ಜನರ ಸಮಸ್ಯೆಗಳು ಚುನಾವಣಾ ವಿಷಯಗಳಾಗಬೇಕು: ಎಲ್.ಹನುಮಂತಯ್ಯ

Update: 2019-04-09 15:47 GMT

ಬೆಂಗಳೂರು, ಎ.9: ಮನುಷ್ಯ ನೆಮ್ಮದಿಯಾಗಿ ಬದುಕಲು ಬೇಕಾದ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯದ ವಿಷಯಗಳು ಇಂದಿನ ಲೋಕಸಭಾ ಚುನಾವಣೆಯ ಪ್ರಮುಖ ವಿಷಯಗಳಾಗಬೇಕು ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಎಸ್‌ಸಿಎಂ ಹೌಸ್‌ನಲ್ಲಿ ಸಿವಿಲ್ ಸೊಸೈಟಿ ಫೋರಂ ವತಿಯಿಂದ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ಅಂಗವಾಗಿ ಜನರ ಪ್ರಣಾಳಿಕೆ ಬಿಡುಗಡೆ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿನ ಲೋಕಸಭಾ ಚುನಾವಣೆಯು ಕೆಲವು ನಿರ್ದಿಷ್ಟ ವಿಚಾರಗಳ ನಡುವೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ರಾಮರಾಜ್ಯ ಕನಸು ಕಟ್ಟಲು ಎಷ್ಟು ಸಾಧ್ಯವಿದೆಯೋ ಅಷ್ಟು ಅಂಶಗಳನ್ನು ವೇದಿಕೆ ರೂಪಿಸಿರುವ ಪ್ರಣಾಳಿಕೆಯಲ್ಲಿದೆ. ಹೀಗಾಗಿ, ಈ ಚುನಾವಣೆಯು ಮನುಷ್ಯ ಗೌರವಯುತವಾಗಿ ಜೀವಿಸಲು ಅಗತ್ಯವಾದ ಶಿಕ್ಷಣ, ಉದ್ಯೋಗ, ಆರೋಗ್ಯ, ಆಹಾರ, ವಸತಿ ಸೇರಿದಂತೆ ಎಲ್ಲ ಸೌಲಭ್ಯಗಳು ಪ್ರಮುಖ ವಿಷಯವಾಗಿ ಚರ್ಚೆಯಾಗಬೇಕಿದೆ ಎಂದರು.

ದೇಶದ ಪ್ರತಿಯೊಬ್ಬರು ಸಂತಸದಿಂದ ಬದುಕಲು ಅಗತ್ಯವಿರುವುದನ್ನು ನೀಡುವುದು ಆಡಳಿತ ನಡೆಸುವವರ ಕರ್ತವ್ಯ. ಅಂತಹ ಭರವಸೆ ನೀಡುವವರನ್ನು ಜನ ಗುರುತಿಸಬೇಕು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನಿರುದ್ಯೋಗ ನಿವಾರಣೆಗೆ ಸ್ಪಷ್ಟವಾದ ಪರಿಹಾರ ಘೋಷಣೆ ಮಾಡಲಾಗಿದೆ. ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ 30 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಭರವಸೆ ನೀಡಲಾಗಿದೆ. ದೇಶದಲ್ಲಿ ಕೋಟ್ಯಂತರ ಜನರು ಉದ್ಯೋಗಕ್ಕಾಗಿ ಕಾಯುತ್ತಿದ್ದು, ಶೇ.6.1 ರಷ್ಟು ಜನರು ನಿರುದ್ಯೋಗಿಗಳಿದ್ದಾರೆ. ಇದು ಕಳೆದ 45 ವರ್ಷಗಳಲ್ಲಿಯೇ ಅಧಿಕವಾದುದಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ದೇಶದ 20 ಕೋಟಿ ಜನರಿಗೆ, 5 ಕೋಟಿ ಕುಟುಂಬಗಳಿಗೆ ನ್ಯಾಯ್ ಯೋಜನೆ ಅಡಿಯಲ್ಲಿ ವಾರ್ಷಿಕವಾಗಿ 72 ಸಾವಿರ ಹಣ ಖಾತೆಗೆ ಹಾಕುವ ಭರವಸೆ ನೀಡಿದೆ. ಅದೇ ರೀತಿ ಆರೋಗ್ಯ ಖಾತ್ರಿ ಕಾಯ್ದೆ ಜಾರಿ ಮಾಡಲಾಗುವುದು ಎಂದ ಅವರು, ದೇಶದಲ್ಲಿ ಸ್ವಾತಂತ್ರದ ಬಳಿಕ ಸೈನ್ಯವನ್ನು, ಸೇನಾ ಕಾರ್ಯವನ್ನು ಮೊದಲ ಬಾರಿಗೆ ರಾಜಕೀಯಕ್ಕೆ ಬಳಕೆ ಮಾಡಿಕೊಂಡಿರುವುದು ದುರಂತ ಎಂದು ವಿಷಾದಿಸಿದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಸೈನ್ಯಕ್ಕೆ ಮತ್ತಷ್ಟು ಸ್ವತಂತ್ರ ನೀಡಲಾಗುತ್ತದೆ, ಸೈನ್ಯವನ್ನು ಬಲಪಡಿಸಲಾಗುವುದು. ಸೇನೆಯನ್ನು ರಾಜಕೀಯಗೊಳಿಸಿದರೆ ಮಿಲಿಟರಿ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ದೇಶದಲ್ಲಿ ಮಿಲಿಟರಿ ಆಡಳಿತ ಜಾರಿಗೆ ಬರುವುದರಲ್ಲಿ ಅನುಮಾನವಿಲ್ಲ. ಹೀಗಾಗಿ, ರಕ್ಷಣಾ ಪಡೆಯನ್ನು ರಾಜಕೀಯಕ್ಕೆ ಬಳಸಿಕೊಂಡವರನ್ನು ಜನ ಗಮನಿಸಬೇಕು. ನಾವು ಸಾರ್ವಜನಿಕ ಸಂಸ್ಥೆಗಳಾದ ಆರ್‌ಬಿಐ, ಇಡಿ, ಸಿಬಿಐ ಅನ್ನು ಬಲಪಡಿಸುತ್ತೇವೆ ಹಾಗೂ ನ್ಯಾಯ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ ಎಂದು ತಿಳಿಸಿದರು.

ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಮಾತನಾಡಿ, ದೇಶದಲ್ಲಿ ಅಧಿಕಾರ ನಡೆಸಿದ ಸರಕಾರಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸರಿಯಾದ ಗುರಿಯಿಲ್ಲ. ವಿಜ್ಞಾನ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಸಮಾಜ ಸದೃಢವಾಗಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ನಿರ್ದಿಷ್ಟವಾದ ಗುರಿಯಿಲ್ಲದೆ ಉದ್ಯೋಗ, ಶಿಕ್ಷಣವನ್ನು ಸೃಜನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಅಧಿಕಾರ ನಡೆಸಿದವರು ಸರಕಾರಿ ಶಾಲಾ ಮತ್ತು ಆಸ್ಪತ್ರೆಗಳನ್ನು ಖಾಸಗೀಕರಣ ಮಾಡಿದರು. ಸರಿಯಾದ ಆರೋಗ್ಯವಿಲ್ಲದವರು ಉತ್ತಮ ಆಡಳಿತ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಎಲ್ಲಿಯವರೆಗೆ ದೇಶದಲ್ಲಿ ಸಂಸತ್ತಿನಲ್ಲಿ ಕೈಗೊಳ್ಳುವ ನಿರ್ಣಯಗಳು ಜನಪರವಾಗಿ ಇರಬೇಕು ಎಂದು ಚಳವಳಿ ನಡೆಯುವುದಿಲ್ಲವೋ ಅಲ್ಲಿಯವರೆಗೂ ವ್ಯವಸ್ಥೆ ಬದಲಾಗುವುದಿಲ್ಲ ಎಂದರು.

ಬಡತನ ನಿರ್ಮೂಲನೆ ಮಾಡಲಾಗುತ್ತದೆ ಎನ್ನುತ್ತಾರೆ. ಆದರೆ, ಯಾವ ಆಧಾರದ ಮೇಲೆ ಇದನ್ನು ನಿರ್ಧರಿಸುತ್ತಾರೆ. ಬೆಂಗಳೂರು ನಗರದಲ್ಲಿ ಎರಡು ಸಾವಿರ ಸ್ಲಂಗಳಿದ್ದರೂ, ಕೇವಲ 510 ಸ್ಲಂಗಳನ್ನು ಗುರುತಿಸಿದ್ದಾರೆ. ಮಾನವ ಹಕ್ಕುಗಳು, ಪೌರ ಕಾರ್ಮಿಕರ ಸಮಸ್ಯೆಗಳನ್ನು ಯಾರೂ ಚರ್ಚೆ ಮಾಡಿಲ್ಲ. ಪಕ್ಷಗಳ ಪ್ರಣಾಳಿಕೆಗಳಿಂದ ಪ್ರಜಾಪ್ರಭುತ್ವ ಮರು ನಿರ್ಮಾಣವಾಗಬೇಕಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಫೋರಂನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಸೈಯೀದ್ ಶಫೀವುಲ್ಲಾ ಸಾಹೀಬ್, ಸಿಪಿಎಂ ಪಕ್ಷದ ಮುಖಂಡ ಎಸ್.ವೈ.ಗುರುಶಾಂತ್, ಬಿಎಸ್ಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಬಸವರಾಜು ಉಪಸ್ಥಿತರಿದ್ದರು.

ಕೃಷಿಯು ರಾಷ್ಟ್ರೀಯ ಸಮಸ್ಯೆಯಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಸಮಸ್ಯೆಯಿರುತ್ತದೆ. ಅದನ್ನು ಒಂದೇ ರೀತಿಯ ಪರಿಹಾರ ನೀಡಲು ಸಾಧ್ಯವಿಲ್ಲ. ಅದು ಪ್ರಾದೇಶಿಕ ಸಮಸ್ಯೆಯಾಗಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ ರಾಷ್ಟ್ರೀಯ ಸಮಸ್ಯೆಗಳಾಗಿವೆ. ಜನಪ್ರತಿನಿಧಿಗಳು ಏನು ಮಾಡಿದರೂ ಅದು ಜನರಿಗೆ ತಿಳಿಯಬೇಕು. ಜನ ಆಂದೋಲನ ನಡೆಸಿದರೆ, ಜನರ ಜತೆ ನಿಲ್ಲುವಂತಾಗಬೇಕು.

-ಪ್ರಕಾಶ್ ರೈ, ಬೆಂಗಳೂರು ಕೇಂದ್ರ ಪಕ್ಷೇತರ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News