ದೂರುದಾರರಿಂದ ಲಂಚ ಕೇಳಿದ ಪ್ರಕರಣ: ಇಬ್ಬರು ಪೊಲೀಸರ ಅಮಾನತು-ಹೈಕೋರ್ಟ್‌ಗೆ ಹೇಳಿಕೆ ನೀಡಿದ ಡಿಸಿಪಿ

Update: 2019-04-09 17:56 GMT

ಬೆಂಗಳೂರು, ಎ.9: ಕಳೆದು ಹೋದ ಮಗನನ್ನು ಹುಡುಕಿಕೊಡಿ ಎಂದು ದೂರು ಸಲ್ಲಿಸಲು ಹೋದಾಗ ಲಂಚ ಕೇಳಿದ ಎಎಸ್‌ಐ ಗೋವಿಂದಪ್ಪ ಹಾಗೂ ಪಿಸಿ ಮಣ್ಣಪ್ಪ ಅವರನ್ನು ಅಮಾನತುಗೊಳಿಸಲು ಪಶ್ಚಿಮ ವಿಭಾಗದ ಡಿಸಿಪಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಅರ್ಜಿದಾರೆ ಬಾಲಮ್ಮ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಫಣೀಂದ್ರ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ಕೋರ್ಟ್‌ಗೆ ಖುದ್ದು ಹಾಜರಾದ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣವರ್, ಮಗನನ್ನು ಹುಡುಕಿಕೊಡಲು ದೂರು ಸಲ್ಲಿಸಲು ಬಂದವರಿಂದ ಲಂಚ ಕೇಳಿದ ಇಬ್ಬರು ಪೊಲೀಸರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಮತ್ತೊಬ್ಬ ಪಿಸಿ ಫಕೀರಪ್ಪ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಇದರ ಬಗ್ಗೆ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು.

ನನ್ನ ಮಗ ಮನೆ ಬಿಟ್ಟು ಹೋಗಿದ್ದು ಅವನು ಕೃಷ್ಣಪ್ಪ ಎಂಬುವವರ ಮನೆಯಲ್ಲಿ ಇದ್ದಾನೆ ಎಂಬ ಸಂಶಯ ನನಗೆ ಬರುತ್ತಿದೆ. ಹೀಗಾಗಿ, ಕೃಷ್ಣಪ್ಪ ಅಥವಾ ನನ್ನ ಮಗನನ್ನಾದರೂ ಹುಡುಕಿಕೊಡಿ ಎಂದು ಕಾಟನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದೆ. ಆದರೆ, ಎಎಸ್‌ಐ ಗೋವಿಂದಪ್ಪ ಅವರು 3 ಸಾವಿರ ರೂ.ಲಂಚ ಕೇಳಿದರು ಎಂದು ಅರ್ಜಿದಾರೆ ಬಾಲಮ್ಮ ಅವರು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಪಶ್ಚಿಮ ವಿಭಾಗದ ಡಿಸಿಪಿಗೆ ನ್ಯಾಯಪೀಠದ ಎದುರು ಖುದ್ದು ಹಾಜರಾಗಲು ಸೂಚಿಸಿತು. ಪೀಠದ ಸೂಚನೆಯಂತೆ ಹಾಜರಾದ ರವಿ ಡಿ. ಚನ್ನಣ್ಣವರ್, ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News