ಕಾಸರಗೋಡಿನಲ್ಲಿ ಈ ಬಾರಿಯೂ ಎಡರಂಗಕ್ಕೆ ಗೆಲುವು

Update: 2019-04-11 04:56 GMT

ಕಾಸರಗೋಡು ಲೋಕಸಭಾ ಕ್ಷೇತ್ರ ಹಲವು ಕಾರಣಗಳಿಗೆ ಕೇರಳದ ಪ್ರಮುಖ ಕ್ಷೇತ್ರಗಳಲ್ಲೊಂದು. ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿರುವ ಈ ಕ್ಷೇತ್ರ ಎ.ಕೆ.ಗೋಪಾಲನ್, ರಾಮಣ್ಣ ರೈ, ಟಿ.ಗೋವಿಂದನ್‌ರಂತಹ ದಿಗ್ಗಜ ಕಮ್ಯುನಿಸ್ಟ್ ನೇತಾರರನ್ನು ಸಂಸತ್ತಿಗೆ ಕಳಿಸಿದೆ. ಕಳೆದ ಮೂರು ದಶಕಗಳಿಂದ ಎಡರಂಗದ ಭದ್ರಕೋಟೆಯಾಗಿದೆ.ಪಿ.ಕರುಣಾಕರನ್ ಕಳೆದ ಮೂರು ಅವಧಿಗೆ ಇಲ್ಲಿಂದ ಎಲ್‌ಡಿಎಫ್ (ಎಡ ಪ್ರಜಾಸತ್ತಾತ್ಮಕ ರಂಗ )ನಿಂದ ಆಯ್ಕೆಯಾಗಿದ್ದರು. ಈಗ ಸಿಪಿಎಂ ಹಿರಿಯ ನಾಯಕ ಕೆ.ಪಿ.ಸತೀಶ್ಚಂದ್ರನ್‌ರನ್ನು ಎಲ್‌ಡಿಎಫ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಎಸ್‌ಎಫ್‌ಐ ಮೂಲಕ ವಿದ್ಯಾರ್ಥಿ ದೆಸೆಯಿಂದಲೆ ಎಡ ರಾಜಕೀಯದಲ್ಲಿ ಪಳಗಿ ಬಂದಿರುವ ಸತೀಶ್ಚಂದ್ರನ್ ಡಿವೈಎಫ್‌ಐ ಹಾಗೂ ಸಿಪಿಎಂನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ತಳಮಟ್ಟದಿಂದ ಬೆಳೆದು ನಾಯಕರಾದವರು. ಎರಡು ಬಾರಿ ತ್ರಿಕರಿಪ್ಪುರ ಕ್ಷೇತ್ರದ ಶಾಸಕರಾಗಿ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ಮಾಡುವವರು ಎಂಬ ಹೆಸರು ಮಾಡಿದವರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಸತೀಶ್ಚಂದ್ರನ್ ಈಗ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಜೊತೆ ‘ವಾರ್ತಾಭಾರತಿ’ ನಡೆಸಿದ ಮಾತುಕತೆ ಇಲ್ಲಿದೆ...

►ರಾಷ್ಟ್ರೀಯ ವಿಷಯಗಳಲ್ಲದೆ ಕಾಸರಗೋಡು ಕ್ಷೇತ್ರದ ಜನರಿಗೆ ನೀಡುವ ಆಶ್ವಾಸನೆಗಳೇನು

ನಾನು ಈ ವಿಷಯದಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ಕ್ಷೇತ್ರದಲ್ಲಿ ಪ್ರತಿಯೊಂದು ವಿಷಯದಲ್ಲೂ ಅಭಿವೃದ್ಧಿಗೆ ನಾನು ಶಕ್ತಿಮೀರಿ ಶ್ರಮಿಸುತ್ತೇನೆ. ಕೇಂದ್ರದಿಂದ ಗರಿಷ್ಠ ಕೆಲಸ ಮಾಡಿಸುತ್ತೇನೆ. ಈ ವಿಷಯದಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಸಹಿತ ಎಲ್ಲ ರಂಗಗಳಲ್ಲೂ ಆಗಬೇಕಿರುವ ಎಲ್ಲ ಕೆಲಸ ಮಾಡಿಸುತ್ತೇನೆ.ಕಾಸರಗೋಡು ಜಿಲ್ಲೆಯಲ್ಲಿರುವ ರೈಲ್ವೆ ನಿಲ್ದಾಣಗಳಲ್ಲಿ ಅತ್ಯುತ್ತಮ ಸೌಲಭ್ಯ ಒದಗಿಸಲು ಶ್ರಮಿಸುತ್ತೇನೆ. ಎಂಡೋಸಲ್ಫಾನ್ ಪೀಡಿತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲೂ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಾನು ಇಲ್ಲಿನ ಜನರ ನೈಜ ಪ್ರತಿನಿಧಿಯಾಗಿ ದಿಲ್ಲಿಗೆ ಹೋಗಲಿದ್ದೇನೆ.

►ಇದೇ ಮೊದಲ ಬಾರಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೀರಿ. ಹೇಗೆ ನಡೆಯುತ್ತಿದೆ ಪ್ರಚಾರ?

ನೋಡಿ. ನಾನು ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಬಂದವನು. ಈ ನಡುವೆ ಪಕ್ಷ ಹೇಳಿದಾಗ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಎರಡು ಬಾರಿ ಆಯ್ಕೆಯಾಗಿ ಯಶಸ್ವಿಯಾಗಿ ಕೆಲಸ ಮಾಡಿದ್ದೇನೆ. ಮಾಜಿ ಮುಖ್ಯಮಂತ್ರಿ ಇ.ಕೆ.ನಾಯನಾರ್ ಪ್ರತಿನಿಧಿಸಿದ್ದ ಕ್ಷೇತ್ರ ಅದು. ಇನ್ನು ಚುನಾವಣೆ ಎಲ್ಲವೂ ಒಂದೇ ರೀತಿ. ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ವಿಷಯಗಳು ಚರ್ಚೆಯಾದರೆ ಲೋಕಸಭಾ ಚುನಾವಣಾ ಕಣದಲ್ಲಿ ರಾಷ್ಟ್ರೀಯ ಮಹತ್ವದ ವಿಷಯಗಳು ಪ್ರಾಮುಖ್ಯತೆ ಪಡೆಯುತ್ತವೆ. ಈ ಕ್ಷೇತ್ರದ ಪ್ರತಿಯೊಂದು ಪ್ರದೇಶ ಹಾಗೂ ಜನರು ನನಗೆ ಚಿರಪರಿಚಿತ. ಇಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಿವೆ. ನಮ್ಮ ಪ್ರಚಾರ ಬಹಳ ಚೆನ್ನಾಗಿ ನಡೆಯುತ್ತಿದೆ. ಮತದಾರರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕಳೆದ ಮೂರು ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಎಡರಂಗದ ಗೆಲುವಿನ ಅಂತರ ಕಡಿಮೆಯಾಗುತ್ತಿದೆ.

►ಕಳೆದ ಬಾರಿ ಕೇವಲ ಏಳು ಸಾವಿರದಷ್ಟು ಮತಗಳಿಂದ ಎಲ್‌ಡಿಎಫ್ ಇಲ್ಲಿ ಗೆದ್ದಿದೆ. ಹಾಗಾಗಿ ಈ ಬಾರಿ ಕ್ಷೇತ್ರ ಉಳಿಸಿಕೊಳ್ಳುವುದು ಕಷ್ಟವಾಗದೆ?

ಇಲ್ಲವೇ ಇಲ್ಲ. 2014ರ ಸನ್ನಿವೇಶವೇ ಬೇರೆ ಈಗಿನ ಪರಿಸ್ಥಿತಿಯೇ ಬೇರೆ. ಆಗ ಎಲ್ಲ ಪ್ರಚಾರ ಮೋದಿ ಕೇಂದ್ರಿತವಾಗಿ ನಡೆಯಿತು. ನಿಜವಾದ ವಿಷಯಗಳು ಚರ್ಚೆಗೆ ಬರಲಿಲ್ಲ. ಆದರೂ ಎಲ್ಲ ಪ್ರತಿಕೂಲ ಪ್ರಚಾರಗಳನ್ನು ಮೆಟ್ಟಿನಿಂತು ನಾವು ಗೆದ್ದೆವು. ಈ ಬಾರಿ ಹಾಗಲ್ಲ. ಎಲ್ಲರಿಗೂ ಮೋದಿಯ ಅಸಲಿಯತ್ತು ಏನು ಎಂದು ಗೊತ್ತಾಗಿದೆ. ಕೇಂದ್ರದ ವೈಫಲ್ಯ ಜನರ ಮುಂದಿದೆ. ರಾಜ್ಯ ಎಲ್‌ಡಿಎಫ್ ಸರಕಾರದ ಸಾಧನೆಗಳು ನಮಗೆ ವರವಾಗಿವೆ. ಆಗ ಯುಡಿಎಫ್ (ಸಂಯುಕ್ತ ಪ್ರಜಾಸತ್ತಾತ್ಮಕ ರಂಗ) ಜೊತೆಗಿದ್ದ ಲೋಕತಾಂತ್ರಿಕ ಜನತಾದಳ ಈಗ ನಮ್ಮ ಜೊತೆಗಿದೆ. ಎಡರಂಗದ ಪರ ವಾತಾವರಣ ಸೃಷ್ಟಿಯಾಗಿದೆ. ಈ ಬಾರಿ ನಮಗೆ ಗೆಲುವು ನಿಶ್ಚಿತ.

►ಮೂರು ಬಾರಿಯ ಸಂಸದರನ್ನು ಎಲ್‌ಡಿಎಫ್ ಈ ಬಾರಿ ಬದಲಾಯಿಸಲು ಸೋಲುವ ಭಯ ಕಾರಣ ಎಂದು ಹೇಳಲಾಗುತ್ತಿದೆ...

ಅಂತಹ ಯಾವ ಕಾರಣವೂ ಇಲ್ಲ. ಪಿ.ಕರುಣಾಕರನ್ ಸಂಸದರಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅವರಿಗೆ ಕ್ಷೇತ್ರದಲ್ಲಿ ಜನಪ್ರಿಯತೆ ಇದೆ. ಮೂರು ಬಾರಿ ಅವಕಾಶ ನೀಡಿದ್ದರಿಂದ ಈ ಬಾರಿ ಪಕ್ಷ ಬದಲಾವಣೆ ಮಾಡಿದೆ. ಇದರಲ್ಲಿ ಚುನಾವಣಾ ಫಲಿತಾಂಶದ ಲೆಕ್ಕಾಚಾರ ಇಲ್ಲ.

►ಕಾಸರಗೋಡಿನಲ್ಲಿ ಯುಡಿಎಫ್ ಗೆಲ್ಲಲಿದೆ ಎಂದು ಪ್ರಮುಖ ಮಲಯಾಳಂ ಪತ್ರಿಕೆಯೊಂದು ಇವತ್ತು ಸಮೀಕ್ಷೆ ಪ್ರಕಟಿಸಿದೆ..

ಅದು ಪಾವತಿ ಸುದ್ದಿಯ ಭಾಗವಾಗಿರಬಹುದು. ವಾಸ್ತವಕ್ಕೂ ಅದಕ್ಕೂ ಸಂಬಂಧವಿಲ್ಲ. ಇಂದಿನ ‘ದಿ ಹಿಂದೂ’ ಪತ್ರಿಕೆ ನೋಡಿ. ಅದರಲ್ಲಿರುವ ಅಂದಾಜು ಬಹುತೇಕ ಸರಿಯಾಗಿದೆ. ಮಲಯಾಳ ಮನೋರಮಾ ಕೂಡ ಬಹುತೇಕ ಸರಿಯಾದ ಸಮೀಕ್ಷೆ ನೀಡಿದೆ. ಇಲ್ಲಿ ಈ ಬಾರಿ ಯುಡಿಎಫ್ ಮತಗಳು ಕಡಿಮೆಯಾಗಲಿವೆ. ಹಲವೆಡೆ ಕಾಂಗ್ರೆಸ್ ಮತಗಳು ಬಿಜೆಪಿಗೆ ಹೋಗಲಿವೆ. ನಾವು ಗೆಲ್ಲುತ್ತೇವೆ. ಅದರಲ್ಲಿ ಸಂಶಯ ಬೇಡ.

ವಾಭಾ: ಈ ಬಾರಿ ನಿಮಗೆ ಏಕೆ ಜನರು ಮತ ನೀಡಬೇಕು?

ನೋಡಿ, ಈಗ ಎಲ್ಲಕ್ಕಿಂತ ಬಹಳ ಮುಖ್ಯ ರಾಷ್ಟ್ರೀಯ ಪರಿಸ್ಥಿತಿ. ಇಲ್ಲಿ ಬಿಜೆಪಿಯನ್ನು ಸೋಲಿಸುವುದು ಎಲ್ಲಕ್ಕಿಂತ ಮುಖ್ಯ. ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಪ್ರತಿರೋಧ ಒಡ್ಡುವಲ್ಲಿ ಯಾರು ಹೆಚ್ಚು ಪರಿಣಾಮಕಾರಿ ಎಂಬುದನ್ನು ಜನರು ನೋಡುತ್ತಾರೆ. ಈ ವಿಷಯದಲ್ಲಿ ಎಡರಂಗದ ಪ್ರಾಮಾಣಿಕತೆ ಬಗ್ಗೆ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಹಾಗಾಗಿ ಜನರು ನಮಗೆ ಮತ ನೀಡುತ್ತಾರೆ. ಇದರ ಜೊತೆಗೆ ನಮ್ಮ ಎಲ್‌ಡಿಎಫ್ ಸರಕಾರ ಮಾಡಿರುವ ಸಾಧ ನೆಗಳು ನಮಗೆ ಶ್ರೀರಕ್ಷೆ ಯಾಗಲಿವೆ. ಅದಕ್ಕಾಗಿ ಜನರು ನಮಗೆ ಆಶೀರ್ವದಿಸುತ್ತಾರೆ. ಇನ್ನು ಈ ಕ್ಷೇತ್ರದ ಜನರು ನನ್ನನ್ನು, ನನ್ನ ಕೆಲಸವನ್ನು ಹತ್ತಿರದಿಂದ ನೋಡಿದ್ದಾರೆ. ಶಾಸಕನಾಗಿ ನಾನು ಸದಾ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಹಾಗಾಗಿ ನನಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ.

►ರಾಜ್ಯದಲ್ಲಿ ಎಲ್‌ಡಿಎಫ್ ಸರಕಾರವಿದ್ದರೂ ಈ ಬಾರಿ ಯುಡಿಎಫ್ ಕೈ ಮೇಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ...

ಇದೆಲ್ಲ ಕೆಲವು ಮಾಧ್ಯಮಗಳು ಹರಡುವ ಸುಳ್ಳು ಸುದ್ದಿಗಳು. ಈ ಬಾರಿ ನಮಗೆ ಇಡೀ ರಾಜ್ಯದಲ್ಲಿ ಪೂರಕ ವಾತಾವರಣವಿದೆ. ಯುಡಿಎಫ್ ಭದ್ರಕೋಟೆ ಎಂದೇ ಹೇಳುವ ಮಲಪ್ಪುರಂನಲ್ಲಿ ಕೂಡ ಈ ಬಾರಿ ನಮಗೆ ಗೆಲುವಿನ ಸಾಧ್ಯತೆ ಇದೆ. ರಾಜ್ಯ ಸರಕಾರದ ಬಗ್ಗೆ ಜನರಿಗೆ ಬಹಳ ತೃಪ್ತಿಯಿದೆ. ಇಎಂಎಸ್ ಅವರು ಯಾವಾಗಲೂ ಹೇಳುತ್ತಿದ್ದರು. ರಾಜಕೀಯದಲ್ಲಿ 2+2 ಅಂದರೆ ನಾಲ್ಕಲ್ಲ. ಅದು ಮೂರೂ ಆಗಬಹುದು, ಐದು, ಆರೂ ಆಗಬಹುದು ಎಂದು. ಈ ಬಾರಿಯೂ ಹಾಗೆ ಆಗುತ್ತದೆ ನೋಡಿ. 2+2 ಅಂದರೆ ಈ ಬಾರಿ ಐದು ಅಥವಾ ಆರು ಆಗಲಿದೆ. 20ರಲ್ಲಿ ಗರಿಷ್ಠ ಸ್ಥಾನ ನಾವು ಗೆಲ್ಲುತ್ತೇವೆ.

►ಕಳೆದ ಬಾರಿ ಮಂಜೇಶ್ವರದಲ್ಲಿ ಬಿಜೆಪಿ ಕೆಲವೇ ಮತಗಳ ಅಂತರದಿಂದ ಸೋತಿದೆ. ಬಿಜೆಪಿಯ ಕನ್ನಡಿಗ ಅಭ್ಯರ್ಥಿ ಕನ್ನಡಿಗರ ಮತ ಸೆಳೆಯುತ್ತಾರೆ ಎಂಬ ಭಾವನೆಯಿದೆ...

ಇಲ್ಲ. ಬಿಜೆಪಿ ಅಭ್ಯರ್ಥಿ ಕನ್ನಡಿಗರ ಮತ ಕೇಳುತ್ತಿಲ್ಲ. ಅವರು ಹಿಂದುತ್ವದ ಆಧಾರದಲ್ಲಿ ಮತ ಕೇಳುತ್ತಿದ್ದಾರೆ. ಅವರು ಜನರನ್ನು ದಾರಿತಪ್ಪಿಸುವ ರಾಜಕೀಯ ಮಾಡುತ್ತಿದ್ದಾರೆ. ಅದರಲ್ಲಿ ಅವರು ವಿಫಲರಾಗುತ್ತಾರೆ. ಮಂಜೇಶ್ವರದಲ್ಲಿ ಈ ಬಾರಿ ಎಲ್ಲ ವರ್ಗಗಳ ಜನರು ನಮಗೆ ಮತ ಹಾಕುವಂತೆ ಪ್ರಯತ್ನಿಸುತ್ತಿದ್ದೇವೆ. ಅವರು ಫಲಿತಾಂಶದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.

►ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತ ಗಣನೀಯ ಸಂಖ್ಯೆಯಲ್ಲಿದೆ. ಅವರು ಈ ಬಾರಿ ಯಾವ ಕಡೆ ವಾಲಲಿದ್ದಾರೆ ?

ಕೇರಳದ ಅದರಲ್ಲೂ ವಿಶೇಷವಾಗಿ ಈ ಭಾಗದ ಅಲ್ಪಸಂಖ್ಯಾತರು ಬಿಜೆಪಿ ವಿರುದ್ಧ ಇಲ್ಲಿಂದ ಅತ್ಯಂತ ಪ್ರಬಲ ರಾಜಕೀಯ ಶಕ್ತಿ ಎಡರಂಗ ಎಂಬುದನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ. ಲೋಕಸಭೆಯ ಒಳಗೆ ಹಾಗು ಹೊರಗೆ ಬಿಜೆಪಿ, ಸಂಘಪರಿವಾರವನ್ನು ಸಮರ್ಥವಾಗಿ, ಪ್ರಖರವಾಗಿ ಎದುರಿಸುವ ನೈತಿಕತೆ ಇರುವುದು ಎಡಪಕ್ಷಗಳಿಗೇ ಹೊರತು ಕಾಂಗ್ರೆಸ್‌ಗೆಅಲ್ಲ. ಹಲವು ಸೂಕ್ಷ್ಮ ವಿಷಯಗಳಲ್ಲಿ ಇದು ಮತ್ತೆ ಮತ್ತೆ ಸಾಬೀತಾಗಿದೆ. ಕಾಂಗ್ರೆಸ್ ಶಾಸಕರು, ಸಂಸದರು ಬಹುದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಸೇರಿರುವ ಉದಾಹರಣೆಗಳು ನಮ್ಮ ಮುಂದಿವೆ. ಹಾಗಾಗಿ ಅಲ್ಪಸಂಖ್ಯಾತರು ಈ ಬಾರಿ ಮತವಿಭಜನೆಗೆ ಯಾವುದೇ ಅವಕಾಶ ನೀಡುವುದಿಲ್ಲ. ಅವರ ಬೆಂಬಲ ನಮಗೆ ಸಿಗಲಿದೆ.

►ಈ ಕ್ಷೇತ್ರದಲ್ಲಿರುವ ಕನ್ನಡಿಗರಿಗೆ ನಿಮ್ಮ ಆಶ್ವಾಸನೆಗಳೇನು?

ಕನ್ನಡಿಗರಿಗೆ ತುಳುವರಿಗೆ ಎಡರಂಗ ಯಾವತ್ತೂ ಆದ್ಯತೆ ನೀಡುತ್ತಾ ಬಂದಿದೆ. ತುಳು ಅಕಾಡಮಿ ಮಾಡಿದ್ದು ನಮ್ಮ ಸರಕಾರ. ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ನಿರ್ಮಾಣದಲ್ಲಿ ನಮ್ಮ ಸರಕಾರದ್ದು ಪ್ರಮುಖ ಪಾತ್ರ. ಯಕ್ಷಗಾನ ಕಲೆಗೂ ವಿಶೇಷ ಪ್ರೋತ್ಸಾಹ ನೀಡುವಲ್ಲಿ ನಮ್ಮ ಪಕ್ಷ ಮುಂದಿದೆ. ಇನ್ನು ಮುಂದೆಯೂ ಕನ್ನಡಿಗರ ದಿನನಿತ್ಯದ ಸಮಸ್ಯೆಗಳಿಗೆ ಸ್ಪಂದನೆ ಹಾಗೂ ಕನ್ನಡ, ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಪೂರ್ಣ ಸಹಕಾರ ನಾವು ನೀಡಲಿದ್ದೇವೆ.

Writer - ಸಂದರ್ಶನ: ಅಫ್ನಾನ್

contributor

Editor - ಸಂದರ್ಶನ: ಅಫ್ನಾನ್

contributor

Similar News