ಆರ್ಥಿಕ ಅಸಮತೋಲನ ದೇಶಕ್ಕೆ ಮಾರಕ: ಕೃಷ್ಣಭೈರೇಗೌಡ

Update: 2019-04-11 17:13 GMT

ಬೆಂಗಳೂರು, ಎ.11: ಕೇಂದ್ರದ ಬಿಜೆಪಿ ಸರಕಾರದ ಐದು ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಆದರೆ, ಬಡವರು ಮತ್ತು ದುಡಿಯುವ ವರ್ಗದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂತಹ ಆರ್ಥಿಕ ಅಸಮತೋಲನದ ಬೆಳವಣಿಗೆ ದೇಶಕ್ಕೆ ಒಟ್ಟಾರೆ ಅಭಿವೃದ್ಧಿಗೆ ಮಾರಕ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಅಭಿಪ್ರಾಯಪಟ್ಟರು.

ಗುರುವಾರ ಮಹಾಲಕ್ಷ್ಮಿ ಲೇಔಟ್ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರಕಾರ ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ನಿರ್ಲಕ್ಷ ಮಾಡಿದೆ. ಬದಲಿಗೆ ಶ್ರೀಮಂತರ ಪರವಾಗಿ ಕೆಲಸ ಮಾಡಿದೆ ಎಂದರು.
ಈ ಅವಧಿಯಲ್ಲಿ ದೇಶದ ಶ್ರೀಮಂತರು ಮತ್ತಷ್ಟು ಧನಿಕರಾಗಿದ್ದಾರೆ. ಆದರೆ ದುಡಿಯುವ ವರ್ಗ ಮತ್ತು ಬಡವರ ಆರ್ಥಿಕ ಪರಿಸ್ಥಿತಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂತಹ ಆರ್ಥಿಕ ಬೆಳವಣಿಗೆ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ. ಈ ಪರಿಸ್ಥಿತಿಗೆ ಕೇಂದ್ರದ ಬಿಜೆಪಿ ಸರಕಾರವೇ ಕಾರಣ ಎಂದು ಅವರು ದೂರಿದರು.

ಬೆಲೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಬೆಲೆ ನಿಯಂತ್ರಣ ಮಾಡುವಲ್ಲಿ ಸೋತಿದೆ. ಇದರ ಪರಿಣಾಮ ನೇರವಾಗಿ ಬಡವರ ಬದುಕನ್ನು ಶೋಚನೀಯ ಸ್ಥಿತಿಗೆ ತಳ್ಳಿದೆ. ಶ್ರೀಮಂತರ 3.50 ಲಕ್ಷ ಕೋಟಿ ರೂ.ಸಾಲ ಮನ್ನಾ ಮಾಡಿರುವ ಕೇಂದ್ರ ಸರಕಾರ, ರೈತರ ಸಾಲ ಮನ್ನಾ ವಿಚಾರಕ್ಕೆ ಬಂದರೆ ಅದೊಂದು ಅಶಿಸ್ತಿನ ಕ್ರಮ ಎನ್ನುತ್ತದೆ. ಇದರಿಂದಲೇ ಅವರು ಯಾರ ಪರ ಕೆಲಸ ಮಾಡುತ್ತಾರೆ ಎಂಬುದು ತಿಳಿಯುತ್ತದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಸದಾ ದೇಶಪ್ರೇಮ, ದೇಶದ ಭದ್ರತೆ ಬಗ್ಗೆ ಮಾತನಾಡುವ ಬಿಜೆಪಿ ಪಕ್ಷದವರು ನಮ್ಮನ್ನು ದೇಶದ್ರೋಹಿಗಳಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರಷ್ಟೇ ದೇಶಪ್ರೇಮಿಗಳಾ? ಕಾಂಗ್ರೆಸ್ ಸರಕಾರ ಇದ್ದ ಕಾಲದಲ್ಲಿ ದೇಶಕ್ಕೆ ಭದ್ರತೆ ಇರಲಿಲ್ಲವೇ? ನಾವು ಮಾಡಿರುವ ದೇಶ ದ್ರೋಹವಾದರೂ ಏನು? ಎಂದು ಅವರು ಪ್ರಶ್ನಿಸಿದರು.

ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟರು. ಬಿಜೆಪಿ ನಾಯಕರು ಯಾರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ? ಇವರಿಂದ ನಾವು ದೇಶಪ್ರೇಮ ಕಲಿಯಬೇಕೇ? ಅಣ್ಣ ತಮ್ಮಂದಿರ ನಡುವೆ ದ್ವೇಷ ತಂದಿಡುವ ಇವರು ದೇಶ ಕಟ್ಟುತ್ತಾರಾ? ಎಂದು ಕೃಷ್ಣ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕಪ್ಪುಹಣ ತಂದು ತಲಾ 15 ಲಕ್ಷ ರೂ.ಹಂಚುತ್ತೇವೆ ಎಂದು ಹಸಿ ಸುಳ್ಳು ಹೇಳಿಕೊಂಡೇ ಬಡವರನ್ನು ಶೋಷಿಸಿದ ಇವರ ನಿಜ ಬಣ್ಣ ಏನೆಂದು ತಡವಾಗಿ ಆದರೂ ದೇಶದ ಜನಕ್ಕೆ ಅರ್ಥವಾಗುತ್ತಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಈ ವೇಳೆ ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯ, ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್, ಜೆಡಿಎಸ್ ಮುಖಂಡ ಜವರೇಗೌಡ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News