ಬೆಂಗಳೂರು, ಎ.9: ಮುಂದಿನ ಪೀಳಿಗೆಗೆ ಗಾಂಧೀಜಿ ಅವರ ತತ್ವ ಹಾಗೂ ವಿಚಾರಧಾರೆಗಳನ್ನು ದೃಶ್ಯ ಮಾಧ್ಯಮದ ಮೂಲಕ ತಲುಪಲಿ ಎಂದು ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

ಮಂಗಳವಾರ ನಗರದ ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾ ಭವನದಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ಆಯೋಜಿಸಿದ್ದ ಮಹಾತ್ಮ ಗಾಂಧಿ-150 ಚಲನಚಿತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿ ಅವರ ಗುಣಮಟ್ಟದ ದೃಶ್ಯ ತುಣುಕುಗಳು ಲಂಡನ್‌ನಲ್ಲಿ ಮಾತ್ರ ಇದ್ದು, ನಮ್ಮ ದೇಶದಲ್ಲಿ ಇಲ್ಲ ಎಂದು ತಿಳಿಯಿತು. ಇನ್ನಾದರೂ ಸಂಬಂಧಪಟ್ಟ ಸಂಘ ಸಂಸ್ಥೆಗಳು ಗುಣಮಟ್ಟದ ದೃಶ್ಯಗಳನ್ನು ಸಂಗ್ರಹಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಗಾಂಧೀಜಿ ಅವರಿಗೆ ವೈಯಕ್ತಿಕವಾಗಿ ಚಲನಚಿತ್ರಗಳ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಅದು ಒಂದು ವ್ಯವಹಾರ ಎಂದು ನಿರ್ಲಕ್ಷ ಮಾಡಿದ್ದರು. ಆದರೆ ಅವರ ಕತೆ ಆಧರಿಸಿದ ಚಲನಚಿತ್ರಗಳಿಂದಲೇ, ಜಗತ್ತಿನ ಎಲ್ಲಾ ವಯೋಮಾನದವರು ಗಾಂಧೀಜಿ ಅವರನ್ನು ತಿಳಿಯುವಂತಾಯಿತು. ಈ ನಿಟ್ಟಿನಲ್ಲಿ ತತ್ವ ಆಧಾರಿತ, ಸಿದ್ಧಾಂತ ಆಧಾರಿತ ಚಿತ್ರಗಳನ್ನು ಮಾಡುವಲ್ಲಿ ನಮ್ಮ ಅಕಾಡೆಮಿ ಮುಂದಾಗಿದೆ ಎಂದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೆ. ಪಿ.ಕೃಷ್ಣ ಮಾತನಾಡಿ, ಗಾಂಧಿ ಅವರು ಮಾತಿನ ಮೂಕಲವು ಕ್ರೌರ್ಯವನ್ನು ತೋರಿಸಬಹುದು ಎಂದು ತೋರಿಸಿಕೊಟ್ಟವರು. ಆದರೆ, ದೇಶದಲ್ಲಿ ಇಂದು ರಚನಾತ್ಮಕ ಟೀಕೆಗಳು ಮರೆಯಾಗಿ ಕಟು ವ್ಯಂಗ್ಯೋಕ್ತಿಗಳು, ಟೀಕೆಗಳು ವಿಜೃಂಭಿಸುತ್ತಿವೆ.

ಸತ್ಯ ಹಾಗೂ ಅಹಿಂಸೆಗಳನ್ನು ಪಾಲಿಸಿದರೆ ನಾವು ಗಾಂಧೀಜಿ ಅವರನ್ನು ಗಂಭೀರವಾಗಿ ಪರಿಗಣಿಸಿದಂತೆ. ದೇಶದಲ್ಲಿ ಸಹಭಾಗಿತ್ವ ಶಕ್ತಿ ಉಳಿಯಬೇಕು ಎಂದರೆ, ಗಾಂಧೀ ತತ್ವಗಳು ಉಳಿಯಬೇಕು ಎಂದು ಹೇಳಿದರು.

ಇದೇ ವೇಳೆ 1982ರಲ್ಲಿ ತೆರೆ ಕಂಡ ಆಸ್ಕರ್ ಪ್ರಶಸ್ತಿ ಪಡೆದ ಗಾಂಧಿ ಚಿತ್ರವನ್ನು ಪ್ರದರ್ಶಿಸಲಾಯಿತು. ವೇದಿಕೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News