ವೇತನ ನೀಡಲು ವಿಳಂಬ: ಮಾಲಕನನ್ನೆ ಅಪಹರಿಸಿದ ಕಾರ್ಮಿಕರು!

Update: 2019-04-09 17:08 GMT

ಬೆಂಗಳೂರು, ಎ.9: ಸೂಕ್ತ ಸಮಯಕ್ಕೆ ವೇತನ ನೀಡದ ಮಾಲಕನೋರ್ವನನ್ನು ಕಾರ್ಮಿಕರೆ ಅಪಹರಿಸಿರುವ ಘಟನೆ ನಗರದಲ್ಲಿ ನಡೆದಿದ್ದು, ಈ ಸಂಬಂಧ ನಾಲ್ವರು ಆರೋಪಿಗಳನ್ನು ಇಲ್ಲಿನ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂಜಯ್, ರಾಕೇಶ್, ನಿರಂಜನ್ ಮತ್ತು ದರ್ಶನ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಹಲಸೂರಿನಲ್ಲಿ ಇನ್ಫೋಟೆಕ್ ಸಾಫ್ಟ್ ವೇರ್ ಕಂಪೆನಿ ಮಾಲಕ ಸುಜಯ್ ಎಂಬವರನ್ನು ಕಾರ್ಮಿಕರು ಅಪಹರಣ ಮಾಡಿದ್ದಾರೆ. ಸುಜಯ್ ಕಳೆದ ಮೂರು ತಿಂಗಳಿನಿಂದ ಕಾರ್ಮಿಕರಿಗೆ ಸಂಬಳ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡುವ ನೆಪದಲ್ಲಿ ಕಾರ್ಮಿಕರು ಕರೆಸಿಕೊಂಡು ಅಪಹರಣ ಮಾಡಿದ್ದಾರೆ. ನಂತರ ಮದ್ದೂರಿನ ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು. ಈ ವೇಳೆ ಸುಜಯ್ ಕಾರ್ಮಿಕರಿಗೆ ಸಂಬಳ ನೀಡುವ ಭರವಸೆ ನೀಡಿದ್ದಾರೆ. ನಂತರ ನಾಲ್ವರು ಕಾರ್ಮಿಕರು ವಾಪಸ್ ಮನೆಗೆ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಮನೆಗೆ ಬಂದ ಮಾಲಕ ಸುಜಯ್ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಾಲಕ ಸುಜಯ್ ಆಸ್ಪತ್ರೆಯಿಂದಲೂ ನಾಪತ್ತೆಯಾಗಿದ್ದಾರೆ. ಮತ್ತೆ ಕಾರ್ಮಿಕರೆ ಅಪಹರಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಆರೋಪಿಗಳ ಬಂಧನದ ಬಳಿಕವೂ ಸುಜಯ್ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News