ತಲೆನೋವಿಗೆ ಉಪ್ಪು ಕೂಡ ಕಾರಣವಾಗಬಹುದು: ಹೇಗೆ ಗೊತ್ತಾ?

Update: 2019-04-10 11:08 GMT

ಅತಿಯಾದರೆ ಎಲ್ಲವೂ ಕೆಟ್ಟದ್ದೇ. ನೀವು ಆಹಾರದಲ್ಲಿ ಅತಿಯಾಗಿ ಉಪ್ಪು ಸೇವಿಸುತ್ತಿದ್ದರೆ ಅದು ಹಲವಾರು ರೀತಿಗಳಲ್ಲಿ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಅತಿಯಾದ ಉಪ್ಪಿನ ಸೇವನೆಯು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಹೃದಯನಾಳೀಯ ಕಾಯಿಲೆಗಳು, ಮೂತ್ರಪಿಂಡ ರೋಗಗಳು ಹಾಗೂ ಅಸ್ಥಿರಂಧ್ರತೆಗೆ ಕಾರಣವಾಗಬಹುದು. ಆದರೆ ನೀವು ಮೂತ್ರ ಪರೀಕ್ಷೆ ಮಾಡಿಸಿಕೊಳ್ಳದಿದ್ದರೆ ನೀವು ಅತಿಯಾಗಿ ಉಪ್ಪು ಸೇವಿಸುತ್ತಿದ್ದೀರಿ ಎನ್ನುವುದು ನಿಮಗೆ ಗೊತ್ತಾಗದಿರಬಹುದು. ನಿಯಮಿತವಾಗಿ ಅತಿಯಾಗಿ ಉಪ್ಪನ್ನು ಸೇವಿಸಿದ ಬಳಿಕ ವ್ಯಕ್ತಿಯಲ್ಲಿ ಕೆಲವು ಲಕ್ಷಣಗಳು,ಸಂಕೇತಗಳು ಕಂಡು ಬರುತ್ತವೆ. ಈ ಎಚ್ಚರಿಕೆಯ ಸಂಕೇತಗಳು ನಿಮ್ಮ ಆಹಾರದಲ್ಲಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡುವ ಕಾಲವೀಗ ಬಂದಿದೆ ಎನ್ನುವ ಸುಳಿವನ್ನು ನೀಡುತ್ತವೆ.

ನಿರೀಕ್ಷಿಸಿರದ ಜಾಗಗಳಲ್ಲಿ ಊತಗಳು

ಇದು ಅಚ್ಚರಿಯನ್ನುಂಟು ಮಾಡುವ ಲಕ್ಷಣವಾಗಿರಬಹುದು. ಅತಿಯಾದ ಉಪ್ಪಿನ ಸೇವನೆಯು ಶರೀರದಲ್ಲಿಯ ವಿವಿಧ ಅಂಗಾಂಗಗಳಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಇದು ಶರೀರದ ವಿವಿಧ ಭಾಗಗಳಲ್ಲಿ ಊತಕ್ಕೆ ಕಾರಣವಾಗುತ್ತದೆ. ಉಬ್ಬಿದ ಕಣ್ಣುಗಳು, ಬೆರಳುಗಳಲ್ಲಿ, ಕಣಕಾಲು ಮತ್ತು ಮಂಡಿಗಳ ಸುತ್ತ ಊತ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನೀವು ಸೇವಿಸುವ ಆಹಾರದ ಬಗ್ಗೆ ನಿಗಾ ವಹಿಸುವುದು ಈ ಸ್ಥಿತಿಯನ್ನು ನಿಯಂತ್ರಿಸಲು ಇರುವ ಏಕೈಕ ಮಾರ್ಗವಾಗಿದೆ. ಪ್ರತಿದಿನ ನೀವು ಸೇವಿಸುವ ಉಪ್ಪಿನ ಪ್ರಮಾಣವನ್ನು ತಗ್ಗಿಸುವುದು ಮುಖ್ಯವಾಗುತ್ತದೆ.

ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ

ಉಪ್ಪಿನ ಸೇವನೆ ನಿಮ್ಮ ಮೂತ್ರ ವಿಸರ್ಜನೆಯ ಸ್ವರೂಪವನ್ನು ಬದಲಿಸುತ್ತದೆ. ಅತಿಯಾದ ಉಪ್ಪು ಸೇವಿಸುತ್ತಿದ್ದರೆ ಅದನ್ನು ಶರೀರದಿಂದ ಹೊರಗೆ ಹಾಕಲು ಮೂತ್ರಪಿಂಡಗಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ತುರ್ತಾಗಿ ಮೂತ್ರ ವಿಸರ್ಜನೆಯ ತುಡಿತ ನಿಮ್ಮನ್ನು ಕಾಡಬಹುದು. ಇಂತಹ ಸ್ಥಿತಿಯಲ್ಲಿ ನೀವು ಸೇವಿಸುವ ಉಪ್ಪಿನ ಪ್ರಮಾಣವನ್ನು ನೀವು ನಿಯಂತ್ರಿಸಬೆಕಾಗುತ್ತದೆ. ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕಾದ ಅಗತ್ಯದ ಹಿಂದಿನ ಖಳನಾಯಕ ಉಪ್ಪು ಆಗಿರಬಹುದು. ಮೂತ್ರದ ಬಣ್ಣದಲ್ಲಿ ಬದಲಾವಣೆಯೂ ನಿಮ್ಮ ಅನುಭವಕ್ಕೆ ಬರಬಹುದು. ಉಪ್ಪು ಹೆಚ್ಚಿನ ಆಹಾರಗಳಲ್ಲಿ ಅಗತ್ಯ ಭಾಗವಾಗಿದ್ದರೂ ಕೆಲವು ಆಹಾರಗಳಲ್ಲಿ ಕಡಿಮೆ ಉಪ್ಪನ್ನು ಬಳಸಬಹುದಾಗಿದೆ.

ಅತಿಯಾದ ಬಾಯಾರಿಕೆ

ನೀವು ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಸೇವಿಸಿದಾಗ ಶರೀರದಲ್ಲಿಯ ದ್ರವ ಸಮತೋಲನವು ವ್ಯತ್ಯಯಗೊಳ್ಳುತ್ತದೆ. ಅತಿಯಾದ ಉಪ್ಪು ನೀವು ಹೆಚ್ಚು ನೀರನ್ನು ಸೇವಿಸುವಂತೆ ಮಾಡುತ್ತದೆ. ನಿಮಗೆ ಆಗಾಗ್ಗೆ ಬಾಯಾರಿಕೆಯಾಗುತ್ತಿರುತ್ತದೆ. ನೀವು ಹೆಚ್ಚೆಚ್ಚು ನೀರನ್ನು ಸೇವಿಸುತ್ತಿರಬೇಕಾಗುತ್ತದೆ,ಇಲ್ಲದಿದ್ದರೆ ನಿರ್ಜಲೀಕರಣ ಉಂಟಾಗುತ್ತದೆ. ನೀರು ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುವ ಜೊತೆಗೆ ನಿಮ್ಮನ್ನು ತಾಜಾ ಆಗಿರಿಸುತ್ತದೆ.

ಉಪ್ಪಿಗಾಗಿ ಹಾತೊರೆಯುವಿಕೆ

ನೀವು ಅತಿಯಾದ ಉಪ್ಪನ್ನು ಬಳಸಿದಾಗ ನೀವು ಅದಕ್ಕೆ ಎಷ್ಟೊಂದು ಒಗ್ಗಿಕೊಳ್ಳುತ್ತೀರೆಂದರೆ ನೀವು ಸೇವಿಸುವ ಪ್ರತಿಯೊಂದು ಆಹಾರಕ್ಕೂ ಹೆಚ್ಚುವರಿ ಉಪ್ಪನ್ನು ಸೇರಿಸಿಕೊಳ್ಳುತ್ತೀರಿ. ನೀವು ಸೇವಿಸುತ್ತಿರುವ ಆಹಾರವು ಸಪ್ಪೆಯಾಗಿದೆ ಎಂದು ನಿಮಗನಿಸುತ್ತದೆ ಮತ್ತು ಹೆಚ್ಚು ಉಪ್ಪು ಬೆರೆಸಿಕೊಳ್ಳುತ್ತೀರಿ. ನಿಮ್ಮ ನಾಲಿಗೆಯಲ್ಲಿನ ರುಚಿಮೊಗ್ಗುಗಳು ಉಪ್ಪಿನ ರುಚಿಗೆ ಹೆಚ್ಚು ಒಗ್ಗಿಕೊಂಡಿರುವುದರಿಂದ ಅವುಗಳನ್ನು ತಣಿಸಲು ನೀವು ಉಪ್ಪು ಹೆಚ್ಚಿರುವ ಆಹಾರಗಳಿಗಾಗಿ ಹಾತೊರೆಯುತ್ತೀರಿ.

ನಿರಂತರ ತಲೆನೋವು

ಆಗಾಗ್ಗೆ ತಲೆನೋವು ಕಾಣಿಸಿಕೊಳ್ಳುವುದು ನೀವು ಅತಿಯಾಗಿ ಉಪ್ಪನ್ನು ಬಳಸುತ್ತೀರಿ ಎನ್ನುವುದಕ್ಕೆ ಇನ್ನೊಂದು ಸೂಚನೆಯಾಗಿದೆ. ಸದಾ ಕಾಲವೂ ನೀವು ತಲೆನೋವನ್ನು ಅನುಭವಿಸಬಹುದು. ಈ ತಲೆನೋವುಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಈ ತಲೆನೋವುಗಳನ್ನು ದೂರವಿಡಲು ನೀವು ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವ ಜೊತೆಗೆ ಹೆಚ್ಚು ನೀರನ್ನು ಸೇವಿಸುವುದು ಅಗತ್ಯವಾಗಿದೆ. ನೋವಿನ ಮಾತ್ರೆಯನ್ನು ನುಂಗುವ ಬದಲು ಹೆಚ್ಚು ನೀರನ್ನು ಸೇವಿಸುವುದು ತಲೆನೋವುಗಳನ್ನು ತಡೆಯಲು ಉತ್ತಮ ಮಾರ್ಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News