ಪ್ರತಿಷ್ಠಿತ ಎಡ್ಮಂಡ್ ಹಿಲರಿ ಫೆಲೋಶಿಪ್‌ಗೆ ದೀಪಾ ಮಲಿಕ್ ಆಯ್ಕೆ

Update: 2019-04-12 03:05 GMT

ಹೊಸದಿಲ್ಲಿ, ಎ.11: ರಿಯೊ ಪ್ಯಾರಾಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತೆ ಭಾರತದ ದೀಪಾ ಮಲಿಕ್, 2019ರ ನ್ಯೂಝಿಲ್ಯಾಂಡ್‌ನ ಪ್ರತಿಷ್ಠಿತ ‘ಪ್ರಧಾನ ಮಂತ್ರಿ ಸರ್ ಎಡ್ಮಂಡ್ ಹಿಲರಿ ಫೆಲೋಶಿಪ್’ಗೆ ಆಯ್ಕೆಯಾಗಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನ್ಯೂಝಿಲ್ಯಾಂಡ್ ಹೈಕಮಿಷನ್ ‘‘2019ರ ಸರ್ ಎಡ್ಮಂಡ್ ಹಿಲರಿ ಫೆಲೋಶಿಪ್‌ಗೆ ಭಾರತದ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್‌ರನ್ನು ಆಯ್ಕೆ ಮಾಡುವುದಕ್ಕೆ ನಮಗೆ ಸಂತೋಷವೆನಿಸುತ್ತದೆ’’ ಎಂದು ಹೇಳಿದೆ.

ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ತಂದುಕೊಟ್ಟಿರುವ ಮಹಿಳೆಯಾಗಿರುವ ದೀಪಾ, 58 ರಾಷ್ಟ್ರೀಯ ಹಾಗೂ 23 ಅಂತರ್‌ರಾಷ್ಟ್ರೀಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಾರತ ಸರಕಾರದಿಂದ ಪದ್ಮಶ್ರೀ ಹಾಗೂ ಅರ್ಜುನ ಪ್ರಶಸ್ತಿ ಪಡೆದಿರುವ ಅವರು, ನಾಲ್ಕು ಬಾರಿ ‘ಲಿಮ್ಕಾ ವಿಶ್ವ ದಾಖಲೆ’ಗೆ ಪಾತ್ರವಾಗಿದ್ದಾರೆ.

ನ್ಯೂಝಿಲ್ಯಾಂಡ್‌ನ ಸರ್ ಎಡ್ಮಂಡ್ ಹಿಲರಿ ಫೆಲೋಶಿಪ್ ಸ್ವೀಕರಿಸಲು ದೀಪಾ ನ್ಯೂಝಿಲ್ಯಾಂಡ್‌ಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿಯ ಪ್ರಧಾನಿ ಜೆಸಿಂಡಾ ಅರ್ಡೆನ್‌ರ ಭೇಟಿ, ಅಲ್ಲಿಯ ಪ್ಯಾರಾಲಿಂಪಿಕ್ಸ್ ಕ್ರೀಡಾ ಸಂಸ್ಥೆಗಳೊಂದಿಗೆ ಸರಣಿ ಭೇಟಿ, ಕಿವೀಸ್ ಅಥ್ಲೀಟ್‌ಗಳು, ವಿದ್ಯಾರ್ಥಿಗಳು, ಮಾಧ್ಯಮ ಹಾಗೂ ಭಾರತೀಯ ಅನಿವಾಸಿ ಸಮುದಾಯದೊಂದಿಗೆ ವಿವಿಧ ಕಾರ್ಯಚಟುವಟಿಕೆ ನಡೆಸಲಿದ್ದಾರೆ.

ನ್ಯೂಝಿಲ್ಯಾಂಡ್‌ನ ಈ ಫೆಲೋಶಿಪ್ ನೀಡುವ ಕಾರ್ಯ 2008ರಿಂದ ಆರಂಭವಾಗಿದೆ. ಭಾರತ ಹಾಗೂ ನ್ಯೂಝಿಲ್ಯಾಂಡ್‌ಗಳ ಮಧ್ಯೆ ಆತ್ಮೀಯ ಮಿತೃತ್ವದ ವಿವಿಧ ಅಂಶಗಳನ್ನು ಪ್ರದರ್ಶಿಸುವ ಮೂಲಕ ಉಭಯ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶವನ್ನು ಈ ಫೆಲೋಶಿಪ್ ಕಾರ್ಯ ಹೊಂದಿದೆ.

ಫೆಲೋಶಿಪ್ ಪಡೆದಿರುವ ಕುರಿತು ಪ್ರತಿಕ್ರಿಯಿಸಿರುವ ದೀಪಾ ‘‘ಮಹಿಳಾ ಹಾಗೂ ವಿಕಲಚೇತನರ ಸಬಲೀಕರಣ ಹಾಗೂ ಉಭಯ ದೇಶಗಳಲ್ಲಿನ ‘ಭಿನ್ನ ಸಂಸ್ಕೃತಿಯ ಪಾಲನೆಯ ಸಂದೇಶವನ್ನು ಈ ಫೆಲೋಶಿಪ್ ನನಗೆ ನೀಡಿದೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News