ಸಿಂಧು, ಸೈನಾ, ಸಮೀರ್ ಕ್ವಾರ್ಟರ್‌ಫೈನಲ್ ಗೆ

Update: 2019-04-12 03:03 GMT

ಸಿಂಗಾಪುರ, ಎ.11: ಪೈಪೋಟಿಯಿಲ್ಲದ ಪಂದ್ಯದಲ್ಲಿ ಗೆದ್ದ ಪಿ.ವಿ.ಸಿಂಧು ಹಾಗೂ ಹೋರಾಟಕಾರಿ ಪಂದ್ಯದಲ್ಲಿ ಜಯಿಸಿದ ಸೈನಾ ನೆಹ್ವಾಲ್ ಗುರುವಾರ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ನಾಲ್ಕನೇ ಶ್ರೇಯಾಂಕದ, ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಸಿಂಧು 39 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ ನಂ.22 ಆಟಗಾರ್ತಿ ಡೆನ್ಮಾರ್ಕ್ ನ ಮಿಯಾ ಬ್ಲಿಚ್‌ಫೆಲ್ಟ್ ಅವರನ್ನು 21-13, 21-19 ಗೇಮ್‌ಗಳಿಂದ ಮಣಿಸಿದರು. ಮಿಯಾ ಇತ್ತೀಚೆಗೆ ನಡೆದ ಸ್ಪೇನ್ ಮಾಸ್ಟರ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು.

ವಿಶ್ವದ ನಂ.6 ಆಟಗಾರ್ತಿ ಸಿಂಧು, ತಮ್ಮ ಮುಂದಿನ ಪಂದ್ಯದಲ್ಲಿ ಚೀನಾದ ಕಾಯ್ ಯಾನ್ಯಾನ್‌ರನ್ನು ಎದುರಿಸಲಿದ್ದಾರೆ. ಇನ್ನು ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಪಡೆದಿರುವ ಭಾರತದ ಇನ್ನೋರ್ವ ಖ್ಯಾತ ಆಟಗಾರ್ತಿ ಸೈನಾ, ಪೈಪೋಟಿಯುತ ಪಂದ್ಯದಲ್ಲಿ ಮಲೇಶ್ಯದ ಪಾರ್ನ್ ಪವೀ ಚೊಚುವಾಂಗ್‌ರನ್ನು 21-16, 18-21, 21-19ರಿಂದ ಮಣಿಸಿದರು. ಆ ಮೂಲಕ ಮಲೇಶ್ಯ ಓಪನ್‌ನ ಪ್ರಥಮ ಸುತ್ತಿನಲ್ಲಿ ಅನುಭವಿಸಿದ ಸೋಲಿನ ಸೇಡು ಇಲ್ಲಿ ತೀರಿಸಿಕೊಂಡರು. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಿಂಧು ತಮ್ಮ ಮುಂದಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಜಪಾನ್‌ನ ನೊರೊಮೊ ಒಕುಹರಾ ಅವರ ಸವಾಲಿಗೆ ಸಜ್ಜಾಗಲಿದ್ದಾರೆ.

ಕಶ್ಯಪ್‌ಗೆ ಸೋಲು, ಶ್ರೀಕಾಂತ್, ಸಮೀರ್ ಜಯಭೇರಿ

ಇತ್ತ ಸೈನಾ ಜಯಗಳಿಸಿದರೆ, ಅತ್ತ ಮತ್ತೊಂದು ಪಂದ್ಯದಲ್ಲಿ ಅವರ ಪತಿ ಪರುಪಳ್ಳಿ ಕಶ್ಯಪ್ ತೀವ್ರ ಹಣಾಹಣಿಯ ಪಂದ್ಯದಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಚೆನ್ ಲಾಂಗ್ ವಿರುದ್ಧ ಮುಗ್ಗರಿಸಿದರು. 2014ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್, 9-21, 21-15, 16-21ರಿಂದ ನಾಲ್ಕನೇ ಶ್ರೇಯಾಂಕದ ಎದುರಾಳಿಗೆ ಮಣಿದರು.

ತಮ್ಮ ಪ್ರಭಾವಿ ಪ್ರದರ್ಶನವನ್ನು ಮುಂದುವರಿಸಿದ ಸಮೀರ್ ವರ್ಮಾ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಚೀನಾದ ಲು ಗುವಾಂಗ್‌ಝು ವಿರುದ್ಧ 21-15, 21-18ರಿಂದ ಪಾರಮ್ಯ ಮೆರೆದರು. ತಮ್ಮ ಮುಂದಿನ ಪಂದ್ಯದಲ್ಲಿ ಸಮೀರ್ ಎರಡನೇ ಶ್ರೇಯಾಂಕದ ತೈಪೇಯ ಚೊ ಟಿಯೆನ್ ಅಥವಾ ಡೆನ್ಮಾರ್ಕ್‌ನ ಜಾನ್ ಒ ಜಾರ್ಜೆನ್ಸೆನ್‌ರನ್ನು ಎದುರಿಸಲಿದ್ದಾರೆ.

ಶ್ರೀಕಾಂತ್ ಕ್ವಾರ್ಟರ್ ಫೈನಲ್‌ಗೆ: ಭಾರತದ ಬ್ಯಾಡ್ಮಿಂಟನ್ ತಾರೆ ಕಿಡಂಬಿ ಶ್ರೀಕಾಂತ್ 355,000 ಡಾಲರ್ ಬಹುಮಾನ ಮೊತ್ತದ ಸಿಂಗಾಪುರ ಓಪನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಗುರುವಾರ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

 ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಶ್ರೀಕಾಂತ್ ಡೆನ್ಮಾರ್ಕ್‌ನ ಹ್ಯಾನ್ಸ್-ಕ್ರಿಸ್ಟಿಯನ್ ಸೊಲ್ಬರ್ಗ್ ವಿಟ್ಟಿಂಗ್‌ಹಸ್‌ರನ್ನು 21-12, 23-21 ಗೇಮ್‌ಗಳ ಅಂತರದಿಂದ ಮಣಿಸಿದರು. ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಜಪಾನ್‌ನ ಕೆಂಟೊ ಮೊಮೊಟಾರನ್ನು ಎದುರಿಸಲಿದ್ದಾರೆ. ಮೊಮೊಟಾ ಭಾರತದ ಇನ್ನೋರ್ವ ಆಟಗಾರ ಎಚ್.ಎಸ್. ಪ್ರಣಯ್‌ರನ್ನು 21-11, 21-11 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News