ಪೊಲೀಸರ ವಿರುದ್ಧ ಸುಳ್ಳು ಆರೋಪ: ರಾಷ್ಟ್ರಪತಿಗೆ ಟ್ಯಾಗ್ ಮಾಡಿದ ಯುವತಿ

Update: 2019-04-09 17:11 GMT

ಬೆಂಗಳೂರು, ಎ.9: ಯುವತಿಯೊಬ್ಬಾಕೆ ಪೊಲೀಸರ ಮೇಲೆ ಸುಳ್ಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಅದನ್ನು ರಾಷ್ಟ್ರಪತಿ ಮತ್ತು ಬೆಂಗಳೂರು ಪೊಲೀಸರ ಅಧಿಕೃತ ಸಾಮಾಜಿಕ ಜಾಲತಾಣ ಪುಟಗಳಿಗೆ ಟ್ಯಾಗ್ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಕೋರಮಂಗಲ ನಿವಾಸಿ ಲತಾ (ಹೆಸರು ಬದಲಾಯಿಸಲಾಗಿದೆ) ಉದ್ದೇಶಪೂರ್ವಕವಾಗಿ ಪೊಲೀಸರ ವಿರುದ್ಧ ದೂರು ನೀಡಿದ್ದಾಳೆ ಎಂದು ಹೇಳಲಾಗುತ್ತಿದೆ.

ಏನಿದು ದೂರು?: ಎ.6ರಂದು ಲತಾ ತನ್ನ ಸ್ನೇಹಿತೆಯ ಜೊತೆ ರಾತ್ರಿ ಕೋರಮಂಗಲದಲ್ಲಿರುವ ಪಬ್‌ವೊಂದಕ್ಕೆ ತೆರಳಿದ್ದು, ಬಳಿಕ ಕೆಲ ಸಮಯದ ಬಳಿಕ ಹೊರಬಂದಿದ್ದಾಳೆ. ಆದರೆ ಮತ್ತದೇ ಪಬ್‌ಗೆ ಬಂದ ಯುವತಿ ತನ್ನ ಮೊಬೈಲ್ ಒಳಗೆ ಇದೆ ಎಂದು ಹೇಳಿದ್ದಾಳೆ. ಆದರೆ ಅಷ್ಟೊತ್ತಿಗೆ ಪಬ್ ಬಾಗಿಲು ಬಂದ್ ಆಗಿತ್ತು. ಇದರಿಂದ ಸಿಟ್ಟುಗೊಂಡು ಪಬ್ ಸಿಬ್ಬಂದಿ ಜೊತೆ ಜಗಳವಾಗಿದೆ. ಈ ವೇಳೆ ಭಯಗೊಂಡ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಲತಾಳನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದ್ದಾರೆ. ಆದರೆ, ಕುಡಿದ ಮತ್ತಿನಲ್ಲಿದ್ದ ಲತಾ ಯಾವುದೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ. ನಂತರ ಸ್ವತಃ ಪೊಲೀಸರೆ ದುಡ್ಡು ಕೊಟ್ಟು ಆಕೆಯನ್ನು ಮನೆಗೆ ಕಳುಹಿಸಿದ್ದಾರೆ. ಆದರೆ, ಯುವತಿ ಮಾತ್ರ ಪೊಲೀಸರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಸಾಲದಕ್ಕೆ ನನ್ನ ಮೇಲೆ ಹಲ್ಲೆ ಮಾಡಿ ನನ್ನ ಕಾಲನ್ನು ಮುರಿದು ಹಾಕಿದ್ದಾರೆ ಎಂದು ಫೇಸ್‌ಬುಕ್‌ನಲ್ಲಿ ಬರೆದು ರಾಷ್ಟ್ರಪತಿಗೆ ಸೇರಿದಂತೆ ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದಾಳೆ ಎನ್ನಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಇಷಾ ಪಂತ್ ಯುವತಿಯನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News