ನೌಶಾದ್ ಖಾಸಿಂಜಿ ಹತ್ಯೆಗೆ 10 ವರ್ಷ: ಸಾವಿನಲ್ಲೂ ಯುವಜನರಿಗೆ ಸ್ಫೂರ್ತಿಯಾದ ನ್ಯಾಯವಾದಿ

Update: 2019-04-09 17:06 GMT

ಭಟ್ಕಳ ಮೂಲದ ಮಂಗಳೂರಿನಲ್ಲಿ ವೃತ್ತಿ ನಡೆಸುತ್ತಿದ್ದ ವಕೀಲ ನೌಶಾದ್ ಖಾಸಿಂಜಿ 2009ರ ಎಪ್ರಿಲ್ 9ರಂದು ದುಷ್ಕರ್ಮಿಗಳ ಗುಂಡಿಗೆ ಬಲಿಯಾದರು. ಈ ದಾಳಿ ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳಿಗೆ ಹೋರಾಡುವ ಯುವಜನರಲ್ಲಿ ಭಯವನ್ನು ಬಿತ್ತಬಹುದು ಎಂದು ಹಂತಕರು ಯೋಚಿಸಿರಬೇಕು. ಆದರೆ ನೌಶಾದ್ ಹತ್ಯೆಯಿಂದ ಆಗಿರುವ ಪರಿಣಾಮ ಇದಕ್ಕೆ ವಿರುದ್ಧವಾದದ್ದು. ಹಲವು ಯುವಕರು ನ್ಯಾಯಕ್ಕಾಗಿ ಹೋರಾಡುವ ಹಾದಿ ಕಂಡುಕೊಂಡಿದ್ದಾರೆ ಅಥವಾ ತಮ್ಮದೇ ಮಾರ್ಗದಲ್ಲಿ ನೌಶಾದ್ ಆಗುವ ಪ್ರಯತ್ನದಲ್ಲಿದ್ದಾರೆ.

ಮಂಗಳೂರು, ಎ.9: 2009ರ ಏಪ್ರಿಲ್ 9ರಂದು ನಗರದ ಖ್ಯಾತ ಕ್ರಿಮಿನಲ್ ವಕೀಲರಲ್ಲೊಬ್ಬರಾದ ನೌಶಾದ್ ಖಾಸಿಂಜಿ ಅವರನ್ನು ಫಳ್ನೀರಿನ ಅವರ ಅಪಾರ್ಟ್‍ಮೆಂಟ್‍ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು.

ಮೂಲತಃ ಭಟ್ಕಳದವರಾದ ನೌಶಾದ್ ಮಂಗಳೂರಿನಲ್ಲಿ ವಕೀಲಿ ವೃತ್ತಿ ನಿರ್ವಹಿಸುತ್ತಿದ್ದರು. ನೌಶಾದ್, ಸಾಮಾಜಿಕ ಅನ್ಯಾಯ ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಮಾನವಹಕ್ಕುಗಳ ಹೋರಾಟಗಾರ. ಈ ಕಾರಣದಿಂದ, ತಮಗೆ ತರಬೇತಿ ನೀಡಿದ ಹಿರಿಯ ವಕೀಲ ಪುರುಷೋತ್ತಮ ಪೂಜಾರಿಯವರಂತೆ ಯುವ ವಯಸ್ಸಿನಲ್ಲೇ ವೃತ್ತಿಯಲ್ಲಿ ಖ್ಯಾತಿ ಗಳಿಸಿದ್ದರು.

ಹತ್ಯೆ ನಡೆದ ಸಂದರ್ಭದಲ್ಲಿ ನೌಶಾದ್, ಅಬ್ದುಲ್ ರಶೀದ್ ಹಸನ್ (ಮಲಬಾರಿ) ಪ್ರಕರಣವನ್ನು ನಿಭಾಯಿಸುತ್ತಿದ್ದರು. ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಉಳ್ಳಾಲ ಪೊಲೀಸರು ಮಾಡಿದ್ದ ಮನವಿಯನ್ನು ನೌಶಾದ್ ವಿರೋಧಿಸಿದ್ದರು. ಹತ್ಯೆ ಪ್ರಕರಣವೊಂದರಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಹೆಸರಿಸಿದ್ದು, ಈ ಹತ್ಯೆಗೆ ಮುಖ್ಯ ಕಾರಣ ಎಂದು ಪುರುಷೋತ್ತಮ ಪೂಜಾರಿಯವರು ಆರೋಪಿಸಿದ್ದರು. ಹತ್ಯೆಯ ದಿನ ಪೊಲೀಸ್ ಅಧಿಕಾರಿಗಳಿಂದ ಬೆದರಿಕೆ ಕರೆಗಳು ಬಂದಿದ್ದ ಬಗ್ಗೆ ನೌಶಾದ್ ಮಾಹಿತಿ ನೀಡಿದ್ದರು ಎನ್ನುವುದು ಪುರುಷೋತ್ತಮ ಪೂಜಾರಿಯವರ ಪ್ರತಿಪಾದನೆ. ಆದರೆ ಈ ಆರೋಪವನ್ನು ನ್ಯಾಯಾಲಯ ಪರಿಗಣಿಸದೇ ಪ್ರಕರಣ ವಜಾ ಮಾಡಿತು.

ಹಲವು ಸರ್ಕಾರೇತರ ಸಂಸ್ಥೆಗಳು, ವಕೀಲಿ ವೃತ್ತಿಯ ಗೆಳೆಯರು, ಭಟ್ಕಳದ ಜನರು ಜತೆ ಸೇರಿ ಈ ಕ್ರೂರ ಹತ್ಯೆ ವಿರುದ್ಧ ಪ್ರತಿಭಟನೆ ನಡೆಸಿದರು. ಪುರುಷೋತ್ತಮ ಪೂಜಾರಿ, ನೌಶಾದ್ ಸಹೋದರ ಹಾಗೂ ವಕೀಲ ಸಮೀರ್ ಖಾಸಿಂಜಿ ಮತ್ತು ನೌಶಾದ್ ಪತ್ನಿ ನುಶ್ರತ್ ಜಹಾನ್ ಅವರ ಹಲವು ವರ್ಷಗಳ ಕಾನೂನು ಹೋರಾಟದ ಬಳಿಕ ಮಂಗಳೂರು ಸೆಷನ್ಸ್ ನ್ಯಾಯಾಲಯ 2015ರ ನವೆಂಬರ್‍ನಲ್ಲಿ, ಐದು ಮಂದಿಯನ್ನು ತಪ್ಪಿತಸ್ಥರೆಂದು ನಿರ್ಧರಿಸಿ, ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ಉಳಿದವರಿಗೆ ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಈ ಪ್ರಕರಣದ ಸೂತ್ರಧಾರ ರವಿ ಪೂಜಾರಿಗೆ ಹುಡುಕಾಟ ಮುಂದುವರಿದಿದೆ.

2018ರ ಆಗಸ್ಟ್ ನಲ್ಲಿ ಕರ್ನಾಟಕ ಹೈಕೋರ್ಟ್ ಸೂಕ್ತ ಪುರಾವೆಗಳಿಲ್ಲ ಎಂದು ಪ್ರಕರಣದ ಎಲ್ಲ ಐದು ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ. ನೌಶಾದ್ ಹತ್ಯೆಯಾದ ಹತ್ತು ವರ್ಷಗಳ ಬಳಿಕ ಸಮೀರ್ ಮತ್ತು ನುಶ್ರತ್ ಜಹಾನ್ ಮಂಗಳೂರಿನಲ್ಲಿ ವಕೀಲಿ ವೃತ್ತಿ ಮುಂದುವರಿಸಿದ್ದಾರೆ. ಪುರುಷೋತ್ತಮ ಪೂಜಾರಿ 2014ರ ಮೇ ತಿಂಗಳಲ್ಲಿ ಮೃತಪಟ್ಟಿದ್ದಾರೆ.

ತಮ್ಮ ಸಹೋದರ ನೌಶಾದ್ ಬಲಿದಾನ ವ್ಯರ್ಥವಾಗಿಲ್ಲ; ಅದು ಫಲ ನೀಡುತ್ತಿದೆ ಎಂದು ಸಮೀರ್ ಅಭಿಪ್ರಾಯಪಡುತ್ತಾರೆ. ಮಂಗಳವಾರ ‘ವಾರ್ತಾ ಭಾರತಿ’ ಜತೆ ಮಾತನಾಡಿದ ಅವರು, ಈ ಹತ್ಯೆ ಪ್ರಕರಣದ ಭಾವನಾತ್ಮಕ ಅಂಶಗಳ ಬಗ್ಗೆ ಏನೂ ಹೇಳಲಿಲ್ಲ. ಆದರೆ ಈ ಹತ್ಯೆ ಸಮಾಜದಲ್ಲಿ ತಂದ ಬದಲಾವಣೆಗಳನ್ನು ಒತ್ತಿ ಹೇಳಿದರು.

"ನೌಶಾದ್ ಸಾಮಾಜಿಕ ಅನ್ಯಾಯ ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ಹೋರಾಡುತ್ತಿದ್ದರು. ಮಾನವ ಹಕ್ಕುಗಳ ಬಗ್ಗೆ ಕಾಳಜಿ ಹೊಂದಿದ ಎಲ್ಲರಿಗೂ ಈ ಹತ್ಯೆ ಆಘಾತ ತಂದಿತ್ತು. ಅವರ ಹತ್ಯೆ ಸಮಾಜದಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಹಾಗೂ ಹಲವು ಯುವಕರ ಮನೋಭಾವ ಬದಲಾಗಲು ಇದು ಕಾರಣವಾಗಿದೆ. ನೌಶಾದ್‍ ರಂತೆ ಕೆಲಸ ಮಾಡಲು ಹಲವು ವಿದ್ಯಾರ್ಥಿಗಳು ವಕೀಲಿ ವೃತ್ತಿ ಕೈಗೊಂಡಿದ್ದಾರೆ. ಅವರೆಲ್ಲರೂ ನೌಶಾದ್ ಆಗಲು ಬಯಸಿದ್ದಾರೆ. ಎಲ್ಲರೂ ಸಮಾಜಸೇವೆ ಮಾಡುವ ಕನಸು ಹೊಂದಿದ್ದಾರೆ. ಸಮಾಜದ ಒಳಿತಿನ ನಿಟ್ಟಿನಲ್ಲಿ ಅವರ ಬಲಿದಾನ ಇಂದು ಫಲ ನೀಡುತ್ತಿದೆ ಎನ್ನುವುದು ನನ್ನ ಭಾವನೆ. ದಮನಿಸಲ್ಪಟ್ಟವರಿಗಾಗಿ ಹೋರಾಡುವ ಇಂಥ ಹೆಚ್ಚು ವಕೀಲರ ಅಗತ್ಯ ಇಂದಿದೆ. ಒಂದು ವೇಳೆ ನೌಶಾದ್ ಹತ್ಯೆ ನಡೆಯದಿದ್ದರೆ, ಯುವ ವಕೀಲರ ಸಂಖ್ಯೆ, ಅದರಲ್ಲೂ ಮುಖ್ಯವಾಗಿ ಭಟ್ಕಳ ಸಮುದಾಯದ ಯುವ ವಕೀಲರ ಸಂಖ್ಯೆ ಇಷ್ಟೊಂದು ಹೆಚ್ಚುತ್ತಿರಲಿಲ್ಲ" ಎಂದು ಸಮೀರ್ ಹೇಳುತ್ತಾರೆ.

ನೌಶಾದ್ ಅವರಂತೆ ಬಹಳಷ್ಟು ಮಂದಿ ಯುವಜನರು ವಕೀಲಿ ವೃತ್ತಿ ಕೈಗೊಳ್ಳಲು ಬಯಸಿದ್ದಾರೆ. ನೌಶಾದ್ ರ ಹತ್ಯೆಯ ಮೂಲಕ ಯಾರು ಬೆದರಬಹುದು ಎಂದು ಎಣಿಸಲಾಗಿತ್ತೋ ಅವರು ಇಂದು ವಕೀಲರಾಗಿ ಹೊರಬರುತ್ತಿದ್ದಾರೆ. ಸಾಮಾಜಿಕ ನ್ಯಾಯದ ಪರ ಹೋರಾಡಲು ಪಣ ತೊಟ್ಟಿದ್ದಾರೆ. ಈ ಮೂಲಕ ಬದುಕಿನುದ್ದಕ್ಕೂ ಅನ್ಯಾಯದ ವಿರುದ್ಧ ಹೋರಾಡಿದ ಕಾಸಿಂಜಿ ತನ್ನ ಸಾವಿನಲ್ಲೂ ಯುವಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

Full View

Writer - ಇಸ್ಮಾಯೀಲ್

contributor

Editor - ಇಸ್ಮಾಯೀಲ್

contributor

Similar News