ಬಿಜೆಪಿ ಸೋಲಿನ ಭೀತಿಯಿಂದ ಐಟಿ ದಾಳಿ: ರಿಝ್ವಾನ್ ಅರ್ಶದ್
ಬೆಂಗಳೂರು, ಎ.11: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಭೀತಿ ಎದುರಿಸುತ್ತಿದೆ. ಆದುದರಿಂದಲೇ, ರಾಜಕೀಯ ಪ್ರೇರಿತವಾಗಿ ಈ ಆದಾಯ ತೆರಿಗೆ ಇಲಾಖೆಯ ದಾಳಿ ನಡೆಸಲಾಗಿದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಿಝ್ವಾನ್ ಅರ್ಶದ್ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಚುನಾವಣಾ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಅಲ್ಲದೆ, ಸುಮಾರು 15-20 ಜನರ ಮೇಲೆ ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಪೈಕಿ 8-10 ಜನರ ಮುಖ ಪರಿಚಯವು ನನಗಿಲ್ಲ ಎಂದರು.
ನಾನು ಕಾಂಗ್ರೆಸ್-ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ. ಬಿಜೆಪಿಯವರದ್ದು ಐಟಿ ಇಲಾಖೆಯ ಜೊತೆ ಮೈತ್ರಿಯಾಗಿದೆ. ನನಗೆ ಪರಿಚಯವೇ ಇಲ್ಲದವರ ಮೇಲೆ ದಾಳಿ ಮಾಡಿ, ನನ್ನ ಬಗ್ಗೆ ವಿಚಾರಿಸುತ್ತಿದ್ದಾರೆ. ಬಿಜೆಪಿಯವರ ಈ ಕುತಂತ್ರದಿಂದ ಅವರಿಗೆ ಲಾಭವಾಗುವುದಿಲ್ಲ. ನಾನು ಹೆದರುವುದಿಲ್ಲ. ನನ್ನ ಬಳಿ ಮುಚ್ಚಿಡಲು ಏನು ಇಲ್ಲ. ನಾನೊಬ್ಬ ಯುವ ಕಾರ್ಯಕರ್ತನಾಗಿ ಮೇಲೆ ಬಂದಿದ್ದೇನೆ ಎಂದು ರಿಝ್ವಾನ್ ಅರ್ಶದ್ ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಐಟಿ ಇಲಾಖೆಯಲ್ಲಿ ರಾಜಕೀಯ ಶಾಖೆ ಏನಾದರೂ ತೆರೆದಿದ್ದಾರೇನೋ ನನಗೆ ಗೊತ್ತಿಲ್ಲ. ನಮ್ಮ ಮೇಲೆ ನಡೆದಿರುವುದು ರಾಜಕೀಯ ಪ್ರೇರಿತವಾದ ದಾಳಿ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ. ಯಾರನ್ನು ಅಧಿಕಾರದಲ್ಲಿ ಕೂರಿಸಬೇಕು, ಯಾರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬುದನ್ನು ಜನ ತೀರ್ಮಾನ ಮಾುತ್ತಾರೆ ಎಂದು ಅವರು ಹೇಳಿದರು.
ಬಿಜೆಪಿ ನಾಯಕರು ನಮ್ಮ ಶಾಸಕರಿಗೆ 10, 20, 50 ಕೋಟಿ ರೂ.ಗಳ ಆಮಿಷವೊಡ್ಡುತ್ತಿರುವ ಕುರಿತು ಪಕ್ಷದ ಪರವಾಗಿ ನಾನೇ ಐಟಿ ಇಲಾಖೆಗೆ ಆಡಿಯೋ ರೆಕಾರ್ಡಿಂಗ್, ಯಾವ ನಂಬರ್‌ಗಳಿಂದ ಕರೆ ಬಂದಿದೆ, ಎಷ್ಟು ಹೊತ್ತಿಗೆ ಬಂದಿದೆ ಎಂಬ ಎಲ್ಲ ವಿವರಗಳನ್ನು ಒಳಗೊಂಡಂತೆ ಮೂರು ದೂರುಗಳನ್ನು ನೀಡಿದ್ದೇನೆ. ಯಾಕೆ ಈವರೆಗೆ ಒಂದೇ ಒಂದು ದೂರಿನ ಕುರಿತು ತನಿಖೆ ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ಕಾಂಗ್ರೆಸ್, ಜೆಡಿಎಸ್ ನಾಯಕರ ಮೇಲೆ ಐಟಿ ದಾಳಿ ನಡೆದಿತ್ತು. ವಿರೋಧ ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕೆ ಕಡಿವಾಣ ಹಾಕಲು, ನಮಗೆ ಮಾನಸಿಕವಾಗಿ ಹಿಂಸೆ ನೀಡಲು, ನಾವು ಮುಕ್ತವಾಗಿ ಪ್ರಚಾರ ನಡೆಸದಂತೆ ತಡೆಯಲು ಐಟಿ ಇಲಾಖೆಯನ್ನು ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆಲ್ಲ ಜನ ಎ.18ರಂದು ಉತ್ತರ ಕೊಡುತ್ತಾರೆ ಎಂದು ರಿಝ್ವಾನ್ ಅರ್ಶದ್ ಹೇಳಿದರು.
ಬೆಂಗಳೂರು ನಗರದಲ್ಲಿ ಮೂವರು ಬಿಜೆಪಿ ಸಂಸದರಿದ್ದರು. ಕೇಂದ್ರದಲ್ಲಿ ಅವರದೇ ಪಕ್ಷದ ಸರಕಾರ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ಬೆಂಗಳೂರು ನಗರಕ್ಕೆ ಯಾವುದೇ ಹೊಸ ನೆರವು, ಸಹಾಯ, ಯೋಜನೆ ವಿಶೇಷ ಕೊಡುಗೆ ಕೊಡಿಸಲಿಲ್ಲ. ಇವರ ಸಾಧನೆ ಏನು? ಎಂದು ಅವರು ಪ್ರಶ್ನಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೂವರು ಬಿಜೆಪಿ ಸಂಸದರು ಸೇರಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ, ಬೆಂಗಳೂರಿಗೆ 10 ಸಾವಿರ ಕೋಟಿ ರೂ.ವಿಶೇಷ ಅನುದಾನ, ಏಮ್ಸ್, ಐಐಟಿ, ನ್ಯಾಷನಲ್ ಏರೋನಾಟಿಕಲ್ ಯೂನಿವರ್ಸಿಟಿ ಸ್ಥಾಪನೆ, ಬೆಂಗಳೂರು-ದಿಲ್ಲಿ ನಡುವೆ ಬುಲೆಟ್ ಟ್ರೈನ್ ಸಂಚಾರ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಯಾವ ಆಶ್ವಾಸನೆಯೂ ಈಡೇರಿಲ್ಲ ಎಂದು ರಿಝ್ವಾನ್ ಅರ್ಶದ್ ಟೀಕಿಸಿದರು.
ಸದಾನಂದಗೌಡ ರೈಲ್ವೆ ಸಚಿವರಾಗಿದ್ದರು. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್, ಆಡಳಿತ ಪಕ್ಷದ ಸದಸ್ಯರಾಗಿದ್ದರೂ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಬೆಂಗಳೂರಿನ ಎಚ್‌ಎಎಲ್‌ನಿಂದ ರಫೇಲ್ ಡೀಲ್ ಕಿತ್ತು ಅಂಬಾನಿಗೆ ನೀಡಿದಾಗಲೂ ಮೋಹನ್ ಬಾಯಿಬಿಟ್ಟಿಲ್ಲ ಎಂದು ಅವರು ಆರೋಪಿಸಿದರು.
ಬಿಜೆಪಿ ಸಂಸದರು ಬೆಂಗಳೂರಿನ ಅಭಿವೃದ್ಧಿಯ ಪರವಾಗಿ ಕೆಲಸ ಮಾಡಿದ್ದರೆ, ಇಂತಹ ಕೆಲಸ ಮಾಡುವ ಅಗತ್ಯವಿರುತ್ತಿರಲಿಲ್ಲ. ಐಟಿ, ಇಡಿ, ಸಿಬಿಐ ಅನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಸಂಸ್ಥೆಗಳು ಬಿಜೆಪಿಯ ಆದೇಶದ ಮೇಲೆ ಕೆಲಸ ಮಾಡುತ್ತಿವೆ. ಪ್ರಜಾಪ್ರಭುತ್ವ ಯಾವ ರೀತಿ ಉಳಿಯಬೇಕು ಎಂದು ಅವರು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆನೇಕಲ್ ಶಾಸಕ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಮಹೇಂದ್ರ ಜೈನ್, ಎ.ಜೆ.ಅಕ್ರಮ್ ಪಾಷ, ಬಲ್ಜೀತ್ ಸಿಂಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.