ಕನ್ನಡದ 51 ಕವಿಗಳ ಕವಿತೆಗಳು ನೇಪಾಳಿ ಭಾಷೆಯಲ್ಲಿ ಲೋಕಾರ್ಪಣೆ: ಮನು ಬಳಿಗಾರ್

Update: 2019-04-09 16:58 GMT

ಬೆಂಗಳೂರು, ಎ.9: ಕನ್ನಡದ 51 ಕವಿಗಳ ಕವಿತೆಗಳನ್ನೊಳಗೊಂಡ ‘ಭಾರತ್ ಶಾಶ್ವತ್ ಹವಾಜ್’ ನೇಪಾಳಿ ಪುಸ್ತಕವನ್ನು ನೇಪಾಳದ ಉಪರಾಷ್ಟ್ರಪತಿ ನಂದ ಬಹದ್ದೂರ್ ಪೂನ್ ಕಠ್ಮಂಡುವಿನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹೇಳಿದರು.

ಮಂಗಳವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ ನೇಪಾಳಿ ಕಲಾ ಡಾಟ್ ಕಾಂ ಪ್ರತಿಷ್ಠಾನದೊಂದಿಗೆ ಅಂತರ್‌ರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಒಡಂಬಡಿಕೆ ಪ್ರಕಾರ ಪರಸ್ಪರ ಭಾಷೆಗಳ 50ಕ್ಕೂ ಅಧಿಕ ಕವಿಗಳ ಒಂದೊಂದು ಕವನಗಳನ್ನು ಭಾಷಾಂತರಿಸಿ ಕನ್ನಡ ಮತ್ತು ನೇಪಾಳಿ ಭಾಷೆಗಳಲ್ಲಿ ಪ್ರಕಟಿಸುವ ಯೋಜನೆ ರೂಪಿಸಲಾಗಿತ್ತು. ಅದರಂತೆ 51 ಕವಿತೆಗಳನ್ನು ಕನ್ನಡದಿಂದ ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಇಂಗ್ಲಿಷ್‌ನಿಂದ ನೇಪಾಳಿ ಭಾಷೆಗೆ ಭಾಷಾಂತರಗೊಳಿಸಿ ಪುಸ್ತಕ ಸಿದ್ಧಪಡಿಸಿದ್ದಾರೆ ಎಂದರು.

ಪುಸ್ತಕಕ್ಕೆ ಸಂಬಂಧಿಸಿದ ಎಲ್ಲಾ ವೆಚ್ಚ ನೇಪಾಳಿ ಕಲಾ ಡಾಟ್ ಕಾಂ ಭರಿಸಿದ್ದು, ಪರಿಷತ್‌ನಿಂದ ನಾಲ್ವರನ್ನು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ, ಸಿದ್ದಲಿಂಗಯ್ಯ, ಮಲ್ಲಿಕಾ ಘಂಟಿ ಸೇರಿ ನಾನು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇವೆ. ಅದೇ ರೀತಿ ನೇಪಾಳಿ ಕವಿಗಳ ಕವಿತೆಗಳನ್ನೊಳಗೊಂಡ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಲೋಕಸಭಾ ಚುನಾವಣೆ ನಂತರ ಬಿಡುಗಡೆಗೊಳಿಸಲಾಗುವುದು ಎಂದರು.

ಪುಸ್ತಕದಲ್ಲಿ ಯಾರ್ಯಾರ ಕವಿತೆಗಳಿವೆ?: ಕುವೆಂಪು, ದ.ರಾ.ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಯು.ಆರ್. ಅನಂತಮೂರ್ತಿ, ಜಿ.ಎಸ್.ಶಿವರುದ್ರಪ್ಪ, ಡಾ. ಚನ್ನವೀರ ಕಣವಿ, ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ವಿಜಯಶ್ರೀ ಸಬರದ, ಜಿ.ಎಸ್.ಸಿದ್ದಲಿಂಗಯ್ಯ, ಎಚ್.ಎಸ್. ವೆಂಕಟೇಶಮೂರ್ತಿ, ಮಲ್ಲಿಕಾ ಘಂಟಿ, ಟಿ.ಸಿ.ಪೂರ್ಣಿಮಾ ಸೇರಿದಂತೆ 51 ಕವಿಗಳ ಕವಿತೆ ನೇಪಾಳಿ ಭಾಷೆಯಲ್ಲಿ ಪುಸ್ತಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News