×
Ad

ಬಿಜೆಪಿ ವಿರುದ್ಧ ಮತ; ಕಟ್ಟಡ ಕಾರ್ಮಿಕ ಸಂಘಗಳ ನಿರ್ಧಾರ

Update: 2019-04-11 18:31 IST

ಬೆಂಗಳೂರು, ಎ.11: ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ನೀತಿ ಜಾರಿಗೊಳಿಸಿ ಕಟ್ಟಡ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿಸಿದ ಬಿಜೆಪಿ ಪಕ್ಷದ ವಿರುದ್ಧ ಮತ ಚಲಾಯಿಸಲು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನಿರ್ಧರಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಎನ್.ವೀರಸ್ವಾಮಿ ಮಾತನಾಡಿ, ಮೋದಿ ನೇತೃತ್ವದ ಸರಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಕಾನೂನು 1996 ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸೆಸ್ ಕಾನೂನು 1996 ಇವುಗಳನ್ನು ರದ್ದುಗೊಳಿಸಲು ಮುಂದಾಗಿದ್ದಾರೆ. ವೃತ್ತಿ ಆಧಾರಿತ ಸುರಕ್ಷೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಕುರಿತ ಸಂಹಿತೆ ಸೇರಿದಂತೆ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಅನುಕೂಲವಾಗಿರುವಂತಹ ಕಾನೂನುಗಳನ್ನು ರದ್ದುಗೊಳಿಸಲು ಕೇಂದ್ರ ಸರಕಾರದ ಮುಂದಾಗಿದೆ. ಹೀಗಾಗಿ ಈ ಬಾರಿ ಬಿಜೆಪಿ ಪಕ್ಷ ವಿರೋಧಿಸಿ ಮತ ಚಲಾಯಿಸಲು ಕಟ್ಟಡ ಕಾರ್ಮಿಕರು ತೀರ್ಮಾನಿಸಿದ್ದಾರೆ ಎಂದರು.

ಕೇಂದ್ರದಲ್ಲಿ ಪ್ರಧಾನಮಂತ್ರಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಹೊಸ ಸಲಹಾ ಮಂಡಳಿಗಳನ್ನು ರಚಿಸಲು ಕೇಂದ್ರ ಸರಕಾರದ ಮುಂದಾಗಿತ್ತು. ಈ ಮಂಡಳಿಗಳಲ್ಲಿ ಕಾರ್ಮಿಕರು ಸಚಿವರು ಉಪಾಧ್ಯಕ್ಷರಾಗಿರಲಿದ್ದಾರೆ. ಅವು ಹಿಂದಿನಂತೆ ತೀರ್ಮಾನ ಕೈಗೊಳ್ಳುವ ಮಂಡಳಿಗಳಾಗಿರದೆ ಕೇವಲ ಸಲಹಾ ಮಂಡಳಿ ಗಳಾಗಿರುತ್ತವೆ. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಬ್ಬರೂ ಹೊಸ ರಾಜ್ಯ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರು ನೋಂದಾಯಿಸಿಕೊಳ್ಳಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ. ಆದರೆ ಈ ನೋಂದಣಿ ಕಡ್ಡಾಯವಿಲ್ಲ. ಅಸಂಘಟಿತ ವಲಯದ ಕಾರ್ಮಿಕರು 14ನೇ ವಯಸ್ಸಿನಿಂದ ನೋಂದಣಿ ಮಾಡಬಹುದು. ಇದರಿಂದ ಬಾಲಕಾರ್ಮಿಕ ಪದ್ದತಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News