ಕೊಳಂಬೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ನಿಜ: ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಕೆ

Update: 2019-04-09 15:19 GMT

ಬೆಂಗಳೂರು, ಎ.9: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಕೊಳಂಬೆ ಗ್ರಾಮದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರುವುದು ನಿಜ ಎಂದು ಗಣಿ ಇಲಾಖೆ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ.

ಈ ಸಂಬಂಧ ಕೌಡೂರು ಶ್ರೀ ಕಾಲಭೈರವೇಶ್ವರ ಕಲ್ಲಿನ ಕ್ವಾರಿ ವಿರೋಧಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ದಿನಕರ ರೈ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ಆರ್.ಪದ್ಮಶ್ರೀ ಈ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ 9ನೆ ಪ್ರತಿವಾದಿಯನ್ನಾಗಿ ಮಾಡಲಾಗಿರುವ (ಚಂದ್ರಹಾಸ್ ಟಿ. ಅಮಿನ್) ಅವರು ತಮಗೆ ಗುತ್ತಿಗೆ ನೀಡಿರುವ ಎರಡೂ ಸರ್ವೆ ನಂಬರ್‌ಗಳಲ್ಲಿ ಗುತ್ತಿಗೆ ಪ್ರದೇಶ ಹೊರತುಪಡಿಸಿ ಕಲ್ಲು ಗಣಿಗಾರಿಕೆ ನಡೆಸಿರುವುದು 2019ರ ಮಾ.10ರಂದು ನಡೆಸಿದ ಡ್ರೋಣ್ ಹಾಗೂ ಅತ್ಯಾಧುನಿಕ ಡಿಜಿಪಿಎಸ್ ಸರ್ವೆಯಿಂದ ತಿಳಿದುಬಂದಿದೆ. ಈ ಕುರಿತಂತೆ ಕಲ್ಲು ಗಣಿಗಾರಿಕೆ ಗುತ್ತಿಗೆ ರದ್ದುಪಡಿಸುವ ಸಂಬಂಧ ಶೋಕಾಸ್ ನೋಟಿಸ್ ನೀಡಲಾಗಿದೆ. ಅಲ್ಲದೇ ಈ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಸರಕಾರದ ಬೊಕ್ಕಸಕ್ಕೆ ಆಗಿರುವ ನಷ್ಟದ ಅಂದಾಜು ಸುಮಾರು 15 ಕೋಟಿ ರೂ. ದಂಡವನ್ನು ಪಾವತಿಸುವಂತೆ ಗಣಿ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಈ ಕುರಿತು 30 ದಿನಗಳಲ್ಲಿ ಲಿಖಿತ ಸಮಜಾಯಿಷಿ ನೀಡಬೇಕು. ಇಲ್ಲದಿದ್ದರೆ ಗಣಿ ಗುತ್ತಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ಮಂಗಳೂರು ಗ್ರಾಮದ ಕೊಳಂಬೆ ಗ್ರಾಮದ ಸರ್ವೆ ನಂಬರ್ 248/2ಪಿ2 ರಲ್ಲಿ 2 ಎಕರೆ ಪ್ರದೇಶದಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆಗೆ 2005ರ ಜೂ.2ರಿಂದ ಅನ್ವಯವಾಗುವಂತೆ 20 ವರ್ಷಗಳ ಅವಧಿಗೆ ಗುತ್ತಿಗೆ ಮಂಜೂರು ಮಾಡಲಾಗಿತ್ತು. ಆದರೆ, ಗುತ್ತಿಗೆ ಪ್ರದೇಶದ ಹೊರತಾಗಿ 1.85 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಿ 1.05 ಲಕ್ಷ ಮೆಟ್ರಿಕ್ ಟನ್ ಉಪ ಖನಿಜ ಉತ್ಖನನ ಮಾಡಲಾಗಿದೆ. ಇದಕ್ಕಾಗಿ ಗಣಿ ಗುತ್ತಿಗೆದಾರರು 3.17 ಕೋಟಿ ರೂ. ದಂಡವನ್ನು ಸರಕಾರಕ್ಕೆ ಪಾವತಿಸಬೇಕಾಗಿದೆ.

ಅದೇ ರೀತಿ ಸರ್ವೆ ನಂಬರ್ 248/8ರಲ್ಲಿ 1 ಎಕರೆ ಪ್ರದೇಶದಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆ ನಡೆಸಲು 2015ರ ಸೆ.16ರಿಂದ ಅನ್ವಯವಾಗುವಂತೆ 20 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗುತ್ತಿದೆ. ಆದರೆ, ಗುತ್ತಿಗೆ ಪ್ರದೇಶದ ಹೊರತಾಗಿ 3.62 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಿ 4.19 ಲಕ್ಷ ಮೆಟ್ರಿಕ್ ಟನ್ ಉಪ ಖನಿಜ ಉತ್ಖನನ ಮಾಡಲಾಗಿದೆ. ಇದರಿಂದಾಗಿ 12.57 ಕೋಟಿ ರೂ. ದಂಡ ಪಾವತಿಸಬೇಕಾಗಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ಗಣಿ ಇಲಾಖೆಯ ಪ್ರಮಾಣಪತ್ರದ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರ ಪರ ವಕೀಲರು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು. ಅರ್ಜಿದಾರರ ಪರ ವಕೀಲ ಅಗರ್ತ ಕೇಶವ ಭಟ್ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News