ಆರ್‌ಸಿಬಿಗೆ ಡೇಲ್ ಸ್ಟೇಯ್ನ್ ಸೇರ್ಪಡೆ?

Update: 2019-04-12 03:04 GMT

ಜೋಹಾನ್ಸ್‌ಬರ್ಗ್, ಎ.11: ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಇನ್ನೂ ಗೆಲುವಿನ ಖಾತೆ ತೆರೆಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದಕ್ಷಿಣ ಆಫ್ರಿಕದ ವೇಗದ ಬೌಲರ್ ಡೇಲ್ ಸ್ಟೇಯ್ನಿ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಉಮೇಶ್ ಯಾದವ್, ಟಿಮ್ ಸೌಥಿ, ಕಾಲಿನ್ ಡಿ ಗ್ರಾಂಡ್‌ಹೊಮ್ ಹಾಗೂ ಮಾರ್ಕಸ್ ಸ್ಟೋನಿಸ್ ಅವರಿದ್ದರೂ ಇನ್ನೂ ಗೆಲುವು ಪ್ರಾಪ್ತಿಯಾಗಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ನಡೆದಿರುವ ಹೊಸ ಬೆಳವಣಿಗೆಯ ಪ್ರಕಾರ, ಆರ್‌ಸಿಬಿ ಅಭಿಮಾನಿಗಳು ವಿಶ್ವಶ್ರೇಷ್ಠ ಬೌಲರ್ ಡೇಲ್ ಸ್ಟೇಯ್ನಾ, ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡದ ಭಾಗವಾಗಲಿದ್ದಾರೆ ಎಂದು ಬಲವಾಗಿ ನಂಬಿದ್ದಾರೆ. ಸ್ಟೇಯ್ನಾ, ಭಾರತದ ವೀಸಾದೊಂದಿಗೆ ತನ್ನ ಪಾಸ್ ಪೋರ್ಟ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಸ್ಟೇಯ್ನ ಹಾಕಿದ ಚಿತ್ರವನ್ನು ನೋಡಿ ಟ್ವಿಟರ್‌ನಲ್ಲಿ ವದಂತಿಗಳ ಮಹಾಪೂರ ಹರಿದುಬಂದಿದೆ. ಈ ವರ್ಷದ ಐಪಿಎಲ್‌ನಲ್ಲಿ ಸ್ಟೇಯ್ನಿ ಆಡಲಿದ್ದಾರೆಂಬ ಮಾತೂ ಕೇಳಿಬಂದಿದೆ.

ಸ್ಟೇಯ್ನ ಆಸ್ಟ್ರೇಲಿಯದ ನಥಾನ್ ಕೌಲ್ಟರ್‌ನೀಲ್ ಸ್ಥಾನದಲ್ಲಿ ಆಡಲಿದ್ದಾರೆ ಎಂದು ಆರ್‌ಸಿಬಿ ಅಭಿಮಾನಿಗಳು ನಂಬಿದ್ದಾರೆ. ಕೌಲ್ಟರ್ ನೀಲ್ ಆರ್‌ಸಿಬಿ ತಂಡದಲ್ಲಿದ್ದರೂ ಈ ವರ್ಷ ಇನ್ನೂ ಯಾವುದೇ ಪಂದ್ಯ ಆಡಿಲ್ಲ.

ಸ್ಟೇಯ್ನ 2008ರಿಂದ 2010ರ ತನಕ ಆರ್‌ಸಿಬಿ ತಂಡದಲ್ಲಿ ಆಡಿದ್ದರು. 2011ರಲ್ಲಿ ಹೈದರಾಬಾದ್ ಮೂಲದ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಆಡಿದ್ದರು. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಲಯನ್ಸ್ ಪರವಾಗಿಯೂ ಆಡಿದ್ದರು.

 ಈ ವರ್ಷದ ಐಪಿಎಲ್‌ನಲ್ಲಿ ಸತತ 6 ಪಂದ್ಯಗಳಲ್ಲಿ ಸೋತಿರುವ ಆರ್‌ಸಿಬಿ ಅತ್ಯಂತ ಕಳಪೆ ಆರಂಭ ಪಡೆದಿದೆ. 2013ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್(ಈಗ ಡೆಲ್ಲಿ ಕ್ಯಾಪಿಟಲ್ಸ್)ಸತತ 6 ಪಂದ್ಯಗಳಲ್ಲಿ ಸೋಲುಂಡಿತ್ತು.

ಕೊಹ್ಲಿ ಕಳೆದ 6 ವರ್ಷಗಳಿಂದ ಆರ್‌ಸಿಬಿ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಸ್ಟಾರ್ ಆಟಗಾರರನ್ನು ಒಳಗೊಂಡಿರುವ ಆರ್‌ಸಿಬಿ ತಂಡ ಕಳಪೆ ಪ್ರದರ್ಶನ ನೀಡುತ್ತಾ ಬಂದಿದೆ. ಐಪಿಎಲ್‌ನಲ್ಲಿ ಇನ್ನಷ್ಟೇ ಪ್ರಶಸ್ತಿ ಜಯಿಸಬೇಕಾಗಿರುವ ಆರ್‌ಸಿಬಿ ಕಳೆದ 2 ಆವೃತ್ತಿಯ ಐಪಿಎಲ್‌ನಲ್ಲಿ ಕ್ರಮವಾಗಿ 6ನೇ ಹಾಗೂ 8ನೇ ಸ್ಥಾನ ಪಡೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News