ಕೊಹ್ಲಿ ವಿಸ್ಡನ್ ‘‘ವಿಶ್ವದ ಪ್ರಮುಖ ಕ್ರಿಕೆಟಿಗ"

Update: 2019-04-11 04:15 GMT

ಹೊಸದಿಲ್ಲಿ, ಎ.10: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಬುಧವಾರ ವಿಸ್ಡನ್ ವಾರ್ಷಿಕ ಸಂಚಿಕೆಯು ಸತತ ಮೂರನೇ ಬಾರಿಗೆ ಕೊಹ್ಲಿ ಅವರನ್ನು ‘ವಿಶ್ವದ ಪ್ರಮುಖ ಕ್ರಿಕೆಟಿಗ’’ಎಂದು ಹೆಸರಿಸಿದೆ.

ಇಂಗ್ಲೆಂಡ್‌ನ ಜೋಸ್ ಬಟ್ಲರ್, ಸ್ಯಾಮ್ ಕರನ್ ಹಾಗೂ ಕೌಂಟಿ ಕ್ರಿಕೆಟ್ ಚಾಂಪಿಯನ್‌ಶಿಪ್ ವಿಜೇತ ತಂಡದ ನಾಯಕ ರೋರಿ ಬರ್ನ್ಸ್ ಹಾಗೂ ಇಂಗ್ಲೆಂಡ್ ಮಹಿಳಾ ತಂಡದ ಆಟಗಾರ್ತಿ ಟ್ಯಾಮ್ಮಿ ಬೇವೌಂಟ್ ಅವರೊಂದಿಗೆ ವಿಸ್ಡನ್ ವರ್ಷದ ಐವರು ಕ್ರಿಕೆಟಿಗರ ಪಟ್ಟಿಯಲ್ಲಿ 30 ವರ್ಷದ ಕೊಹ್ಲಿ, ಸ್ಥಾನ ಪಡೆದಿದ್ದಾರೆ.

2014ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತದ ಪರ ಕೊಹ್ಲಿ 134 ರನ್ ಗಳಿಸಿದ್ದರು. ಆದರೆ ಕಳೆದ ವರ್ಷ ನಡೆದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 59ರ ಸರಾಸರಿಯಲ್ಲಿ ಭರ್ಜರಿ 593 ರನ್ ಗಳಿಸುವ ಮೂಲಕ ವಿಸ್ಡನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

‘‘2014ರ ಟೆಸ್ಟ್ ಸರಣಿಯನ್ನು ಭಾರತ ಕಳೆದುಕೊಂಡರೂ ವಿರಾಟ್ ಕೊಹ್ಲಿ ತಮ್ಮ ಪ್ರದರ್ಶನದಿಂದ ಗಮನಸೆಳೆದಿದ್ದರು. ಟೆಸ್ಟ್ ನಲ್ಲಿ ಅದರಲ್ಲೂ ವಿಶೇಷವಾಗಿ ಇಂಗ್ಲೆಂಡ್ ನೆಲದಲ್ಲಿ ಅವರು ತೋರಿದ ಪ್ರದರ್ಶನ ಅದ್ವಿತೀಯ’’ ಎಂದು ವಿಸ್ಡನ್ ಪತ್ರಿಕೆಯ ಸಂಪಾದಕ ಲಾರೆನ್ಸ್ ಬೂಥ್ ಹೇಳಿದ್ದಾರೆ. 2018ರ ವರ್ಷದಲ್ಲಿ ಎಲ್ಲ ಅಂತರ್‌ರಾಷ್ಟ್ರೀಯ ವಿಭಾಗಗಳಲ್ಲಿ 11 ಶತಕಗಳೊಂದಿಗೆ 68.37ರ ಸರಾಸರಿಯಲ್ಲಿ 2,735 ರನ್ ಗಳಿಸಿದ್ದ ಹಿನ್ನೆಲೆಯಲ್ಲಿ ವಿರಾಟ್, ಜನವರಿಯಲ್ಲಿ ಐಸಿಸಿ ಕ್ರಿಕೆಟಿಗ ಹಾಗೂ ಟೆಸ್ಟ್ ಹಾಗೂ ಏಕದಿನ ಅಂತರ್‌ರಾಷ್ಟ್ರೀಯ ಆಟಗಾರ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಸೀಮಿತ ಓವರ್‌ಗಳ ಪಂದ್ಯಗಳಲ್ಲಿ 1,291 ರನ್ ಗಳಿಸಿದ್ದ ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮತಿ ಮಂಧಾನಾ ಮಹಿಳಾ ವಿಭಾಗದಲ್ಲಿ ‘‘ವಿಶ್ವದ ಪ್ರಮುಖ ಕ್ರಿಕೆಟ್ ಆಟಗಾರ್ತಿ’’ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಸತತ ಎರಡನೇ ವರ್ಷ ‘‘ವಿಶ್ವದ ಪ್ರಮುಖ ಟಿ20 ಕ್ರಿಕೆಟಿಗ’’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News